ವಿವಾದಿತ ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಕೇಂದ್ರ ಸರಕಾರ ಮತ್ತು ಆರು ರಾಜ್ಯಗಳ ಜತೆ ಚರ್ಚಿಸಿ ಜಾರಿ ಮಾಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಹೇಳಿದ್ದು, ಒಂದಷ್ಟು ವಿವಾದಗಳಿಗೆ ಕಾರಣವಾಗುವ ಎಲ್ಲ ಸಾಧ್ಯತೆಗಳಿವೆ. ರಾಜ್ಯವು ಹಿಂದಿನಿಂದಲೂ ಪಶ್ಚಿಮ ಘಟ್ಟಗಳ ಕುರಿತಾದ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕಾರ ಮಾಡುತ್ತಲೇ ಬಂದಿದೆ.
ಪರಿಸರ ಸಂರಕ್ಷಣೆ ವಿಚಾರದಲ್ಲಿ ಹೇಳುವುದಾದರೆ ಕಸ್ತೂರಿ ರಂಗನ್ ವರದಿ ಜಾರಿ ಉತ್ತಮವಾದ ಕ್ರಮವೇ ಆಗಿದೆ. ಆದರೆ ಕಾಡಂಚಿನಲ್ಲಿ ವಾಸಿಸುತ್ತಿರುವ ಜನರ ಹಿತದೃಷ್ಟಿಯಿಂದ ಹೇಳುವುದಾದರೆ ಅದು ಅತ್ಯಂತ ಮಾರಕವಾಗಿದೆ. ಹೀಗಾಗಿ ಇಲ್ಲಿ ರಾಜಕೀಯಕ್ಕಿಂತ ಪರಿಸರ ಮತ್ತು ಜನರ ಬದುಕಿನ ನಡುವೆ ಸಮತೋಲನವಾಗಿ ಒಂದು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
ಅಂದ ಹಾಗೆ, ಕಸ್ತೂರಿ ರಂಗನ್ ವರದಿಯನ್ನು ಈಗ ನೀಡಿದ್ದಲ್ಲ. 2011ರ ಆ. 31ರಂದು ಕೇಂದ್ರ ಸರಕಾರಕ್ಕೆ ಕಸ್ತೂರಿ ರಂಗನ್ ಅವರ ನೇತೃ ತ್ವದ ಸಮಿತಿ ವರದಿ ನೀಡಿತ್ತು. ಈ ವರದಿಯನ್ನು ಕೇಂದ್ರ ಸರಕಾರ 2013 ರಲ್ಲಿ ಒಪ್ಪಿಕೊಂಡಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಪಶ್ಚಿಮ ಘಟ್ಟಗಳು ಹಾದು ಹೋಗಿರುವ ರಾಜ್ಯಗಳಲ್ಲಿ ಈ ವರದಿ ಬಗ್ಗೆ ಅಪಸ್ವರಗಳಿವೆ.
ಅಂದರೆ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್ ರಾಜ್ಯಗಳಲ್ಲಿ ಪಶ್ಚಿಮ ಘಟ್ಟ ಹಾದುಹೋಗಿದೆ. ಕರ್ನಾಟಕದಲ್ಲಿ ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಪಶ್ಚಿಮ ಘಟ್ಟಗಳ ಸಾಲು ಇದೆ. ರಾಜ್ಯದಲ್ಲಿಯೇ 1,553ಕ್ಕೂ ಹೆಚ್ಚು ಹಳ್ಳಿಗಳಿವೆ. ವರದಿ ಜಾರಿಯಾದ ಮೇಲೆ ಕ್ವಾರಿ, ಮರಳು ಗಣಿಗಾರಿಕೆ, ಕೈಗಾರಿಕೆಗಳು, ಜಲವಿದ್ಯುತ್ ಯೋಜನೆಗಳು, ಪವನ ವಿದ್ಯುತ್ ಯೋಜನೆ ಸೇರಿದಂತೆ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಅಷ್ಟೇ ಅಲ್ಲ ಸೀಮೆಂಟ್, ಕಲ್ಲು, ರಾಸಾಯನಿಕ ಬಳಕೆ, ಜನವಸತಿ ನಿರ್ಮಾಣಕ್ಕೂ ನಿಷೇಧ ವಿಧಿಸಬೇಕು ಎಂಬ ಶಿಫಾರಸು ಇದೆ.
ಇದೆಲ್ಲದಕ್ಕಿಂತ ಪ್ರಮುಖವಾಗಿ ಇಡೀ ಪಶ್ಚಿಮ ಘಟ್ಟ ಪ್ರದೇಶವು ರಾಜ್ಯಗಳ ಹಿಡಿತದಿಂದ ಕೇಂದ್ರ ಸರಕಾರದ ಹಿಡಿತಕ್ಕೆ ಹೋಗಲಿದೆ. ಇಲ್ಲಿನ ಜನರನ್ನು ಒಕ್ಕಲೆಬ್ಬಿಸಬೇಕಾಗುತ್ತದೆ. ಈಗಾಗಲೇ ಇರುವ ಕೈಗಾರಿಕೆಗಳನ್ನೂ 5 ವರ್ಷಗಳಲ್ಲಿ ಮುಚ್ಚಬೇಕು ಎಂಬ ಅಂಶವೂ ಇದೆ.
ಸದ್ಯ ಕೇರಳ ರಾಜ್ಯ ಕಸ್ತೂರಿ ರಂಗನ್ ವರದಿಗೆ ತೀವ್ರವಾಗಿ ವಿರೋಧಿಸಿದೆ. ಹೀಗಾಗಿ ಕೇಂದ್ರ ಸರಕಾರ ಈ ರಾಜ್ಯದ ಬಗ್ಗೆ ಮೃದು ಧೋರಣೆ ತಳೆದಿದೆ. ಇದರ ಜತೆಗೆ ಹಿಂದಿನ ಬಿಜೆಪಿ ಸರಕಾರವೂ ವರದಿಯನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ಈಗಿನ ಸರಕಾರ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ಇಲ್ಲಿನ ತಜ್ಞರು, ಕಾನೂನು ಪಂಡಿತರು, ಬಾಧಿತರ ಸಂಕಷ್ಟಗಳನ್ನು ಆಲಿಸಿ ಕಡೆಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಎಲ್ಲದಕ್ಕಿಂತ ಪ್ರಮುಖವಾಗಿ ಈ ವಿಚಾರದಲ್ಲಿ ತಾರ್ಕಿಕ ಅಂತ್ಯವೊಂದು ಬೇಕಾಗಿದೆ. ಪಶ್ಚಿಮ ಘಟ್ಟಗಳ ಜನತೆ ಇನ್ನೂ ಈ ವರದಿ ಬಗ್ಗೆ ಹೆದರಿಕೆಯಲ್ಲೇ ಬದುಕುತ್ತಿದ್ದು, ಇವರ ಭಯವನ್ನು ನಿವಾರಿಸುವ ನಿಟ್ಟಿನಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಇಲ್ಲಿ ಕಾಡಿಗಾಗಲಿ ಅಥವಾ ಜನರ ಬದುಕಿಗಾಗಲಿ ತೊಂದರೆ ಇಲ್ಲದ ತೀರ್ಮಾನವೊಂದು ಸ್ಪಷ್ಟವಾಗಿ ಬರಬೇಕಾಗಿದೆ.