ಲಾಕ್‌ಡೌನ್ ಸಡಿಲಿಕೆಯಾಗಿದೆ ಎಂದು ಹಿರಿಯ ನಾಗರಿಕರು ಹಿಂದಿನಂತೆ ಎಲ್ಲೆಂದರಲ್ಲಿ ತಮಗೆ ಮನಬಂದಂತೆ ಓಡಾಟ ನಡೆಸುವುದು ಅಥವಾ ಅವರನ್ನು ಕರೆದುಕೊಂಡು ಹೋಗುವುದು ಸಮಂಜಸವಲ್ಲ. ಹಿರಿಯ ನಾಗರಿಕರಲ್ಲಿ ರೋಗ ನಿರೋಧಕ ಶಕ್ತಿ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಹಾಗಾಗಿ ಅವರು ಕೋವಿಡ್-19 ವೈರಸ್‌ನಂತಹ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದುದು ಅನಿವಾರ್ಯ. ವಾಕಿಂಗ್ ಸಹಿತ ವ್ಯಾಯಾಮ ಮಾಡುವಾಗ ಏನು ಮಾಡಬೇಕು? ಕೋವಿಡ್-19 ಹಿನ್ನೆಲೆಯಲ್ಲಿ ಮನೆಯಲ್ಲಿರುವ ಹಿರಿಯ ನಾಗರಿಕರನ್ನು ಹೇಗೆ ನೋಡಿಕೊಳ್ಳಬೇಕು? ಅವರಿಗೆ ರೆಗ್ಯುಲರ್ ಆಗಿ ಮಾಡಬೇಕಾದ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸುವುದು ಹೇಗೆ? ಅನಿವಾರ್ಯವಾಗಿ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗಬೇಕಾದರೆ ಏನೆಲ್ಲ ಮುಂಜಾಗ್ರತೆ ವಹಿಸಬೇಕು? ಮನೆಯಲ್ಲಿ ಕೂಡ ಅವರ ಆರೈಕೆ ಮಾಡುವವರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು? ಈ ಬಗ್ಗೆ ಇಲ್ಲಿದೆ ಕೆಲವು ಮಾಹಿತಿಗಳು:
ಕೋವಿಡ್-19 ಅತೀ ಹೆಚ್ಚು ಸಮಸ್ಯೆಯನ್ನು ತರುವುದು ಹಿರಿಯರು ಮತ್ತು ಸಣ್ಣ ಮಕ್ಕಳಿಗೆ. ಯುವಕರು ಮತ್ತು ಮಧ್ಯವಯಸ್ಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಆದರೆ ಹಿರಿಯರಲ್ಲಿ ಇದು ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಹಾಗಾದರೆ ಅವರ ಕಾಳಜಿ ಹೇಗೆ?
– ಹಿರಿಯ ನಾಗರಿಕರನ್ನು ಹೆಚ್ಚಿನ ಆರೋಗ್ಯ ರಕ್ಷಣ ಕ್ರಮಗಳನ್ನು ಅನುಸರಿಸಿ ಆರೈಕೆ ಮಾಡಬೇಕು. ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ. ಸಂತೆ, ಮಾರುಕಟ್ಟೆ ಸಹಿತ ಜನಸಂದಣಿಯ ಪ್ರದೇಶಗಳಿಗೆ ಕರೆದುಕೊಂಡು ಹೋಗುವುದು ಬೇಡ.
– ಹಿರಿಯ ನಾಗರಿಕರಿಗೆ ತಂಪು ಪದಾರ್ಥ, ತಣ್ಣೀರು ಇತ್ಯಾದಿಗಳನ್ನು ನೀಡದಿರುವ ಮೂಲಕ ಶೀತ, ಕೆಮ್ಮು ಬಾರದಂತೆ ಮುನ್ನೆಚ್ಚರಿಕೆ ವಹಿಸಿ. ಸದಾ ಶುದ್ಧಗಾಳಿ ಸಿಗುವಂತೆ ಕ್ರಮ ಕೈಗೊಂಡು ಉಸಿರಾಟದ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ. ಚೆನ್ನಾಗಿ ಕುದಿಸಿ ತಣಿಸಿದ ನೀರನ್ನೇ ಕುಡಿಯಲು ಕೊಡಿ.
– ಸಾಧ್ಯವಾದಷ್ಟು ಹಿರಿಯ ನಾಗರಿಕರ ಆಸ್ಪತ್ರೆ ಭೇಟಿಯನ್ನು ಕಡಿಮೆ ಮಾಡಿ. ರಕ್ತದೊತ್ತಡ, ಮಧುಮೇಹ ಇತ್ಯಾದಿ ರೆಗ್ಯುಲರ್ ತಪಾಸಣೆಗಳನ್ನು ಅಗತ್ಯ ಮೆಡಿಕಲ್ ಕಿಟ್ ಬಳಸಿ ಮನೆಯಲ್ಲಿಯೇ ಮಾಡಬಹುದು. ತುರ್ತು ಸಂದರ್ಭದಲ್ಲಿ ಮಾತ್ರ ಮುಂಜಾಗ್ರತೆ ವಹಿಸಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ.
– ಇತ್ತೀಚೆಗೆ ವೈದ್ಯರು “ಟೆಲಿಮೆಡಿಸಿನ್’ ಚಿಕಿತ್ಸೆಗೆ ಆದ್ಯತೆ ನೀಡುತ್ತಿದ್ದಾರೆ. ಅಂದರೆ ರೋಗಿಗಳು ಅಥವಾ ಅವರ ಮನೆಯವರು ವೈದ್ಯರಿಗೆ ವೀಡಿಯೋ ಕಾಲ್, ಫೋನ್ ಕಾಲ್, ಇ-ಮೇಲ್, ವಾಟ್ಸ್‌ಆ್ಯಪ್ ಇತ್ಯಾದಿಗಳ ಮೂಲಕ ತಿಳಿಸಬೇಕು. ವೈದ್ಯರು ಮಾಹಿತಿ ಪಡೆದು ಔಷಧಗಳ ಹೆಸರನ್ನು ಸೂಚಿಸುತ್ತಾರೆ.
– ಆಸ್ಪತ್ರೆಗೆ ಭೇಟಿ ಕೊಡುವ ವೇಳೆ ಮಾಸ್ಕ್, ಗ್ಲೌಸ್ ಧರಿಸುವುದು, ಸ್ಯಾನಿಟೈಸರ್ ಬಳಸಿ ಕೈ ಸ್ವತ್ಛಗೊಳಿಸುವುದು, ಸಾಮಾಜಿಕ ಅಂತರ ಕಾಪಾಡುವುದನ್ನು ಮರೆಯದಿರಿ. ಆಸ್ಪತ್ರೆಯಿಂದ ಹಿಂದಿರುಗಿದ ತತ್‌ಕ್ಷಣ ಸೋಪ್ ಹಾಕಿ ಕೈ, ಕಾಲು, ಮುಖ ತೊಳೆದು ಮನೆಯೊಳಗೆ ಬನ್ನಿ. ಬಳಿಕ ಸ್ನಾನ ಮಾಡುವುದು ಉತ್ತಮ.
– ಮನೆಯಲ್ಲಿ ಮಲಗಿದಲ್ಲೇ ಆದವರಿದ್ದರೆ ಅವರ ಆರೈಕೆ ವೇಳೆ ಇನ್ನಷ್ಟು ಎಚ್ಚರ ಅಗತ್ಯ. ಅವರ ಆರೈಕೆ ಮಾಡುವವರು ಮನೆಯಲ್ಲಿ ಕೂಡ ಮಾಸ್ಕ್, ಗ್ಲೌಸ್ ಧರಿಸಬೇಕು. ಅವರ ಬಟ್ಟೆಗಳನ್ನು ಬ್ಯಾಕ್ಟೀರಿಯ ನಿರೋಧಕ ದ್ರಾವಣ ಬಳಸಿ ಶುಚಿಗೊಳಿಸಬೇಕು. ಚಿಕ್ಕ ಮಕ್ಕಳು ಅವರ ಹತ್ತಿರ ತೆರಳದಂತೆ ಎಚ್ಚರ ವಹಿಸಬೇಕು.
ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸ್‌ಆ್ಯಪ್ ಮಾಡಿ- 9148594259