ತೆಲಂಗಾಣ: ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಮುನ್ನ ಅನಸ್ತೇಶಿಯಾ ನೀಡುವಾಗ ಹೃದಯಾಘಾತವುಂಟಾಗಿ 8 ವರ್ಷದ ಬಾಲಕ ಮೃತಪಟ್ಟ ಘಟನೆ ವಾರಂಗಲ್‌ನ ಎಂಜಿಎಂ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.
ವಾರಂಗಲ್ ಜಿಲ್ಲೆಯ ಲಿಂಗಯ್ಯ ತಾಂಡಾದ ಭೂಕ್ಯ ನಿವಾಸಿ, ಶಿವ ಮತ್ತು ಲಲಿತಾ ದಂಪತಿಯ ಕಿರಿಯ ಪುತ್ರ ನಿಹಾನ್ ಮೃತಪಟ್ಟ ದುರ್ದೈವಿ.
ಸೆ.4ರಂದು ನಡೆದ ಅಪಘಾತದಲ್ಲಿ ನಿಹಾನ್ ಗಂಭೀರವಾಗಿ ಗಾಯಗೊಂಡು, ಅದೇ ದಿನ ಎಂಜಿಎಂಗೆ ದಾಖಲಿಸಲಾಗಿತ್ತು. ಮಂಗಳವಾರ ಬಲಗೈ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ನಿರ್ಧರಿಸಿದ್ದರು. ಬೆಳಗ್ಗೆ 10.30ಕ್ಕೆ ಬಾಲಕನನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ದು ಅರಿವಳಿಕೆ ನೀಡುವಾಗ ಬಾಲಕನಿಗೆ ಹೃದಯಾಘಾತವಾಗಿದೆ. ಕೂಡಲೇ ಬಾಲಕನನ್ನು ಆರ್‌ಐಸಿಯು ವಾರ್ಡ್‌ಗೆ ಕರೆದೊಯ್ದು ಕೃತಕ ಉಸಿರಾಟವನ್ನು ನೀಡಲು ಪ್ರಯತ್ನಿಸಿದರೂ, ಪ್ರಯೋಜನವಾಗಿಲ್ಲ. ಮಧ್ಯಾಹ್ನ 1.10ರ ಸುಮಾರಿಗೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಶಾಕ್ ಹೊಡೆದು ಮೂವರು ಸಾವು
ಬಾಲಕನ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಸುಮಾರು ಮೂರು ಗಂಟೆಗಳ ಕಾಲ ಯಾವುದೇ ಮಾಹಿತಿ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಟಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.