Advertisement

ಕಾರು-ಬಸ್ಸು ಅಪಘಾತ : ಇಬ್ಬರ ದುರ್ಮರಣ

10:01 AM Jul 16, 2018 | |

* ಅಪಘಾತ ತೀವ್ರತೆಗೆ ಕಾರು ನಜ್ಜುಗುಜ್ಜು   *ಗಾಯಾಳುಗಳ ಹೊರತೆಗೆಯಲು ಸ್ಥಳೀಯರ ಹರಸಾಹಸ

Advertisement

ಕುಂದಾಪುರ: ಅಂಪಾರು ಗ್ರಾಮದ ನೆಲ್ಲಿಕಟ್ಟೆಯಲ್ಲಿ ರವಿವಾರ ಸಂಜೆ ನಡೆದ ಬಸ್ಸು ಕಾರು ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ. ತೆಕ್ಕಟ್ಟೆಯ ಮಲ್ಯಾಡಿಯ ಹೆಗ್ಡೆ ಮನೆ ನಿವಾಸಿ ದೀಕ್ಷಿತ್‌ (23) ಹಾಗೂ ಕೊರ್ಗಿ ಹೊಸಮಠ  ನಿವಾಸಿ ಕಿರಣ್‌ (25) ಮೃತರು. ಕಾರಿನಲ್ಲಿದ್ದ ಜೀವನ್‌ ಶೆಟ್ಟಿ, ಮನೀಶ್‌ ಶೆಟ್ಟಿ ಗಾಯಗೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರುಣ್‌ ಶೆಟ್ಟಿ ಎಂಬವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ದಿನೇಶ್‌ ಕುಮಾರ್‌ ಅವರು ಭೇಟಿ ನೀಡಿದ್ದಾರೆ. 

ಘಟನೆ ವಿವರ
ಕಿರಣ್‌ ಹಾಗೂ ಸ್ನೇಹಿತರು ಎರಡು ಕಾರುಗಳಲ್ಲಿ ಸಿದ್ದಾಪುರ ಸಮೀಪದ ತೊಂಭಟ್ಟುವಿನ ಜಲಪಾತ ವೀಕ್ಷಿಸಿ ವಾಪಸ್‌ ಬರುತ್ತಿರುವ ವೇಳೆ  ನೆಲ್ಲಿಕಟ್ಟೆಯ ರಾಜ್ಯ ಹೆದ್ದಾರಿಯಲ್ಲಿ ಕುಂದಾಪುರದಿಂದ ಸಿದ್ದಾಪುರ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್‌ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ದೀಕ್ಷಿತ್‌ ಸ್ಥಳದಲ್ಲಿಯೇ ಮೃತಪಟ್ಟರೆ ಕಿರಣ್‌ ಮಣಿಪಾಲಕ್ಕೆ ಕೊಂಡೊಯ್ಯುವ ದಾರಿ ಮಧ್ಯೆ ಅಸು ನೀಗಿದ್ದಾರೆ. ಅಪಘಾತ ತೀವ್ರತೆಗೆ ಕಾರು, ಬಸ್ಸು ಜಖಂಗೊಂಡಿದೆ.  

ಗುತ್ತಿಗೆದಾರ
ಕೊರ್ಗಿ ಗ್ರಾಮದ ಹೊಸಮಠ ನಿವಾಸಿ ಕೃಷ್ಣ ಶೆಟ್ಟಿ-ಬಾಬಿ ದಂಪತಿಯ ಪುತ್ರ ಕಿರಣ್‌ ಅವರ ತಂದೆ ಬೈಂದೂರಿನ ನಾಕಟ್ಟೆಯಲ್ಲಿ ಉದ್ಯಮಿ. ಕಿರಣ್‌ ಗುತ್ತಿಗೆ ಕೆಲಸ ಮಾಡಿಕೊಂಡು ಇದ್ದರು. ಕಿರಣ್‌ಗೆ ತಮ್ಮ ಹಾಗೂ ತಂಗಿ ಇದ್ದಾರೆ. ಕಿರಣ್‌ ಅವರು ನಿಖೀಲ್‌ ಕಾರನ್ನು ಚಲಾಯಿಸುತ್ತಿದ್ದರೆ ನಿಖೀಲ್‌ ಕಾರನ್ನು ಕಿರಣ್‌ ಚಲಾಯಿಸುತ್ತಿದ್ದರು. 

ಕೆಲಸಕ್ಕೆ ಸೇರಲಿದ್ದರು
ದೀಕ್ಷಿತ್‌ ಅವರು ಮಲ್ಯಾಡಿಯ ಹೋಟೆಲ್‌ ಉದ್ಯಮಿ ವಿಶ್ವನಾಥ ಶೆಟ್ಟಿ- ಮಾಲತಿ ಶೆಡ್ತಿ ಅವರ ಪುತ್ರ. ದೀಕ್ಷಿತ್‌ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ವಆರ್ಗಾನಿಕ್‌ ಕೆಮೆಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದರು. ಆ.1ರಂದು ಬೆಂಗಳೂರಲ್ಲಿ ಉದ್ಯೋಗಕ್ಕೆ ಸೇರುವವರಿದ್ದರು. 

Advertisement

ಸ್ಥಳೀಯರ ಸಾಹಸ
ಅಪಘಾತ ನಡೆದಾಗ ಸ್ಥಳೀಯ ಯುವಕರು ರಕ್ಷಣೆಗೆ ಧಾವಿಸಿದ್ದಾರೆ. ಚರಂಡಿಗೆ ಬಿದ್ದ ಕಾರನ್ನು ಮೇಲೆತ್ತಿ, ಕಬ್ಬಿಣದ ಸಲಾಕೆ ಬಳಸಿ ಗಾಯಾಳು ಗಳನ್ನು ಕಾರಿನಿಂದ ಕಷ್ಟಪಟ್ಟು ಹೊರ ತೆಗೆದು ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.  

ಅಪಾಯಕಾರಿ ತಿರುವು
ನೆಲ್ಲಿಕಟ್ಟೆ ಬಸ್‌ ನಿಲ್ದಾಣದ ಬಳಿ ಇರುವ ತಿರುವು ಅಪಾಯಕಾರಿಯಾಗಿದ್ದು, ಅಪಘಾತ ಸಾಮಾನ್ಯ. ತಿರುವಿನ ಮುಂಭಾಗ ಮತ್ತು ಹಿಂಭಾಗ ಸುಮಾರು ಅರ್ಧ ಕಿ.ಮೀ.  ತನಕ ನೇರ ವಾಗಿದ್ದು, ವೇಗವಾಗಿ ಬರುವ ವಾಹನ ಗಳಿಗೆ ಒಮ್ಮೆಲೆ ತಿರುವು ಸಿಗುವುದರಿಂದ ವಾಹನ ಹತೋಟಿ ತಪ್ಪಿ ಎದುರು ಕಡೆಯಿಂದ ಬರುವ ವಾಹನಗಳಿಗೆ ಢಿಕ್ಕಿ ಹೊಡೆಯುತ್ತವೆ. ಆದ್ದರಿಂದ ರಸ್ತೆ ಅಗಲಗೊಳಿಸಿ ನೇರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next