Advertisement

ದೆವ್ವದ ವೇಷ ಧರಿಸಿ ಭೀತಿ ಮೂಡಿಸುತ್ತಿದ್ದ ವಿದ್ಯಾರ್ಥಿಗಳ ಸೆರೆ

09:50 AM Nov 13, 2019 | Lakshmi GovindaRaju |

ಬೆಂಗಳೂರು: ಪ್ರಾಂಕ್‌(ತಮಾಷೆ) ವಿಡಿಯೋಗಳನ್ನು ತಮ್ಮ ಯು ಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲು ದೆವ್ವದ ವೇಷ ಧರಿಸಿ ರಸ್ತೆಯಲ್ಲಿ ಸಾರ್ವಜನಿಕರನ್ನು ಬೆದರಿಸುತ್ತಿದ್ದ ಏಳು ಮಂದಿ ವಿದ್ಯಾರ್ಥಿಗಳನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

Advertisement

ಆರ್‌.ಟಿ.ನಗರ ನಿವಾಸಿಗಳಾದ ಶಾನ್‌ ಮಲ್ಲಿಕ್‌ (20), ನವೀದ್‌ (20), ಸಜೀಲ್‌ ಮೊಹಮ್ಮದ್‌ (21), ಮೊಹಮ್ಮದ್‌ ಅಕ್ಯೂಬ್‌ (20), ಸಾಕಿಬ್‌ (20), ಸೈಯದ್‌ ನಬೀಲ್‌ (20), ಯೂಸಫ್ ಅಹಮ್ಮದ್‌ (20) ಎಂಬ ಆರೋಪಿಗಳನ್ನು ಬಂಧಿಸಿ, ಬಳಿಕ ಠಾಣಾ ಜಾಮೀನಿನ ಮೇಲೆ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಡುಗಡೆ ಮಾಡಿ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಪದವಿ, ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಕೆಲವರು ದೆವ್ವದ ವೇಷಧರಿಸಿ, ಮುಖಕ್ಕೆ ಮುಸುಕು ಹಾಗೂ ಉದ್ದನೆಯ ಕೂದಲಿನ ವಿಗ್‌ ಹಾಕಿಕೊಂಡು ತಡರಾತ್ರಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರ ಎದುರಿಗೆ ಪ್ರತ್ಯಕ್ಷವಾಗಿ ದಾಳಿ ಮಾಡುವ ರೀತಿಯಲ್ಲಿ ಬೆದರಿಕೆಯೊಡ್ಡುತ್ತಿದ್ದರು.

ಕಾರಿನಲ್ಲಿ ಮಲಗಿರುವ ಚಾಲಕರು ಹಾಗೂ ರಸ್ತೆ ಬದಿ, ಅಂಗಡಿ ಮುಗ್ಗಟ್ಟು ಮಂದೆ ಮಲಗಿದ್ದ ಸಾರ್ವಜನಿಕರನ್ನು ಎಚ್ಚರಗೊಳಿಸಿ ದೆವ್ವದ ರೀತಿಯಲ್ಲಿ ಹೆದರಿಸುತ್ತಿದ್ದರು. ಇದನ್ನು ಇತರೆ ವಿದ್ಯಾರ್ಥಿಗಳು ದೂರದಿಂದ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದರು. ಭಾನುವಾರ ರಾತ್ರಿ ಆರೋಪಿಗಳು ಯಶವಂತಪುರದ ಶರೀಫ್ನಗರದಲ್ಲಿ ದೆವ್ವದ ವೇಷಧರಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದರು.

ಅದರಿಂದ ಭಯಗೊಂಡ ಕೆಲವರು ಯಶವಂತಪುರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ಅಲ್ಲದೆ, ಅದೇ ವೇಳೆ ರಾತ್ರಿ ಗಸ್ತು ತಿರುಗುತ್ತಿದ್ದ ಸೋಲದೇವನಹಳ್ಳಿ ಇನ್ಸ್‌ಪೆಕ್ಟರ್‌ ಸಿ.ಬಿ.ಶಿವಸ್ವಾಮಿ ಅವರಿಗೆ ಅದೇ ರಸ್ತೆಯಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಯುವಕರ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಇನ್ಸ್‌ಪೆಕ್ಟರ್‌ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ, ಠಾಣೆಗೆ ಕರೆದೊಯ್ದಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು.

Advertisement

ಹಲ್ಲೆಗೆ ಮುಂದಾಗಿದ್ದ ಸಾರ್ವಜನಿಕರು: ತಡರಾತ್ರಿ ತಮಾಷೆ ವಿಡಿಯೋಗಳನ್ನು ಚಿತ್ರೀಕರಣ ಮಾಡುವಾಗ ದೊಣ್ಣೆಯಿಂದ ಸಾರ್ವಜನಿಕರನ್ನು ಹೆದರಿಸುತ್ತಿದ್ದರು. ಈ ವೇಳೆ ಆಕ್ರೋಶಗೊಂಡ ಸಾರ್ವಜನಿಕರೊಬ್ಬರು ಕೈಗೆ ಸಿಕ್ಕ ವಸ್ತುವೊಂದರಿಂದ ದೆವ್ವದ ವೇಷ ಧರಿಸಿದ್ದ ಯುವಕನ ಮೇಲೆ ಎಸೆಯಲು ಮುಂದಾಗಿದ್ದರು. ಮತ್ತೂಂದೆಡೆ ಕೆಲವರು ಯುವಕರ ಮೇಲೆ ಹಲ್ಲೆಗೂ ಮುಂದಾಗಿದ್ದರು. ನಂತರ ಕೂಡಲೇ ಇತರೆ ವಿದ್ಯಾರ್ಥಿಗಳು ತಮಾಷೆ ವಿಡಿಯೋ ಎಂದು ಬಿಡಿಸಿದ್ದಾರೆ.

ಭಾನುವಾರ ಈದ್‌ ಮಿಲಾದ್‌, ಟಿಪ್ಪು ಜಯಂತಿ ಹಾಗೂ ಅಯೋಧ್ಯೆ ತೀರ್ಪು ಪ್ರಕಟವಾಗಿತ್ತು. ಇಂತಹ ಸಂದರ್ಭದಲ್ಲಿ ಈ ರೀತಿಯ ವಿಡಿಯೋ ಮಾಡುವುದು ಸರಿಯಲ್ಲ. ಏಕಾಏಕಿ ದೆವ್ವ ಎಂದರೆ ರಸ್ತೆಯಲ್ಲಿ ಓಡಾಡುವ ವ್ಯಕ್ತಿಯ ಮನಸ್ಸಿಗೆ ಆಘಾತವಾದರೆ ಅಥವಾ ಯಾರೋ ಹೆದರಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಆಕ್ರೋಶಗೊಂಡು ಸಾರ್ವಜನಿಕರೇ ಹಲ್ಲೆ ನಡೆಸಿದರೆ ಯಾರು ಹೊಣೆ? ಹೀಗಾಗಿ, ಬಂಧಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಐದಾರು ತಿಂಗಳಿಂದ ಕೃತ್ಯ: ಪ್ರಾಂಕ್‌ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಲೆಂದೇ ಐದಾರು ತಿಂಗಳ ಹಿಂದೆ ಯುವಕರು ಯುಟ್ಯೂಬ್‌ನಲ್ಲಿ ಖಾತೆ ತೆರೆದು ಚಾನಲ್‌ವೊಂದನ್ನು ಮಾಡಿಕೊಂಡಿದ್ದಾರೆ. ಅಚ್ಚರಿ ಹಾಗೂ ಪ್ರಾಂಕ್‌ ವಿಡಿಯೋಗಳನ್ನು ಚಿತ್ರೀಕರಿಸಿ ಈ ಚಾನಲ್‌ಗೆ ಅಪ್‌ಲೋಡ್‌ ಮಾಡುತ್ತಿದ್ದರು. ವಿಡಿಯೋಗೆ ಹೆಚ್ಚು ಲೈಕ್‌ ಹಾಗೂ ಶೇರ್‌ ಮಾಡಿಸಿದರೆ ಅಥವಾ ಚಾನಲ್‌ ಚಂದಾದಾ ರರಾದರೆ ಯುಟ್ಯೂಬ್‌ನಿಂದ ಹಣ ಸಿಗುತ್ತದೆ ಎಂದು ವಿದ್ಯಾರ್ಥಿಗಳು ಈ ಕೃತ್ಯಕ್ಕೆ ಕೈ ಹಾಕಿದ್ದರು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಠಾಣಾ ಜಾಮೀನಿನ ಮೇಲೆ ಬಿಟ್ಟು ಕಳುಹಿಸಲಾಗಿದ್ದು, ಪೋಷಕರನ್ನು ಕರೆದು ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next