Advertisement
ಬಡವರ ಕೈಗೆ ಬಂದ ತುತ್ತು ಬಾಯಿಗೆ ಹೋಗದಂತೆ ಕಿತ್ತುಕೊಳ್ಳುತ್ತಿರುವುದು ಮಧ್ಯಮ ವರ್ಗದವರು, ಉಳ್ಳವರು ಮತ್ತು ಶ್ರೀಮಂತರು… ಬಡವರ ತುತ್ತು ಕಿತ್ತುಕೊಳ್ಳುವ ಉಳ್ಳವರ ಉಪಟಳಕ್ಕೆ ಕಡಿವಾಣ ಹಾಕಲು ಜಂಟಿ ಕಸರತ್ತು ನಡೆಸಿರುವ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ, ಬಡವರಿಗೆ ಆದ್ಯತೆ ನೀಡಿ ಎಂದು ಸೂಚಿಸುವ, ಆಕರ್ಷಕ ಅಡಿಬರಹ (ಟ್ಯಾಗ್‌ಲೈನ್) ಬಳಸಲು ಚಿಂತನೆ ನಡೆಸಿದೆ.
ಕಡುಬಡವರಿಗಾಗಿ ಇಂದಿರಾ ಕ್ಯಾಂಟೀನ್‌ನಲ್ಲಿ ಕೇವಲ 5 ರೂ.ಗೆ ತಿಂಡಿ, 10 ರೂ.ಗೆ ಊಟ ನೀಡಲಾಗುತ್ತಿದೆ. ಆದರೆ, ಅಲ್ಲಿಗೆ ಮಧ್ಯಮ ವರ್ಗ ಹಾಗೂ ಉಳ್ಳವರು ಕೂಡ ಬಂದು ಆಹಾರ ಸೇವಿಸುತ್ತಾರೆ. ಇದರಿಂದ ಅರ್ಹ ಫಲಾನುಭವಿಗಳು ಹಸಿದ ಹೊಟ್ಟೆಯಲ್ಲೇ ಮಲಗುವ ಸ್ಥಿತಿ ಇದೆ. “ನೀವು ಹಣವಂತರು. ನೀವು ಕ್ಯಾಂಟೀನ್‌ಗೆ ಬಂದು ತಿನ್ನಬೇಡಿ’ ಎಂದು ಜನರಿಗೆ ನೇರವಾಗಿ ಹೇಳುವಂತಿಲ್ಲ. ಹಾಗಂತ ವರು ತಿನ್ನುವುದನ್ನು ನೋಡಿಕೊಂಡು ಸುಮ್ಮನೆ ಕೂರುವಂತೆಯೂ ಇಲ್ಲ. ಇಂಥ ಇಕ್ಕಟ್ಟಿಗೆ ಸಿಲುಕಿರುವ ಪಾಲಿಕೆ, ಅಡಿಬರಹದ ಮೂಲಕ ಸೂಚ್ಯವಾಗಿ ತನ್ನ ಆಶಯ ತಿಳಿಸಲು ಉದ್ದೇಶಿಸಿದೆ. ಈ ನಿಟ್ಟಿನಲ್ಲಿ “ಇಂದಿರಾ ಕ್ಯಾಂಟೀನ್ ಊಟ ನಾಲಿಗೆ ರುಚಿಗಲ್ಲ; ಹಸಿವಿನಿಂದ ಬಳಲುತ್ತಿರುವವರಿಗೆ…’ ಅಥವಾ “ಇಂದಿರಾ ಕ್ಯಾಂಟೀನ್- ಇದರ ಅವಶ್ಯಕತೆ ಇದ್ದರೆ, ನಿಮಗೆ ಸ್ವಾಗತ’ ಎನ್ನುವುದು ಸೇರಿದಂತೆ ಎರಡು-ಮೂರು ಅಡಿಬರಹಗಳು ಪಾಲಿಕೆ ಮುಂದಿವೆ.
Related Articles
Advertisement
ಅರ್ಧದಷ್ಟು ಉಳ್ಳವರೇ!“ವಾರ್ಡ್ ಒಂದರ ವ್ಯಾಪ್ತಿಯ ಕಡುಬಡವರ ಸಂಖ್ಯೆ ಅಂದಾಜಿಸಿ ಅಲ್ಲಿ ಕ್ಯಾಂಟೀನ್ ಆರಂಭಿಸಲಾಗಿದೆ. ಅದರಂತೆ ಕನಿಷ್ಠ 300ರಿಂದ ಗರಿಷ್ಠ 500 ಜನರಿಗೆ ಕ್ಯಾಂಟೀನ್‌ನಲ್ಲಿ ಆಹಾರ ಪೂರೈಸಲಾಗುತ್ತಿದೆ. ಆದರೆ, ನಗರದಲ್ಲಿನ ಬಹುತೇಕ ಇಂದಿರಾ ಕ್ಯಾಂಟೀನ್‌ಗಳಿಗೆ ಬರುತ್ತಿರುವವರಲ್ಲಿ ಅರ್ಧದಷ್ಟು ಮಂದಿ ಹಣವಂತರು ಅಥವಾ ಮಧ್ಯಮ ವರ್ಗದವರಿದ್ದಾರೆ. ಹೀಗೆ ಬರುವವರಲ್ಲಿ ಬಡವರ್ಯಾರು, ಹಣವಂತರ್ಯಾರು ಎಂದು ಪತ್ತೆಹಚ್ಚುವುದು ಕಷ್ಟ. ಹೀಗಾಗಿ ಅಡಿಬರಹದ ಪ್ರಯೋಗ ನಡೆಸಲಾಗುತ್ತಿದೆ,’ ಎಂದು ಪಾಲಿಕೆ ಆಯುಕ್ತ ಎನ್. ಮಂಜುನಾಥ ಪ್ರಸಾದ್ “ಉದಯವಾಣಿ’ಗೆ ತಿಳಿಸಿದ್ದಾರೆ. ನಗರದಲ್ಲಿ ಪ್ರಸ್ತುತ 113 ಕ್ಯಾಂಟೀನ್‌ಗಳಿವೆ. ಇದರಲ್ಲಿ ನಿತ್ಯ ಕನಿಷ್ಠ 350ರಿಂದ ಗರಿಷ್ಠ 500 ಮಂದಿಗೆ ಊಟ ಪೂರೈಸುತ್ತಿದ್ದು, ಶೇ.20 ಕ್ಯಾಂಟೀನ್‌ಗಳಲ್ಲಿ ಊಟದ ಪ್ರಮಾಣ ಗರಿಷ್ಠ ಮಿತಿ ಮೀರಿದೆ. ಪೊಲೀಸ್ ಕಾನ್‌ಸ್ಟೆàಬಲ್, ಸೇಲ್ಸ್‌ಮನ್ ಸೇರಿ ಅನೇಕರಿಗೆ ಕ್ಯಾಂಟೀನ್ ಆಧಾರವಾಗಿದೆ. ಇವರೆಲ್ಲಾ ಉಳ್ಳವರು ಎಂದಲ್ಲ; 12-15 ಸಾವಿರ ಸಂಬಳ ಪಡೆಯುವ ಈ ವರ್ಗದವರು, ದುಬಾರಿ ಬೆಲೆಯ ಹೋಟೆಲ್ ತಿನಿಸು ತಿಂದು ತಿಂಗಳ ಹಸಿವು ನೀಗಿಸಿಕೊಳ್ಳುವುದು ಅಸಾಧ್ಯ. ಹಾಗಾಗಿ, ಇವರಿಗೆ ಬರಬೇಡಿ ಎಂದು ಹೇಳಲಾಗದು. ಆದರೆ, ಬಡವರಿಗೆ ಆದ್ಯತೆ ಕೊಡಿ ಎಂದು ಹೇಳಬಹುದು. ಈ ನಿಟ್ಟಿನಲ್ಲಿ ಟ್ಯಾಗ್‌ಲೈನ್ ನೆರವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮಾರ್ಷಲ್ ಕಣ್ಗಾವಲು!
ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಭಾನುವಾರದಿಂದ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಒಬ್ಬರಂತೆ ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ. ಮೊದಲ ಹಂತದಲ್ಲಿ 12 ಕ್ಷೇತ್ರಗಳಿಗೆ ನೇಮಕಗೊಂಡಿರುವ ಮಾರ್ಷಲ್‌ಗಳು, ಕ್ಯಾಂಟೀನ್ ಸ್ವತ್ಛತೆ, ಸಮವಸ್ತ್ರ, ಆಹಾರ ವಿತರಣೆ ಪ್ರಮಾಣ ಸೇರಿ ಹಲವು ಅಂಶಗಳ ಮೇಲೆ ನಿಗಾ ಇಡಲಿದ್ದಾರೆ. ಹೆಚ್ಚುವರಿ ಆಯುಕ್ತರ ನೇತೃತ್ವದಲ್ಲಿ ಇಂದಿರಾ ಕ್ಯಾಂಟೀನ್ ಸೆಲ್ ರಚಿಸಿದ್ದು, ಮಾರ್ಷಲ್‌ಗಳೂ ಸೆಲ್‌ನಲ್ಲಿರುತ್ತಾರೆ. ಇವರೆಲ್ಲರೂ ನಿವೃತ್ತ ಯೋಧರಾಗಿದ್ದು, ಜೆಸಿಒ (ಜೂನಿಯರ್ ಕಮೀಷನ್ ಆಫೀಸರ್) ಮಟ್ಟದ ಅಧಿಕಾರಿಗಳಾಗಿದ್ದಾರೆ. ಡೈರೆಕ್ಟರೇಟ್ ಆಫ್ ಕರ್ನಾಟಕ ಸೈನಿಕ್ ವೆಲ್‌ಫೇರ್ ಆಂಡ್ ಸೆಟಲ್‌ಮೆಂಟ್ ಮೂಲಕ ಇವರನ್ನು ನೇಮಿಸಿದ್ದು, ಸಮವಸ್ತ್ರ, ವಾಹನ ಮತ್ತಿತರ ಭತ್ಯೆ ಸೇರಿ ಮಾಸಿಕ 49 ಸಾವಿರ ರೂ. ವೇತನ ನಿಗದಿಪಡಿಸಲಾಗಿದೆ. * ವಿಜಯಕುಮಾರ್ ಚಂದರಗಿ