ಬೆಂಗಳೂರು: ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಸರ್ಕಾರ ಅನುದಾನ ನೀಡುವವರೆಗೆ ಪಾಲಿಕೆ ಹಣದಲ್ಲಿ ನಿರ್ವಹಣೆ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. ಕ್ಯಾಂಟೀನ್‌ಗಳ ನಿರ್ವಹಣೆಗೆ ರಾಜ್ಯ ಸರ್ಕಾರದ ಪೂರಕ ಬಜೆಟ್‌ನಲ್ಲಿ ಅನುದಾನ ಒದಗಿಸುವುದಕ್ಕೆ ಮನವಿ ಸಲ್ಲಿಸುವುದರ ಜತೆಗೆ ಸರ್ಕಾರದಿಂದ ಅನುದಾನ ನೀಡುವವರೆಗೆ ಪಾಲಿಕೆಯ ವಿವಿಧ ಅಭಿವೃದ್ಧಿ ಯೋಜನೆಗೆ ಮೀಸಲಿಟ್ಟ ಅನುದಾನವನ್ನು ಮರು ಹೊಂದಾಣಿಕೆ ಮಾಡಿಕೊಂಡು ಬಳಕೆ ಮಾಡುವುದಕ್ಕೆ ಶನಿವಾರ ನಡೆದ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಿ ನಿರ್ಣಯ ಕೈಗೊಳ್ಳಲಾಗಿದೆ.
ಈ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಇಂದಿರಾ ಕ್ಯಾಂಟಿನ್ ಬಗ್ಗೆ ತಮ್ಮ ವಿರೋಧವಿಲ್ಲ.ಆದರೆ, ಸರ್ಕಾರಕ್ಕೆ ಅನುದಾನ ಬಿಡುಗಡೆಗೆ ಕೋರಬೇಕು. ಈ ಹಿಂದಿನ ಆಯುಕ್ತರು ಮೂರು ಬಾರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಈ ಹಿಂದಿನ ಸರ್ಕಾರ ಸ್ಪಂದಿಸಿರಲಿಲ್ಲ. ಸರ್ಕಾರದಿಂದ 94.28 ಕೋಟಿ ರೂ.ಅನುದಾನ ಬಾಕಿ ಇದೆ. ಈಗಿನ ಸರ್ಕಾರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿ ಎಂದು ಹೇಳಿದರು.
“ಡಾ.ಅಂಬೇಡ್ಕರ್ ಡೇಕೇರ್ ಸೆಂಟರ್’ ಪಾಲಿಕೆ ವಶಕ್ಕೆ: ದಯಾನಂದ ವಾರ್ಡ್‌ನ “ಡಾ.ಅಂಬೇಡ್ಕರ್ ಡೇಕೇರ್ ಸೆಂಟರ್’ಅನ್ನುಲೋಕಾಯುಕ್ತರ ಆದೇಶದ ಮೇರೆಗೆ ಪಾಲಿಕೆಯ ವಶಕ್ಕೆಪಡೆದುಕೊಳ್ಳಲು ನಿರ್ಣಯ ತೆಗೆದುಕೊಳ್ಳಲಾಯಿತು. ಬಿಬಿಎಂಪಿಯಿಂದ ಶ್ರೀರಾಮಪುರದಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಡಾ.ಅಂಬೇಡ್ಕರ್ ಡೇಕೇರ್ ಸೆಂಟರ್ ಅನ್ನು ಈ ಹಿಂದೆ ಕೇವಲ 7 ಸಾವಿರರೂ.ಗೆ ಖಾಸಗಿ ಅವರಿಗೆ ಬಾಡಿಗೆ ನೀಡುವುದಕ್ಕೆ ಪಾಲಿಕೆ ಒಪ್ಪಂದ ಮಾಡಿಕೊಂಡಿತ್ತು.ಆದರೆ, ಖಾಸಗಿ ಸಂಸ್ಥೆ ಒಪ್ಪಂದದ ಪ್ರಕಾರ ಸೇವೆ ನೀಡುತ್ತಿಲ್ಲ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ಕುಮಾರಿ ಪಳನಿಕಾಂತ್ ಅವರು ಆಕ್ಷೇಪ ವ್ಯಕ್ತಪಡಿಸುವಂತೆ ಒತ್ತಾಯಿಸಿ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು.
ಮೊಬೈಲ್ ಚಿಟ್ ಚ್ಯಾಟ್: ಬಿಬಿಎಂಪಿಯ ನೂತನ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಅವರು ಶನಿವಾರ ನಡೆದ ಪಾಲಿಕೆಯ ವಿಶೇಷ ಸಭೆಯ ಉದ್ದಕ್ಕೂ ಮಬೈಲ್‌ನಲ್ಲಿ ಮುಳುಗಿದ್ದರು. ಸದಸ್ಯರು ಬಜೆಟ್ ಅನುದಾನ ಹಂಚಿಕೆ, ಕಾಮಗಾರಿ, ಆರ್ಥಿಕ ಶಿಸ್ತು ಸೇರಿದಂತೆ ಗಂಭೀರವಾದ ವಿಷಯಗಳನ್ನು ಚರ್ಚೆ ಮಾಡುವಾಗಲೂ ಮೊಬೈಲ್ ಬಳಸುತ್ತಿದ್ದರು.