Advertisement
ಸ್ವಾತಂತ್ರೋತ್ಸವ ಎಂದರೆ ನನ್ನಲ್ಲಿ ಹೊಸದೊಂದು ಅನುಭವದ, ಹೊಸದೊಂದು ನೆನಪಿನ ಲೋಕ ಕಣ್ಣ ಮುಂದೆ ಬರುತ್ತದೆ.
ನನ್ನ ತಂದೆ ದರ್ಜಿ. ಆದ್ದರಿಂದ ಸ್ವಾತಂತ್ರೋತ್ಸವಕ್ಕೆ ಹೊಸ ಬಿಳಿ ಸಮವಸ್ತ್ರ ಹೊಲಿದು ಕೊಡುತ್ತಿದ್ದರು. ಅದನ್ನು ಧರಿಸಿ ಶಾಲೆಗೆ ಹೊರಡುತ್ತಿದ್ದೆ. ಮೊದಲು ನಮ್ಮ ಶಾಲೆಯಲ್ಲಿ ಧ್ವಜಾರೋಹಣ. ಅದು ಮುಗಿದ ಬಳಿಕ ಸಮೀಪದಲ್ಲಿದ್ದ ದೊಡ್ಡ ಮೈದಾನದಲ್ಲಿ ಧ್ವಜಾರೋಹಣ ನೆರವೇರುತಿತ್ತು. ಇಂದಿಗೂ ನಾನು ಆ ಮೈದಾನವಿರುವ ರಸ್ತೆಯಲ್ಲಿ ಹಾದು ಹೋಗುವಾಗ ಆ ದಿನಗಳು ಮರುಕಳಿಸುತ್ತವೆ. ನಮಗೆ ಖುಷಿ ಕೊಡುತ್ತಿದ್ದ ವಿಷಯವೇನೆಂದರೆ ನಾವು ಶಾಲೆಯಿಂದ ಮೈದಾನಕ್ಕೆ ಹೋಗುವ ಮಧ್ಯದಲ್ಲಿ ನಮಗೆ ರಸ್ತೆಯಲ್ಲಿ ಸಿಹಿತಿಂಡಿಯನ್ನು ನೀಡುತ್ತಿದ್ದರು. ಅದಕ್ಕಾಗಿ ನಾನು ಮತ್ತು ನನ್ನ ಗೆಳತಿಯರು ಕಾಯುತ್ತಿದ್ದುದು ಈಗಲೂ ಕಣ್ಣ ಮುಂದೆ ಬರುತ್ತದೆ.
Related Articles
Advertisement
ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಮನೆಗೆ ಹೋಗುವಾಗ ನಾನು ನಡೆದುಕೊಂಡೇ ಹೋಗುತ್ತಿದ್ದೆ. ಏಕೆಂದರೆ ರಸ್ತೆ ಉದ್ದಕ್ಕೂ ನಮಗೆ ಸ್ವಾತಂತ್ರ್ಯ ದಿನಾಚರಣೆಯ ದಿನ ಚಾಕಲೇಟು ಹೀಗೆ ಅನೇಕ ಸಿಹಿತಿಂಡಿಗಳನ್ನು ನೀಡುತ್ತಿದ್ದರು. ಮನೆಯನ್ನು ತಲುಪುವಾಗ ನನ್ನ ಬಳಿ ಸಾಕಷ್ಟು ಚಾಕಲೇಟುಗಳು ಸಂಗ್ರಹವಾಗುತ್ತಿದ್ದವು. ನನ್ನ ಬಾಲ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯು ನನ್ನ ಅಚ್ಚುಮೆಚ್ಚಿನ ರಾಷ್ಟೀಯ ಹಬ್ಬವಾಗಲು ರಸ್ತೆ ಉದ್ದಕ್ಕೂ ನೀಡುತ್ತಿದ್ದ ಸಿಹಿತಿಂಡಿಗಳೇ ಕಾರಣವೋ ಏನೋ, ನನಗೆ ತಿಳಿದಿಲ್ಲ. ಆದರೆ ನನ್ನ ಬಾಲ್ಯದ ಸ್ವಾತಂತ್ರೋತ್ಸವದ ಸಂಭ್ರಮವನ್ನು ನಾನು ಮರೆಯಲು ಸಾಧ್ಯವೇ ಇಲ್ಲ.