ಪಿರಿಯಾಪಟ್ಟಣ: ಕೋವಿಡ್ ಮಹಾಮಾರಿಯಿಂದ ಚೇತರಿಸಿಕೊಳ್ಳುವ ಮೊದಲೇ ಜೀವನಾಧಾರವಾಗಿದ್ದ ರಾಸುಗಳಿಗೆ ಕಾಲುಬಾಯಿ ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅನ್ನದಾತನ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೈನು ಉದ್ಯಮದಲ್ಲಿ ಯುವಜನತೆ:
ಕೋವಿಡ್ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ಜನತೆ ನಂಬಿದ್ದ ಎಲ್ಲ ಉದ್ಯಮಗಳು ಕೈಕೊಟ್ಟಿದ್ದರೂ ರೈತನ ಬದುಕಿಗೆ ಆಸರೆಯಾಗಿರುವ ಹೈನು ಉದ್ಯಮ ಮಾತ್ರ ತೆವಳುಕೊಂಡು ಸಾಗುತ್ತಿತ್ತು. ಇದರ ನಡುವೆ ಉದ್ಯೋಗವನ್ನು ಅರಸಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಯುವ ಜನತೆ ಕೋವಿಡ್ ಮಹಾಮಾರಿ ವಕ್ಕರಿಸಿ ಉದ್ಯೋಗ ಕಳೆದುಕೊಂಡು ಗ್ರಾಮೀಣ ಪ್ರದೇಶಗಳಿಗೆ ಮರಳಿದಾಗ ಹೈನು ಉದ್ಯಮದೆಡೆಗೆ ತೊಡಗಿಸಿಕೊಂಡು ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದರು. ಆದರೆ, ಇದ್ದಕ್ಕಿದ್ದ ಹಾಗೆ ಕಳೆದ 15 ದಿನಗಳಿಂದ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ರಾಸುಗಳಿಗೆ ಕಾಲು ಬಾಯಿಜ್ವರ ಕಾಣಿಸಿಕೊಂಡು ಹೈನುಗಾರಿಕೆಯಲ್ಲಿಯೇ ಬದುಕು ಕಟ್ಟಿಕೊಳ್ಳಲು ಹೋರಾಟ ನಡೆಸಿದವರ ಕನಸು ಕನಸಾಗಿಯೇ ಉಳಿಯುವಂತಾಗಿದೆ.
ತಾಲ್ಲೂಕಿನಲ್ಲಿ 80 ಸಾವಿರ ರಾಸುಗಳು, 4 ಸಾವಿರ ಎಮ್ಮೆಗಳಿವೆ. ವರ್ಷಕ್ಕೆ ಎರಡು ಬಾರಿ ರಾಸುಗಳಿಗೆ ಲಸಿಕೆ ಹಾಕಲಾಗುತ್ತದೆ. ಆದರೆ, ಕೋವಿಡ್ ಹಿನ್ನೆಲೆ ಲಸಿಕೆ ಬರುವುದು ತಡವಾದ ಕಾರಣ ಕಾಲುಬಾಯಿ ಜ್ವರಕ್ಕೆ ತುತ್ತಾಗಿರುವ ರಾಸುಗಳಿಗೆ ರೈತರೇ ಸ್ವಯಂ ಅಡುಗೆ ಸೋಡವನ್ನು ನೀರಿನಲ್ಲಿ ಬೆರೆಸಿ ಕೊಟ್ಟಿಗೆಗೆ ಸಿಂಪಡಿಸಿ ನಂತರ ರಾಸುಗಳ ಕಾಲು, ಮುಖ ತೊಳದು ಸ್ವಚ್ಛವಾಗಿಡುವ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ. ಆದರೂ ಕಾಲುಬಾಯಿ ಜ್ವರದ ಲಕ್ಷಣಗಳು ಕಡಿಮೆಯಾಗದಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.
ತಾಲ್ಲೂಕಿನ ಹಿಟ್ನೆಹೆಬ್ಬಾಗಿಲು, ಹಿಟ್ನಹಳ್ಳಿ, ಆಯಿತನಹಳ್ಳಿ, ಶೆಟ್ಟಹಳ್ಳಿ, ರಾಮನಾಥ ತುಂಗ, ಚಿಕ್ಕ ವಡ್ಡರಕೇರಿ, ಕೋಗಿಲವಾಡಿ, ಸುಳಗೋಡು, ಕಾಳೇತಮ್ಮನಹಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ರಾಸುಗಳಲ್ಲಿ ಹೆಚ್ಚಾಗಿ ರೋಗ ಕಾಣಿಸಿಕೊಂಡಿದ್ದು ದಿನೇ ದಿನೇ ಕಾಲುಬಾಯಿ ರೋಗದ ಸೋಂಕು ಇತರೆ ರಾಸುಗಳಿಗೂ ವ್ಯಾಪಿಸುವ ಆತಂಕವಿರುವ ಕಾರಣ ಕೋವಿಡ್ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ಕಂಗಾಲಾಗಿದ್ದ ರೈತ ಹೈನು ಉಧ್ಯಮದಲ್ಲೂ ನಷ್ಟವನ್ನು ಅಸುಭವಿಸುವ ಹಂತಕ್ಕೆ ಬಂದು ತಲುಪಿದ್ದಾನೆ.
ಕಾಲುಬಾಯಿ ಜ್ವರದ ಲಕ್ಷಣಗಳು:
ಈ ರೋಗವು ಮೊದಲು ರಾಸುವಿನ ಬಾಯಿಂದ ಜೊಲ್ಲು ಸೋರುವ ಮೂಲಕ ಪ್ರಾರಂಭವಾಗುತ್ತದೆ. ಹಸುಗಳ ಕಾಲುಗಳಲ್ಲಿ ಗೆರಸಲುಗಳಲ್ಲಿ ಹುಳುಗಳಾಗಿ ನಡೆಯದಂತಾಗುತ್ತದೆ. ರಾಸುಗಳ ಬಾಯಿ ಮತ್ತು ನಾಲಿಗೆಯಲ್ಲಿ ಗಾಯಗಳಾಗಿ ಮೇವು ತಿನ್ನದಂತಾಗಿ ನಿತ್ರಾಣಗೊಂಡು ಸಕಾಲದಲ್ಲಿ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ರಾಸುಗಳು ಸಾವನ್ನಪ್ಪುತ್ತವೆ.
ಜೂನ್ ತಿಂಗಳಿನಲ್ಲಿ ಲಸಿಕೆ ಕಾರ್ಯಕ್ರಮ ನಡೆಸಬೇಕಿತ್ತು:
ವಿಶ್ವಸಂಸ್ಥೆ ವರ್ಷಕ್ಕೆ ಎರಡು ಬಾರಿ ರಾಸುಗಳಿಗೆ ಕಾಲುಬಾಯಿ ಜ್ವರಕ್ಕೆ ಸಂಬಂಧಿಸದಂತೆ ಲಸಿಕೆ ಅಭಿಯಾನ ನಡೆಸುವಂತೆ ಆದೇಶಿಸಿದೆ. ಈ ಹಿನ್ನೆಲೆ ದೇಶಾದ್ಯಂತ ಲಸಿಕೆ ಕಾರ್ಯಕ್ರಮ ನಡೆಸಲು ಅವಕಾಶ ಕಲ್ಪಿಸಿತ್ತು. ಆದರೆ ಈ ಬಾರಿ ಕೋವಿಡ್ ಸಂಬಂಧ ಲಸಿಕೆ ನೀಡುವ ಕಾರ್ಯಕ್ರಮ ವಿಳಂಬವಾಗಿರುವ ಕಾರಣ ರಾಸುಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಲಸಿಕೆ ನೀಡಿದ್ದು ಬಿಟ್ಟರೆ ಈ ವರೆಗೂ ಲಸಿಕೆ ನೀಡದ ಕಾರಣ ಕಾಲುಬಾಯಿ ಜ್ವರದ ಲಕ್ಷಣಗಳು ಉಲ್ಬಣಗೊಂಡು ರಾಸುಗಳು ರೋಗಬಾಧೆಗೆ ತುತ್ತಾಗಿವೆ. ರೋಗಕ್ಕೆ ತುತ್ತಾದ ರಾಸುಗಳನ್ನು ಗುಣಪಡಿಸಲು ದಿನಪ್ರತಿ ಔಷಧಿಗಳ ಖರೀದಿಗಾಗಿ ನೂರಾರು ರೂಪಾಯಿಗಳನ್ನು ವ್ಯಯ ಮಾಡಬೇಕಿದೆ. ಈಗಾಗಲೇ ರೈತರು ಕೊರೋನಾದಿಂದ ತತ್ತರಿಸಿ ಹಾಲನ್ನು ನಂಬಿ ಜೀವನ ನಡೆಸುತ್ತಿರುವ ಇವರಿಗೆ ಈ ರೋಗದಿಂದ ಆರ್ಥಿಕವಾಗಿ ತತ್ತರಿಸುವಂತಾಗಿದೆ ಎನ್ನುತ್ತಾರೆ ರೈತ ಹೆಚ್.ಬಿ.ಶಿವರುದ್ರ.
ವರ್ಷಕ್ಕೆ 2 ಬಾರಿ 6 ತಿಂಗಳಿಗೊಮ್ಮೆ ಲಸಿಕೆ ನೀಡಬೇಕು ಎಂದು ಸರ್ಕಾರದ ನಿಯಮವಿದೆ. ಆದರೆ, ಕೋವಿಡ್ ಮಹಾಮಾರಿ ವಕ್ಕರಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ ತಿಂಗಳಿನಲ್ಲಿ ಲಸಿಕೆ ನೀಡುವುದು ವಿಳಂಬವಾಗಿದ್ದು ಸ್ಥಳೀಯವಾಗಿ ಆಯಾ ಹಾಲು ಉತ್ಪಾದಕ ಸಂಘಗಳು ಲಸಿಕೆಯನ್ನು ಖರೀದಿ ಮಾಡಿ ಕೊಟ್ಟರೆ ಇದೇ 25 ರಿಂದ ನೀಡಲಾಗುವುದು ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೆಶಕ ಡಾ.ಸೋಮಯ್ಯ ಹೇಳಿದ್ದಾರೆ.