Advertisement

ಪಿಎಸ್‌ಐ ಆಯ್ಕೆಯಾದವರ ಪ್ರತಿಭಟನೆ; ಅಳಲು ತೋಡಿಕೊಂಡ ಅಭ್ಯರ್ಥಿಗಳು

11:08 PM Apr 30, 2022 | Team Udayavani |

ಬೆಂಗಳೂರು: ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಬರೆದು ಪಾಸಾಗಿರುವ ನಮ್ಮ ಆಯ್ಕೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ಮಾಡುತ್ತಿರುವುದನ್ನು ವಿರೋಧಿಸಿ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ.

Advertisement

ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಈ ಪರೀಕ್ಷೆಗಾಗಿ ಐದಾರು ವರ್ಷಗಳಿಂದ ತಯಾರಿ ಮಾಡಿದ್ದೇವೆ. ಕೆಲಸ ಕಾರ್ಯಗಳನ್ನು ಬಿಟ್ಟು, ಹಗಲು ರಾತ್ರಿ ಎನ್ನದೆ ಶ್ರಮ ಹಾಕಿ ಪಾಸ್‌ ಮಾಡಿದ್ದೇವೆ. ಈಗ ನಮಗೆ ಈ ಕೆಲಸ ಸಿಗದಿದ್ದರೆ ನಮ್ಮ ವಯೋಮಿತಿ ದಾಟಲಿದ್ದು, ನಮ್ಮ ಪರಿಶ್ರಮವೆಲ್ಲ ವ್ಯರ್ಥವಾಗುತ್ತದೆ. ಬೇರೆಯವರು ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಎಂದು ಪ್ರಶ್ನಿಸಿದ್ದಾರೆ.

ಪ್ರತಿಭಟನೆಗೆ ಬೆದರಿಕೆ
ಯಾರು ಅಕ್ರಮ ಮಾಡಿದ್ದಾರೋ ಅವರನ್ನು ಹೊರಹಾಕಲಿ, ಯಾವುದೇ ತಪ್ಪು ಮಾಡದ ನಮ್ಮ ತಲೆದಂಡ ಯಾಕೆ, ನಾವು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆಗೆ ಮುಂದಾಗಿದ್ದು, ನಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಮ್ಮ ವಿರುದ್ಧ ಎಫ್‌ಐಆರ್‌ ದಾಖಲಾದರೆ ಮತ್ತೆ ಯಾವುದೇ ಸರಕಾರಿ ಹುದ್ದೆಗೆ ನಾವು ಅರ್ಹತೆ ಹೊಂದಿರುವುದಿಲ್ಲ. ಹೀಗಾಗಿ ಈ ವಿಚಾರದಲ್ಲಿ ನೀವೇ ನಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಶಿವಕುಮಾರ್‌ ಅವರು ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು. ನಿಮ್ಮ ಜತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ಸುರ್ಜೇವಾಲಾ ಪ್ರಶ್ನೆ
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ ಕುರಿತು ಟ್ವೀಟ್‌ ಮಾಡಿದ್ದು, ಹಗರಣಗಳ ಬೊಮ್ಮಾಯಿ ಸರಕಾರ ಅಂತಿಮವಾಗಿ ಒತ್ತಡದಿಂದ ಪಿಎಸ್‌ಐ ಪರೀಕ್ಷೆ ರದ್ದುಗೊಳಿಸಿದೆ. ಬಿಜೆಪಿ ನಾಯಕರು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು ಹೇಗೆ, ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದು ಹೇಗೆ, ಪೇಪರ್‌ ಮಾಫಿಯಾದ ನಿಜವಾದ ರಕ್ಷಕರು ಯಾರು, ಗೃಹ ಸಚಿವರನ್ನು ವಜಾ ಮಾಡಬೇಕಲ್ಲವೇ, ಉತ್ತರ ನ್ಯಾಯಾಂಗ ತನಿಖೆ ಎಂದು ಹೇಳಿದ್ದಾರೆ.

ಪಿಎಸ್‌ಐ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಬರೆದು ಪಾಸಾಗಿರುವವರಿಗೆ ಅನ್ಯಾಯ ಆಗಬಾರದು. ಯಾರು ತಪ್ಪು ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗುವುದಿಲ್ಲವೇ? ಪ್ರಾಮಾಣಿಕ ಅಭ್ಯರ್ಥಿಗಳಿಗೆ ಯಾಕೆ ಶಿಕ್ಷೆ? ತಪ್ಪು ಮಾಡಿರುವ ಅಭ್ಯರ್ಥಿಗಳನ್ನು ಭವಿಷ್ಯದಲ್ಲಿ ಸರಕಾರಿ ಉದ್ಯೋಗದಿಂದ ದೂರ ಇಡಬೇಕು.
– ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

Advertisement

545 ಮಂದಿ ಪೈಕಿ ಯಾರು ಪ್ರಾಮಾಣಿಕರು, ಯಾರು ಅಪ್ರಾಮಾಣಿಕರು ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಸರಕಾರದ ಮರು ಪರೀಕ್ಷೆ ನಿರ್ಧಾರ ಸರಿ ಇದೆ. ಸಿಐಡಿ ಕೂಡ ವೇಗವಾಗಿ ತನಿಖೆ ನಡೆಸಿ ವರದಿ ಸಲ್ಲಿಸ‌ಬೇಕು. ಅಕ್ರಮದಲ್ಲಿ ಭಾಗಿಯಾದವರನ್ನು ಜೀವನ ಪರ್ಯಂತ ಅನರ್ಹರನ್ನಾಗಿ ಮಾಡಬೇಕು.
– ಆರ್‌.ಕೆ. ದತ್ತಾ, ನಿವೃತ್ತ ಡಿಜಿಪಿ

Advertisement

Udayavani is now on Telegram. Click here to join our channel and stay updated with the latest news.

Next