ಚಿಕ್ಕಬಳ್ಳಾಪುರ: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಅಭ್ಯರ್ಥಿಗಳು ಉರಿಬಿಸಲನ್ನೂ ಲೆಕ್ಕಿಸದೇ ಪ್ರಚಾರ ನಡೆಸುತ್ತಿರುವುದು ಒಂದೆಡೆಯಾದರೆ, ಅಭ್ಯರ್ಥಿಗಳ ಪರ ಪತ್ನಿಯರು, ಮಕ್ಕಳು, ಅಣ್ಣ ತಮ್ಮಂದಿರು, ಕುಟುಂಬಸ್ಥರು ಅಖಾಡಕ್ಕಿಳಿದು ಪ್ರಚಾರದ ಅಬ್ಬರ ಹೆಚ್ಚಿಸಿದ್ದಾರೆ.
ಪ್ರಚಾರದಲ್ಲಿ ತಲ್ಲೀನ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಡಾ.ಕೆ.ಸುಧಾಕರ್‌ರಿಗೆ ತಂದೆ ಜಿಪಂ ಮಾಜಿ ಅಧ್ಯಕ್ಷರಾದ ಪಿ.ಎನ್. ಕೇಶವರೆಡ್ಡಿ ಸಾಥ್ ಕೊಡುತ್ತಿದ್ದಾರೆ. ಜತೆಗೆ ಸುಧಾಕರ್‌ರ ಚಿಕ್ಕಪ್ಪ ಪೆರೇಸಂದ್ರದ ಚೆನ್ನಕೇಶವರೆಡ್ಡಿ ಅವರೂ ಪ್ರಚಾರದಲ್ಲಿ ತೊಡಗಿ ದ್ದಾರೆ. ಇನ್ನೂ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡರ ಪರ ಅವರ ಹಿರಿಯ ಸಹೋದರರಾದ ಡಾ.ಕೆ.ಶ್ರೀನಿವಾಸಮೂರ್ತಿ, ಬಚ್ಚೇಗೌಡರ ಮಕ್ಕಳು ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ.
ಸಹೋದರರಿಂದ ಪ್ರಚಾರ: ಚಿಂತಾಮಣಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜೆ.ಕೆ.ಕೃಷ್ಣಾರೆಡ್ಡಿ ಪರ ಅವರ ಪತ್ನಿ ರೂಪಾರೆಡ್ಡಿ, ಮಕ್ಕಳು ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಸಿ. ಸುಧಾಕರ್‌ರ ಹಿರಿಯ ಸಹೋದರ ಬಾಲಾಜಿರೆಡ್ಡಿ ಪ್ರಚಾರ ನಡೆಸುತ್ತಿದ್ದಾರೆ. ಹಾಗೆಯೇ ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮೇಲೂರು ರವಿ ಕುಮಾರ್‌ರ ಪರ ಸಹೋದರ ಸಚಿನ್, ಕಾಂಗ್ರೆಸ್ ಅಭ್ಯರ್ಥಿ ರಾಜೀವ್‌ಗೌಡರ ಪರ ಪತ್ನಿ ಸಹನಾ ಚುನಾವಣೆ ಘೊಷಣೆಗೂ ಮೊದಲಿನಿಂ ದಲೂ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಮನವೊಲಿಕೆ: ಗೌರಿಬಿದನೂರು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಶಿವಶಂಕರರೆಡ್ಡಿ ಪರ ಪುತ್ರ ಸಂಪೂರ್ಣವಾಗಿ ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದಾರೆ. ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್.ಸುಬ್ಟಾರೆಡ್ಡಿ ಪರ ಪತ್ನಿ, ಅವರ ಪುತ್ರ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಸಿಪಿಎಂ ಅಭ್ಯರ್ಥಿ ಡಾ.ಎ.ಅನಿಲ್ ಕುಮಾರ್‌ರ ಪರ ಪತ್ನಿ ಡಾ.ಮಂಜುಳಾ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡು ಮತದಾರ ಮನವೊಲಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.