ಹೂವಿನಹಡಗಲಿ: ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಮತ ಬೇಟೆಯಾಡಲು ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ.
ಹಡಗಲಿ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಒಟ್ಟು ಸ್ಪರ್ಧೆ ಬಯಸಿ ಒಂಭತ್ತು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆದರೆ
ಏ.27ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು, ಯಾರು ಕಣದಲ್ಲಿ ಉಳಿಯುತ್ತಾರೆ. ಯಾರ ಮಧ್ಯೆ ಪೈಪೋಟಿ
ನಡೆಯಲಿದೆ ಎಂಬುದು ಸ್ಪಷ್ಟ ಚಿತ್ರಣ ಸಿಗಲಿದೆ.
ಇತ್ತ ನಾಮಪತ್ರ ಸಲ್ಲಿಸಿದ ಬಹುತೇಕ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಒಳಗೊಂಡಂತೆ ಕೆಲ ಪಕ್ಷೇತರ ಅಭ್ಯರ್ಥಿಗಳು ಈಗಾಗಲೇ ಗ್ರಾಮೀಣ ಪ್ರದೇಶದ ಕಡೆ ಮುಖ ಮಾಡಿದ್ದು, ಹಳ್ಳಿಗಳಲ್ಲಿರುವ ಮತದಾರರಿಗೆ ಮುಖ ತೋರಿಸಿ ಮತ ಕೇಳುವ ಮೂಲಕ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ. ಪರಮೇಶ್ವರ್ ನಾಯ್ಕ ಎರಡನೇ ಬಾರಿಗೆ ಸ್ಪರ್ಧಿಸಿದ್ದು, ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತದಾರನ ಬಳಿ ಹೋಗುತ್ತಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಬಿ.ಚಂದ್ರನಾಯ್ಕ ಕೂಡ 2008ರಲ್ಲಿ ತಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಪಕ್ಷದ ಕಾರ್ಯಕರ್ತರ ಪಡೆಯನ್ನು ಮುಂದಿಟ್ಟುಕೊಂಡು ಮತಯಾಚಿಸಲು ಮುಂದಾಗಿದ್ದಾರೆ.
ಇನ್ನೊಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ತಿರಸ್ಕರಿಸಿ ಒಂದು ಬಾರಿ ನನಗೆ ಅವಕಾಶ ಮಾಡಿಕೊಡಿ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಓದೋ ಗಂಗಪ್ಪ ಹಗಲಿರುಳು ಎನ್ನದೆ, ಸುಡು ಬಿಸಿಲನ್ನೂ ಲೆಕ್ಕಿಸದೆ ಕ್ಷೇತ್ರದ ತುಂಬೆಲ್ಲಾ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕಾಯಣ್ಣನವರ ಪುತ್ರೇಶ್, ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಈ ಬಾರಿ ತಮಗೆ ಅವಕಾಶ ನೀಡಬೇಕು ಎಂದು ಮತದಾರರ ಬಳಿ ಮನವಿ ಮಾಡುತ್ತಾ ಮತಯಾಚನೆಗೆ ಮುಂದಾಗಿದ್ದಾರೆ. ಉಳಿದಂತೆ ಎಂಇಪಿ
ಸೇರಿದಂತೆ ಇತರೆ ನೋಂದಾಯಿತ ಪಕ್ಷಗಳ ಅಭ್ಯರ್ಥಿಗಳು ಸಹ ಸುಡು ಬಿಸಿಲು ಲೆಕ್ಕಿಸದೆ ತಮ್ಮ ರಾಜಕೀಯ ಚಟುವಟಿಕೆಗಳ
ಪ್ರಾರಂಭಿಸಿವೆ. ಅಲ್ಲದೇ ದೇವಸ್ಥಾನ, ಮಠ, ಮಂದಿರಗಳಿಗೆ ತೆರಳಿ ದೇವರ ಮೊರೆ ಹೋಗುವ ಮೂಲಕ ನನಗೆ ವಿಜಯಮಾಲೆ ಹಾಕುವಂತೆ ಪ್ರಾರ್ಥಿಸಿಕೊಳ್ಳುವುದು ಸಾಮಾನ್ಯವಾಗಿದೆ.
ವಿಶ್ವನಾಥ್ ಹಳ್ಳಿಗುಡಿ