ರಾಯಚೂರು: ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಿದ್ದ ಭತ್ತದ ಗದ್ದೆಗೆ ಕಾಲುವೆ ನೀರು ನುಗ್ಗಿ ಬೆಳೆಯೆಲ್ಲಾ ಹಾಳಾದ ಘಟನೆ ಜಿಲ್ಲೆಯ ಕಲಮಲ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ತುಂಗಭದ್ರಾ ಎಡದಂಡೆ ಕಾಲುವೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಎಡವಟ್ಟು ನಡೆದಿದೆ. ಟಿಎಲ್ ಬಿಸಿ ಕಾಲುವೆಗೆ ನೀರು ಹರಿಸುವಲ್ಲಿ ಗೇಜ್ ನಿರ್ವಹಣೆ ಮಾಡದಿರುವುದೇ ಸಮಸ್ಯೆ ಕಾರಣವಾಗಿದೆ.
ರಾತ್ರೋರಾತ್ರಿ ಕಾಲುವೆಗೆ ಅಗತ್ಯಕ್ಕಿಂತ ಹೆಚ್ಚು ನೀರು ಹರಿದಿದ್ದು, ಶಿವರಾಜ್ ಎನ್ನುವ ರೈತನ 14 ಎಕರೆ ಭತ್ತದ ಜಮೀನಿಗೆ ನೀರು ನುಗ್ಗಿದೆ. ಕಲಮಲ ಗ್ರಾಮದಲ್ಲಿರುವ ಕರಿಯಪ್ಪ ತಾತನ ದೇವಾಲಯದ ಹತ್ತಿರ ಬರುವ ಕಾಲುವೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಇದರಿಂದ ಬೆಳೆ ನೀರು ಪಾಲಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಇದನ್ನೂ ಓದಿ:ಕರ್ತವ್ಯಕ್ಕೆ ಅನಧಿಕೃತ ಗೈರು : ಶಿಕಕ, ಅಂಗನವಾಡಿ ಕಾರ್ಯಕರ್ತೆಗೆ ಅಧಿಕಾರಿಗಳಿಂದ ನೋಟಿಸ್
ಈ ಬಗ್ಗೆ ನೀರಾವರಿ ಇಲಾಖೆ ಇಂಜಿನಿಯರ್ ಗಳನ್ನು ಸಂಪರ್ಕಿಸಿದರೆ, ಇದೆಲ್ಲ ಸರ್ವೇ ಸಾಮಾನ್ಯ ನಾವೇನು ಮಾಡಲು ಸಾಧ್ಯ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ರೈತರು ದೂರಿದ್ದಾರೆ. ಇನ್ನೊಂದೆರಡು ದಿನಗಳಲ್ಲಿ ಬೆಳೆ ಕೈ ಸೇರುತ್ತಿತ್ತು. ಕಳೆದ ವಾರ ಮಳೆಯಿಂದ ಬೆಳೆ ಹಾನಿಯಾಗಿತ್ತು. ಉಳಿದ ಬೆಳೆಯಾದರೂ ಕೈ ಸೇರಬಹುದು ಎಂದು ಭಾವಿಸಿದ್ದರೆ ಈಗ ಕಾಲುವೆ ನೀರು ನುಗ್ಗಿ ಅವಾಂತರವಾಗಿದೆ. 14 ಎಕರೆ ಜಮೀನು ಲೀಸ್ ಮಾಡಿದ್ದು, ಲಕ್ಷಾಂತರ ಖರ್ಚು ಮಾಡಿದ್ದೇನೆ. ಈಗ ಉಂಟಾದ ಬೆಳೆ ಹಾನಿಗೆ ಪರಿಹಾರ ನೀಡಲಿ ಎಂದು ರೈತ ಶಿವರಾಜ್ ಒತ್ತಾಯಿಸಿದ್ದಾರೆ.