Advertisement

ಕಡಿಮೆ ಹಣದಲ್ಲಿ ರೂಫ್ ಟಾಪ್‌ ಹಾಕಿಸಬಹುದೇ?

06:00 AM Apr 09, 2018 | |

ಕೈಯಲ್ಲಿ ಐದು ಆರು ಲಕ್ಷ ರೂ. ಇದೆ. ಆದರೆ ಅದನ್ನು ಬ್ಯಾಂಕಿಗೆ ಹಾಕುವ ಇತ್ಛೆ ಇಲ್ಲ. ಅದನ್ನೊಂದು ಬಂಡವಾಳದ ತರಹ ಉಪಯೋಗಿಸುವಂತಾದರೆ ಖುಷಿ. ಈ ಸೋಲಾರ್‌ ಯೋಜನೆಗಳ ಜಾರಿಗೆ 20-30 ಲಕ್ಷ ರೂ. ಬೇಕು ಎನ್ನುವಂತಾದರೆ ಸಣ್ಣ ಪುಟ್ಟ ಮೊತ್ತ ಹಾಕಿ ಸೋಲಾರ್‌ ರೂಫ್ ಟಾಪ್‌ ಯೋಜನೆಯನ್ನು ಅಳವಡಿಸಿಕೊಳ್ಳಲು ಸಾಧ್ಯವೇ ಇಲ್ಲವೇ ಎಂಬ ಪ್ರಶ್ನೆಗೆ ಮೈಸೂರಿನ ಹೆಬ್ಟಾಳದಲ್ಲಿ,ನಾಲ್ಕೂವರೆ ಕಿ.ವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಮೇಲ್ಚಾವಣಿಯನ್ನು ಅಳವಡಿಸಿಕೊಂಡಿರುವ ಕೆ.ಎಸ್‌. ನೀಲಕಂಠಸ್ವಾಮಿ ಸ್ಪಷ್ಟ ಉತ್ತರವಾಗುತ್ತಾರೆ.

Advertisement

ಬ್ಯಾಂಕ್‌ ಬದಲು ಮನೆ ಮಾಳಿಗೆಗೆ!
ಮೂರು ವರ್ಷದ ಹಿಂದೆ ವಿಕ್ರಾಂತ್‌ ಟೈರ್ನಲ್ಲಿ ಕೆಲಸ ಮಾಡಿ ನಿವೃತ್ತರಾದ ನೀಲಕಂಠಸ್ವಾಮಿ ಅವರಿಗೆ ಹಣ ಹೂಡಿಕೆಯಿಂದ ಲಾಭ ಮಾಡಬೇಕು ಮತ್ತು ಅದು ದೇಶದ ಅಭಿವೃದಿಟಛಿಗೂ ಅಲ್ಪಕಾಣಿಕೆ ನೀಡುವಂತಿರಬೇಕು ಎಂಬ ಅನಿಸಿಕೆ ಇತ್ತು. ಬ್ಯಾಂಕ್‌ನಲ್ಲಿ ಬಡ್ಡಿಗಷ್ಟೇ ಠೇವಣಿ ಇರಿಸುವುದು ಸಮ್ಮತವಾಗಿರಲಿಲ್ಲ. ಸರಿಯಾಗಿ ಅದೇ ಸಮಯದಲ್ಲಿ ಪತ್ರಿಕೆಯೊಂದರಲ್ಲಿ ಸೋಲಾರ್‌ ಶಕ್ತಿಯನ್ನು ಬಳಸಿ ವಿದ್ಯುತ್‌ ಉತ್ಪಾದನೆ ಮಾಡುವ ಮತ್ತು ಅದನ್ನು ಸ್ಥಳೀಯ ಎಸ್ಕಾಂನ ಗ್ರಿಡ್‌ಗೆ ಸೇರಿಸುವ ಯೋಜನೆ ಕುರಿತ ಮಾಹಿತಿ ಇತ್ತು. ಅವತ್ತು 4.5 ಕಿ.ವ್ಯಾಟ್‌ ಸೋಲಾರ್‌ ರೂಫ್ಟಾಪ್‌ ಪ್ರಾಜೆಕ್ಟ್‌ನು° ಅವರು ಕಿ.ವ್ಯಾಟ್‌ಗೆ ಸರಿಸುಮಾರು ಒಂದು ಲಕ್ಷ ರೂ. ವೆಚ್ಚದಲ್ಲಿ
ಆರಂಭಿಸಿದರು. ಈಗ ಶೇ. 40ರಷ್ಟು ಬಂಡವಾಳವನ್ನೇ ಅವರು ಅಲ್ಲಿನ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿ ಚೆಸ್ಕಾಂನಿಂದ ವಾಪಾಸು ಪಡೆಯುತ್ತಿದ್ದಾರೆ. ತಮ್ಮ ಅವತ್ತಿನ ನಿರ್ಧಾರದ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ.

ನೀಲಕಂಠಸ್ವಾಮಿಯವರ ಬಳಿ ಹಲವು ಅಂಕಿಅಂಶಗಳಿವೆ. ಅವರು ಪ್ರತಿ ಯೂನಿಟ್ಟಿಗೆ 9.60ರೂ. ದರದಲ್ಲಿ ಚೆಸ್ಕಾಂನೊಂದಿಗೆ ಗ್ರಿಡ್‌ಗೆ ರವಾನಿಸುವ ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರತಿ ದಿನ ಅವರ ಸ್ಥಾವರದಿಂದ 20ರಿಂದ 23 ಯೂನಿಟ್‌ ವಿದ್ಯುತ್‌ ಗ್ರಿಡ್‌ಗೆ ಸರಬರಾಜಾಗುತ್ತದೆ. ಈವರೆಗೆ ನೋಡಿದ ದೊಡ್ಡ ದೊಡ್ಡ ಉದ್ಯಮಗಳ ಹೋಲಿಕೆಯಲ್ಲಿ ಇದು ಕಿರುಗಾತ್ರದ್ದು ಎನ್ನಿಸಬಹುದು. ಆದರೆ ಅವರು ತಮ್ಮ ಮನೆಯ ವಿದ್ಯುತ್‌ ಅಗತ್ಯವನ್ನು ಪೂರೈಸಿ ಕೊಂಡೂ, ಹೆಚ್ಚುವರಿ ರೂಪದಲ್ಲಿ ಸಿಗುವ ಇಷ್ಟು ವಿದ್ಯುತ್‌ ಅನ್ನು ಗ್ರಿಡ್‌ಗೆ ಕೊಡುತ್ತಿದ್ದಾರೆ ಎಂಬುದು ಕೂಡ ಗಮನಾರ್ಹ. ಬೇಕಿದ್ದರೆ ಅದನ್ನು ಮೈಸೂರಿನ ಹೆಬ್ಟಾಳ ಎಂತಲೇ ಇಟ್ಟುಕೊಳ್ಳೋಣ,ಒಂದು ವೇಳೆ ಒಂದು ಏರಿಯಾದ ಎಲ್ಲ ಮನೆಗಳವರೂ ಇಂಥ ಸ್ಥಾವರಗಳನ್ನು ಹೊಂದಿದ್ದರೆ ಆಗಬಹುದಾದ ಅನುಕೂಲವನ್ನು ಎಸ್ಕಾಂಗಳು ಈಗಲಾದರೂ ಮನಗಾಣಲೇಬೇಕು.

ಬೆಲೆ ಅನುಪಾತದಲ್ಲಿ ಅದೇ ಸ್ಥಿತಿ!
ನೀಲಕಂಠಸ್ವಾಮಿಯವರಿಗೆ ಯೂನಿಟ್‌ಗೆ 9.60 ರೂ. ದರ ಇದ್ದರೆ ಈಗ ಆ ದರ ಏಳು ರೂಪಾಯಿ ಮಟ್ಟಕ್ಕೆ ಇಳಿದಿದೆ. ಇದರಿಂದ ಆವಾಗಿನಷ್ಟು ಈಗ ಸೂರ್ಯ ಶಿಕಾರಿ ಲಾಭವಲ್ಲ ಎನ್ನುವವರು ಗಣಿತದ ಇನ್ನೊಂದು ಮಗ್ಗುಲನ್ನು ಮರೆತಿರುತ್ತಾರೆ. ಅವತ್ತು ಕೆಎಸ್‌ಎನ್‌ ಅವರು ಪ್ರತಿ ಕಿ.ಲೋ ವ್ಯಾಟ್‌ಗೆ ಒಂದು ಲಕ್ಷ ರೂ. ವೆಚ್ಚ ಮಾಡಬೇಕಾಗಿತ್ತು. ಅವತ್ತು ಸೋಲಾರ್‌ ಪ್ಯಾನೆಲ್‌ಗ‌ಳ ಸೆಲ್‌ ಬೆಲೆ ಹೆಚ್ಚಿತ್ತು. ಈಗ ಒಂದು ಕಿಲೋ ವ್ಯಾಟ್‌ಗೆ ಒಬ್ಬ ಬಂಡವಾಳದಾರ 50-60 ಸಾರ ರೂ.ಗಳನ್ನು ವೆಚ್ಚ ಮಾಡಿದರೂ ಸಾಕು. ಅಂದರೆ ಹೆಚ್ಚು ಕಿ.ವ್ಯಾ ಸಾಮರ್ಥ್ಯವನ್ನು ಈಗಿನಂತೆ ಅಳವಡಿಸಿಕೊಳ್ಳಬಹುದು. ಹೆಚ್ಚು ಸಾಮರ್ಥ್ಯ ಎಂದರೆ ಹೆಚ್ಚು ವಿದ್ಯುತ್‌ ಉತ್ಪಾದನೆ, ಹೆಚ್ಚು ಯೂನಿಟ್‌ ಗ್ರಿಡ್‌ಗೆ. ಕಡಿಮೆ ಬೆಲೆಯಾದರೂ ಒಟ್ಟಾರೆ ಸಂಪಾದನೆಯಲ್ಲಿ ತೀರಾ ವ್ಯತ್ಯಾಸವಾಗುವುದಿಲ್ಲವಲ್ಲ?!

ನೀಲಕಂಠಸ್ವಾಮಿಗಳು ಗಮನ ಸೆಳೆಯುವುದು ಬೇರೆಯದೇ ಅಂಶದತ್ತ. ಒಂದು ಒಪ್ಪಂದ 25 ವರ್ಷದ ಅವಧಿ ಹೊಂದಿರುತ್ತದೆ. ಮುಂದಿನ ದಿನಗಳಲ್ಲಿ ವಿದ್ಯುತ್‌ ಯೂನಿಟ್‌ ಬೆಲೆ ಹೆಚ್ಚಾಗಬಹುದೇ ವಿನಃ ಕಡಿಮೆಯಾಗಲಿಕ್ಕಂತೂ ಸಾಧ್ಯವೇ ಇಲ್ಲ. ವರ್ಷಕ್ಕೆ ಕೇವಲ 50 ಪೈಸೆಯ ಏರಿಕೆ ಎಂದರೂ 25 ವರ್ಷಗಳ ಅವಧಿಯಲ್ಲಿ ಈಗಿನ ಯೂನಿಟ್‌ ಬೆಲೆಗೆ ಇನ್ನೂ 12 ರೂ.ಕನಿಷ್ಠ ಸೇರಿರುತ್ತದೆ. ಆದರೆ ಎಸ್ಕಾಂ ಜೊತೆಗೆ ಒಪ್ಪಂದದಲ್ಲಿ ಇರುವವನಿಗೆ ಈ ದರ ಏರಿಕೆ ಅನ್ವಯಿಸುವುದಿಲ್ಲ. ಬಿಲ್ಲಿಂಗ್‌ ಕೂಡ ಬಳಸಿದ ಯೂನಿಟ್‌ಗೆ ಹೊರತಾಗಿ ಗ್ರಿಡ್‌ಗೆ ಲಭಿಸಿದ ಯೂನಿಟ್‌ಗೆ ಅನ್ವಯಿಸುವುದರಿಂದ ಯೂನಿಟ್‌ ದರ 9.60ಕ್ಕಿಂತ ಹೆಚ್ಚಾದಂತಾಗುವುದೇ ಇಲ್ಲ!

Advertisement

ನೀಲಕಂಠಸ್ವಾಮಿ ಅವರು ತಿಂಗಳಿಗೆ ಸುಮಾರು 600 ಯುನಿಟ್‌, ವಾರ್ಷಿಕ 7 ಸಾವಿರ ಯುನಿಟ್‌ ಮಾರುತ್ತಾರೆ ಎಂದು ಅಂದಾಜಿಸಿದರೆ ಅವರ ಸೋಲಾರ್‌ ಪ್ಯಾನೆಲ್‌ಗಳಿಂದ ಆಗುವ ವಾರ್ಷಿಕ ಆದಾಯ 65 ಸಾವಿರದಷ್ಟು. 10 ವರ್ಷಕ್ಕೆ 6.5 ಲಕ್ಷ ರೂ. ಹಾಗೇ 20 ವರ್ಷಕ್ಕೆ 13 ಮತ್ತು 25 ವರ್ಷಕ್ಕೆ 20 ಲಕ್ಷ ರೂ. ಬರುವುದು ಆಕರ್ಷಣೀಯವೇ ತಾನೇ? ಕೂಡುವ, ಗುಣಿಸುವ ಲೆಕ್ಕದಷ್ಟು ವಾಸ್ತವ, ಸರಳ-ಸಹಜ ಅಲ್ಲದಿರಬಹುದು. ಆದರೆ ಸೋಲಾರ್‌ ವಿದ್ಯುತ್‌ ಉತ್ಪಾದನೆಯ ವಿಚಾರದಲ್ಲಿ ನೀಲಕಂಠಸ್ವಾಮಿ ಅವರಂಥವರ ನೈಜ ದೃಷ್ಟಾಂತಗಳು ಎಲ್ಲರಿಗೂ ಮಾರ್ಗದರ್ಶಕ.

ಮಾಹಿತಿಗೆ : 9535045064
– ಗುರು ಸಾಗರ

Advertisement

Udayavani is now on Telegram. Click here to join our channel and stay updated with the latest news.

Next