ನವದೆಹಲಿ: ಕರ್ನಾಟಕ ರಾಜ್ಯ ರಾಜಕಾರಣದ ಬೆಳವಣಿಗೆಗಳ ಮಧ್ಯೆಯೇ ಸ್ಪೀಕರ್‌ಗೆ ಸಂದೇಶ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆಯೇ ಎಂಬ ಕುರಿತು ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆ ನಡೆದಿದೆ.
ವಿಶ್ವಾಸಮತ ಕೋರುವಂತೆ ಗುರುವಾರ ಸ್ಪೀಕರ್‌ಗೆ ಸಂದೇಶ ನೀಡಿದ್ದ ರಾಜ್ಯಪಾಲ ವಜುಭಾಯಿ ವಾಲಾ, ವಿಶ್ವಾಸಮತವನ್ನು ಯಾಚಿಸುವಂತೆ ಶುಕ್ರವಾರವೂ ಎರಡು ಬಾರಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ನಿರ್ದೇಶಿಸಿದ್ದರು. ಈ ಬಗ್ಗೆ ವಿವಿಧ ಕಾನೂನು ಪರಿಣಿತರು ವಿವಿಧ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸದನಕ್ಕೆ ಸಂದೇಶ ಕಳುಹಿಸುವ ಎಲ್ಲ ಹಕ್ಕನ್ನೂ ರಾಜ್ಯಪಾಲರು ಅನುಚ್ಛೇದ 175ರ ಅಡಿಯಲ್ಲಿ ಹೊಂದಿದ್ದಾರೆ ಎಂಬುದಾಗಿ ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಹೇಳಿದ್ದಾರೆ. ರಾಜ್ಯಪಾಲರ ಸಂದೇಶಕ್ಕೆ ಸದನ ಬದ್ಧವಾಗುವುದೂ ಅಗತ್ಯವಿದೆ. ಅನುಚ್ಛೇದ 168ರಲ್ಲಿ ರಾಜ್ಯಪಾಲರು ಕೂಡ ಈ ಸದನದ ಒಂದು ಭಾಗ ಎಂದು ಸ್ಪಷ್ಟವಾಗಿ ಹೇಳುತ್ತದೆ ಎಂದು ಅವರು ಹೇಳಿದ್ದಾರೆ.
ಮತ್ತೂಬ್ಬ ಲೋಕಸಭೆ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರ್ಯ ಪ್ರಕಾರ, ಕರ್ನಾಟಕದ ಸನ್ನಿವೇಶದಲ್ಲಿ ರಾಜ್ಯಪಾಲರು ಅನುಚ್ಛೇದ 175ರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ಸದನದಲ್ಲಿ ಬಾಕಿ ಉಳಿದಿರುವ ಮಸೂದೆ ಕುರಿತಂತೆ ಮಾತ್ರವೇ ಸದನಕ್ಕೆ ರಾಜ್ಯಪಾಲರು ಸೂಚನೆ ನೀಡಬಹುದು.
ಅನುಚ್ಛೇದ-175ರಲ್ಲಿ ಉಲ್ಲೇಖೀಸಿರುವ ಅಥವಾ ಇತರ ಎಂಬುದನ್ನು ಕಲಾಪದ ಬಗ್ಗೆ ನಿರ್ದೇಶಿಸಲೂ ಬಳಸಿಕೊಳ್ಳಲಾಗದು. ರಾಜ್ಯಪಾಲರು ತೆಗೆದುಕೊಂಡಿದ್ದು ವಿಶೇಷ ಕ್ರಮ. ಈ ಹಕ್ಕನ್ನು ರಾಜ್ಯಪಾಲರು ಹೊಂದಿದ್ದಾರೆಯೋ ಅಥವಾ ಇಲ್ಲವೋ ಎಂಬುದನ್ನು ಕೋರ್ಟ್ ನಿರ್ಧಾರ ಮಾಡುತ್ತದೆ. ಸದನದ ಕಲಾಪದ ಬಗ್ಗೆ ಸ್ಪೀಕರ್‌ಗೆ ನಿಯಂತ್ರಣವಿದೆ. ಇತರ ಯಾರಿಗೂ ಇದರಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ.