ಮನಸಿನಲ್ಲಿ ಭಾವನೆಗಳ ಮೆರವಣಿಗೆ ಎಂದರೆ ಬದುಕಿನಲ್ಲಿ ಅದೆಷ್ಟು ಚಂದದ ಅನುಭೂತಿ ಅಲ್ಲವೇ? ಆದರೆ ಭಾವನೆಗಳು ಬರೀ ಸಂಭ್ರಮವನ್ನಷ್ಟೇ ತುಂಬಿಕೊಂಡು ಬರುವುದಿಲ್ಲ. ಕೆಲವೊಮ್ಮೆ ಹೇಳತೀರದ ದುಃಖ, ಮೌನದ ಕಟ್ಟೆ ಒಳಗೆ ಅಡಗಿ ಕುಳಿತ ಹತಾಶೆ, ನಿಗ್ರಹಿಸಿಕೊಂಡ ಕೋಪ – ಮುನಿಸು, ಹೇಳದೇ ಉಳಿದ ಮಾತಿನ ತೊಳಲಾಟ, ದ್ವೇಷ ಎಲ್ಲವನ್ನು ಹೊತ್ತು ತರುತ್ತವೆ.ಆದರೆ ಇದೇ ಭಾವನೆಗಳ ಕೈಗೆ ನಮ್ಮ ಮನಸನ್ನು ಕೊಟ್ಟರೆ ಎದ್ದು ನಿಲ್ಲಬೇಕಾದ ಬದುಕು ಕ್ಷಣ ಮಾತ್ರದಲ್ಲಿ ಕುಗ್ಗಿ ಮುನ್ನಡೆಯುವ ಭರವಸೆಯನ್ನೇ ಕಳೆದುಕೊಂಡು ಬಿಡುತ್ತದೆ. ಇದು ಪ್ರತಿಯೊಬ್ಬರ ಬದುಕಿನ ನೈಜ ಸತ್ಯ.
ಬಾಲ್ಯದಿಂದ “ಬದುಕು ಒಂದು ಚಲಿಸುವ ದೋಣಿ ಇದ್ದಂತೆ “ಎಂದು ಹೇಳಿ ಬೆಳೆಸುವ ನಮ್ಮ ಹಿರಿಯರು ಅದರ ಅರ್ಥ ತಿಳಿಸಿ ಹೇಳುವುದರಲ್ಲಿ ಬಹಳಷ್ಟು ಸಲ ಸೋತು ಬಿಡುತ್ತಾರೆ. ಕೆಲವೊಮ್ಮೆ ನಾವೆಷ್ಟೋ ಮಾತುಗಳನ್ನು ನುಂಗಿ ಬಿಟ್ಟಿರುತ್ತೇವೆ. ಯಾರೋ ಏನೋ ಹೇಳಿದರೆಂದು ತಲೆ ಕೆಡಿಸಿಕೊಂಡು ನಮ್ಮ ಕನಸುಗಳನ್ನೇ ಬಲಿ ಕೊಟ್ಟಿರುತ್ತೇವೆ. ತಿರುಗಿ ಬಿದ್ದರೆ ಅಪಮಾನವಾದೀತು ಎಂಬ ಭಯಕ್ಕೆ ಅವ್ಯಕ್ತ ಭಾವದ ಬಣ್ಣ ಬಳಿಯುತ್ತೇವೆ.ಎಲ್ಲರೂ ನಮ್ಮವರು ಎಂಬ ಪರಿಕಲ್ಪನೆಯಲ್ಲಿ ಅವರು ನಮ್ಮಲ್ಲಿ ಬೆರಳು ಮಾಡಿ ತೋರಿಸಿದ ಅಷ್ಟು ತಪ್ಪುಗಳು ನಮ್ಮ ನ್ಯೂನ್ಯತೆಗಳೆಂದು ಭಾವಿಸಿ ನಮ್ಮನ್ನೇ ನಾವು ತಿರಸ್ಕರಿಸಿಕೊಳ್ಳುವ ಹಂತಕ್ಕೆ ಬಂದು ತಲುಪಿ ಬಿಡುತ್ತೇವೆ.
ನಮ್ಮಲ್ಲಿನ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕೆಂದರೆ ನಮ್ಮ ವಿಚಾರಧಾರೆಯ ಕುರಿತು ನಾವು ಧ್ವನಿ ಎತ್ತಲೇ ಬೇಕು. ಇದು ಖಂಡಿತವಾಗಿಯೂ ಅಹಂಕಾರ ಎನಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ನಮ್ಮವರು ಎನ್ನುವ ಭಾವನೆಗಳಿಗಿಂತ ನಾನು ಎಂಬುದರ ಮೇಲಿನ ನಂಬಿಕೆ ಗುರಿ ಮುಟ್ಟಲು ಸಹಾಯಕಬಲ್ಲದು.
ಹಾಗಾದರೆ ಭಾವನೆಗಳು ತಪ್ಪೇ? ಎಂಬ ಪ್ರಶ್ನೆ ಹುಟ್ಟಬಹುದು.ಅಲ್ಲವೇ ಅಲ್ಲ.ಜಗತ್ತು ನಿಂತಿರುವುದೇ ಭಾವನೆಗಳ ಮೇಲೆ.ಬದುಕ ಜಾತ್ರೆಗೆ ಮನಸೇ ದೋಣಿ.ಆದರೆ ಚಲಿಸುವ ದೋಣಿಗೆ ನೀರಿನ ಆಳ ಅಗಲ ಹೇಗೆ ಎತ್ತ ಚಲಿಸಬೇಕು ಒಂದೂ ತಿಳಿದಿರುವುದಿಲ್ಲ.ಭಾವನೆಗಳ ಗಾಳಿ ಬಂದ ದಿಕ್ಕಿಗೆ ಮುಖ ಮಾಡಿ ನಡೆದು ಬಿಡುತ್ತದೆ.ಆದರೆ ಅದನ್ನು ನಿಯಂತ್ರಿಸುವ ಶಕ್ತಿ ನಾವಿಕನಿಗಿದೆ.ಆತ ಇತರರಿಂದ ಬರುವ ಋಣಾತ್ಮಕ ಅಂಶಗಳ ನೀರನ್ನು ಹಿಂದೆ ತಳ್ಳಿದರೆ ಮಾತ್ರ ದೋಣಿ ಸರಿಯಾದ ದಿಕ್ಕಿನಲ್ಲಿ ಮುಂದೆ ಸಾಗಬಲ್ಲದು.ದಡ ಮುಟ್ಟುವವರೆಗೂ ಅವನಿಗೆ ಈ ಕ್ರಿಯೆ ಅನಿವಾರ್ಯ.ದೋಣಿ ಎಂಬ ಮನಸು ನಮ್ಮ ಹಿಡಿತದಲ್ಲಿರಬೇಕೇ ಹೊರತು ಅದರ ಹಿಡಿತದಲ್ಲಿ ನಾವಿರಬಾರದು.
ಇದು ನಮ್ಮ ಬದುಕು ಎಂದ ಮೇಲೆ ಇದನ್ನು ಮುನ್ನಡೆಸುವಷ್ಟು ಶಕ್ತಿ ಸಾಮರ್ಥ್ಯ ನಮಗೆ ಖಂಡಿತ ಬೇಕು. ಯಾರೋ ಒಬ್ಬರು ಬಂದು ಕೊಂಕು ನುಡಿದ ಮಾತ್ರಕ್ಕೆ ಅವರು ಸರಿ ಎಂದು ಖಂಡಿತ ಅಲ್ಲ.ನಡೆವ ಹಾದಿಯಲ್ಲಿ ಬಿದ್ದೆ ಎಂದ ಮಾತ್ರಕ್ಕೆ ನಡಿಗೆಯ ವೇಗ ಬದಲಿಸಬೇಕೇ ಹೊರತು ದಾರಿ ಬದಲಿಸಬಾರದು.ಏಳು ಬೀಳು ಭಗವಂತನನ್ನೇ ಬಿಟ್ಟಿಲ್ಲ. ನಾವು ನೀವು ಯಾವ ಲೆಕ್ಕ.ಸಮಸ್ಯೆ ಬಂದಾಗ ಸಾವು ನೋವುಗಳೇ ಪರಿಹಾರವಲ್ಲ. ಏಕೆಂದರೆ ಬದುಕು ದೊಡ್ಡದು ನೋವಿಗಿಂತಲೂ..ಸಾವಿಗಿಂತಲೂ…
-ಶಿಲ್ಪಾ ಪೂಜಾರಿ
ಎಂಇಎಸ್ ಮಹಾವಿದ್ಯಾಲಯ ಶಿರಸಿ