ದುಬೈ: “ಪಾಕಿಸ್ಥಾನ ತಂಡ ನಮಗಿಂತ ಅತ್ಯುತ್ತಮ ಪ್ರದರ್ಶನ ತೋರಿದೆ ಎಂಬುದನ್ನು ಒಪ್ಪಿಕೊಳ್ಳಲು ನಾಚಿಕೆಪಡಬೇಕಾದ ಅಗತ್ಯವಿಲ್ಲ. ಈ ಸೋಲಿನಿಂದ ನಮ್ಮ ವಿಶ್ವಕಪ್ ಅಭಿಯಾನ ಅಂತ್ಯವಾಗಿಲ್ಲ’ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
“ಪಾಕಿಸ್ಥಾನ ತಂಡ ನಮ್ಮನ್ನು ಮೀರಿಸಿದ ಪ್ರದರ್ಶನ ತೋರಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಪಂದ್ಯದಲ್ಲಿ ನಮಗೆ ಯಾವುದೇ ಅವಕಾಶವಿರಲಿಲ್ಲ. ಟಾಸ್ ಹಾಗೂ ರಾತ್ರಿಯ ಮಂಜು ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರಿತು’ ಎಂದು ಕೊಹ್ಲಿ ಹೇಳಿದರು.
“ಪಾಕಿಸ್ಥಾನದ ಆಟಗಾರರು ವೃತ್ತಿಪರರರಾಗಿದ್ದಾರೆ. ಹಾಗಾಗಿ ಅವರಿಗೆ ಗೆಲುವಿನ ಶ್ರೇಯ ಸಲ್ಲಬೇಕು. ನಾವು ಗರಿಷ್ಠ ಪ್ರಯತ್ನ ಮಾಡಿದ್ದೇವೆ. ಸೋಲು-ಗೆಲುವು ಕ್ರೀಡೆಯಲ್ಲಿ ಸಾಮಾನ್ಯ. ಇದಕ್ಕೆ ಬೇರೆ ರೀತಿಯ ಬಣ್ಣ ಹಚ್ಚುವುದು ಸರಿಯಲ್ಲ’ ಎಂದು ಕೊಹ್ಲಿ ಟೀಕಿಸಿದವರನ್ನು ಕುಟುಕಿದರು.
ಇದನ್ನೂ ಓದಿ:ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್
“ಒಂದು ಪಂದ್ಯದ ಸೋಲಿನಿಂದ ನಮ್ಮ ವಿಶ್ವಕಪ್ ಅಭಿಯಾನ ಅಂತ್ಯವಾಗಲಿದೆ ಎಂದು ನಾವು ಭಾವಿಸುವುದಿಲ್ಲ. ಪಾಕ್ ವಿರುದ್ಧ ನಾವು ಉತ್ತಮ ಕ್ರಿಕೆಟ್ ಆಡಿಲ್ಲ, ಇದನ್ನು ಒಪ್ಪಿಕೊಳ್ಳಬೇಕು. ಆದರೆ ಮುಂದಿನ ಪಂದ್ಯದಲ್ಲಿ ಎಲ್ಲ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ಗೆಲುವಿನ ಹಳಿ ಏರುವ ಅವಕಾಶ ಇದ್ದೇ ಇದೆ. ಇದು ಖಚಿತ’ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಪಂದ್ಯಕ್ಕೆ ರೋಹಿತ್ ಬದಲು ಇಶಾನ್ ಕಿಶನ್ ಅವರನ್ನು ಆಡಿಸಿ ಎಂದು ಪಾಕ್ ಪತ್ರಕರ್ತರೊಬ್ಬರ ಸಲಹೆಗೆ, “ನಿಮಗೆ ವಿವಾದವೇ ಮುಖ್ಯವಾಗುವುದಾದರೆ ಮೊದಲೇ ತಿಳಿಸಿ. ಅದಕ್ಕೆ ತಕ್ಕಂತೆ ಉತ್ತರಿಸುತ್ತೇನೆ’ ಎಂದು ಚಾಟಿ ಬೀಸಿದರು!