Advertisement

ಗಬ್ಬರ್‌ ಟೀಕೆಯ ಹಿಂದೆ ಅನಾಲಿಟಿಕಾ ‘ಕೈ’ವಾಡ

06:00 AM Mar 23, 2018 | Karthik A |

ಹೊಸದಿಲ್ಲಿ: ಲಂಡನ್‌ ಮೂಲದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ದತ್ತಾಂಶ ಹಗರಣ ಬಯಲಾದ ಬೆನ್ನಲ್ಲೇ ಭಾರತದಲ್ಲಿ ಶುರುವಾದ ಬಿಜೆಪಿ, ಕಾಂಗ್ರೆಸ್‌ ನಡುವಿನ ವಾಕ್ಸಮರ ಗುರುವಾರವೂ ಮುಂದುವರಿದಿದೆ. ಗುರುವಾರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ವಿರುದ್ಧ ಮತ್ತಷ್ಟು ಆರೋಪಗಳನ್ನು ಮಾಡಿದರು. ಗುಜರಾತ್‌ ಚುನಾವಣೆ ವೇಳೆ ರಾಹುಲ್‌ ಗಾಂಧಿ ಬಳಸಿದ್ದ ‘ಗಬ್ಬರ್‌ ಸಿಂಗ್‌ ಟ್ಯಾಕ್ಸ್‌’ (ಜಿಎಸ್‌ಟಿ ಬಗ್ಗೆ), ‘ವಿಕಾಸ್‌ ಗಾನ್‌ ಕ್ರೇಜಿ’ (ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಬಗ್ಗೆ) ಎಂಬ ಟೀಕಾಸ್ತ್ರಗಳ ಹಿಂದೆ ಅನಾಲಿಟಿಕಾ ಸಂಸ್ಥೆಯ ಕೈಚಳಕವಿತ್ತು ಎಂದು ಅವರು ಆರೋಪಿಸಿದರು.  

Advertisement

ಬುಧವಾರದ ತಮ್ಮ ಸುದ್ದಿಗೋಷ್ಠಿಯಲ್ಲೇ, ಅನಾಲಿಟಿಕಾ ಹಾಗೂ ಕಾಂಗ್ರೆಸ್‌ ನಡುವಿನ ನಂಟಿನ ಬಗ್ಗೆ ಸಚಿವರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಟ್ವಿಟರ್‌ ಮೂಲಕ ಪ್ರತ್ಯುತ್ತರ ಕೊಟ್ಟಿದ್ದ ರಾಹುಲ್‌ ಗಾಂಧಿ, ಇರಾಕ್‌ನಲ್ಲಿ 39 ಭಾರತೀಯರು ಹತ್ಯೆಯಾಗಿದ್ದನ್ನು ಮುಚ್ಚಿದ್ದ ಕೇಂದ್ರ ಸರಕಾರದ ಕ್ರಮವನ್ನು ಪ್ರಶ್ನಿಸಿದ್ದಕ್ಕಾಗಿ, ಜನರ ಗಮನ ಬೇರೆಡೆಗೆ ಸೆಳೆಯಲು ಕೇಂದ್ರ ಸರಕಾರ ಈಗ ಅನಾಲಿಟಿಕಾ ವಿವಾದವನ್ನು ಕೈಗೆತ್ತಿಕೊಂಡಿದೆ ಎಂದು ಆರೋಪಿಸಿದ್ದರು.

ರಾಜಕೀಯ ಸಲ್ಲ: ಇದೇ ವೇಳೆ, ರಾಹುಲ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸಚಿವರು, “ಕಾಂಗ್ರೆಸ್‌, ಸಾವಿನಲ್ಲೂ ರಾಜಕೀಯ ಮಾಡುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, “ಇರಾಕ್‌ನಲ್ಲಿ ಹತ್ಯೆಯಾದ ಭಾರತೀಯರ ಮೃತದೇಹಗಳ ಬಗ್ಗೆ ದಯವಿಟ್ಟು ರಾಜಕಾರಣ ಮಾಡಬಾರದು ಎಂದು ರಾಹುಲ್‌ ಅವರಲ್ಲಿ ಕೇಳಿಕೊಳ್ಳುತ್ತೇನೆ” ಎಂದರು. 

ಜುಕರ್‌ಬರ್ಗ್‌ ಕ್ಷಮೆ, ಸ್ಪಷ್ಟನೆ
ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ, ಕೋಟ್ಯಂತರ ಫೇಸ್‌ಬುಕ್‌ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆಯಾಗಿದ್ದರ ಹಿನ್ನೆಲೆಯಲ್ಲಿ, ಫೇಸ್‌ಬುಕ್‌ ಮಾಲಕ ಮಾರ್ಕ್‌ ಜುಕರ್‌ಬರ್ಗ್‌ ಕ್ಷಮೆ ಕೋರಿದ್ದಾರೆ. ಅಲ್ಲದೆ, ಮಾಹಿತಿ ಸೋರಿಕೆ ತಡೆಗಟ್ಟಲು ‘ಕೃತಕ ಬುದ್ಧಿಮತ್ತೆ’ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌) ಉಳ್ಳ ಟೂಲ್‌ಗ‌ಳನ್ನು ಪ್ರಯೋಗಿಸುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ. ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಈ ಕುರಿತು ಬರೆದಿರುವ ಅವರು, “ಹೊಸ ಟೂಲ್‌ಗ‌ಳ ಮೂಲಕ ನಕಲಿ ಥರ್ಡ್‌ ಪಾರ್ಟಿ ಆ್ಯಪ್‌ ಗಳನ್ನು ಪತ್ತೆಹಚ್ಚಲಾಗುವುದು. ಕಳೆದ ವರ್ಷದ ಫ್ರಾನ್ಸ್‌ ಚುನಾವಣೆ ವೇಳೆ ಇಂಥ ಟೂಲ್‌ಗ‌ಳನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದೇವೆ. ಮುಂದಿನ ವರ್ಷ ಭಾರತದಲ್ಲಿ ನಡೆಯುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಫೇಸ್‌ಬುಕ್‌ಗಳಲ್ಲೂ ಇಂಥ ಸೌಲಭ್ಯ ಕಲ್ಪಿಸುತ್ತೇವೆ” ಎಂದಿದ್ದಾರೆ.

ಟ್ರಂಪ್‌ಗೆ ಖುಷಿಯೋ ಖುಷಿ?
2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ತಾವು ಅನಾಲಿಟಿಕಾ ಸಂಸ್ಥೆಯನ್ನು ಬಳಸಿಕೊಂಡಿದ್ದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. “ಚುನಾವಣಾ ಪ್ರಚಾರದ ವೇಳೆ ಟ್ರಂಪ್‌ಗೆ, ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವುದು ಗೊತ್ತಿಲ್ಲ ಎಂದು ಕೆಲವರು ಲೇವಡಿ ಮಾಡಿದ್ದರು. ಈಗ, ನಾನು ಆ ಬಗ್ಗೆ ಹೆಚ್ಚೇನೂ ಹೇಳಲು ಇಷ್ಟಪಡುತ್ತಿಲ್ಲ” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next