Advertisement

ಭ್ರಷ್ಟ ಮನಸ್ಥಿತಿ ಬದಲಾದರೆ ಮಾತ್ರ ಬ್ರೇಕ್‌ ಸಹಿಷ್ಣು ಮನೋಭಾವ ತೊಲಗಲಿ

03:45 AM Mar 09, 2017 | Harsha Rao |

ಭ್ರಷ್ಟಾಚಾರ ಸಹಜ, ಲಂಚ ತೆಗೆದುಕೊಂಡರೂ ಕೆಲಸ ಮಾಡಿಕೊಡುತ್ತಾರಲ್ಲ ಎಂಬ ಸಹಿಷ್ಣು ಮನೋಭಾವ ಜನರ ಮನಸ್ಸಿನಿಂದ ಬೇರು ಸಹಿತ ಕಿತ್ತುಹೋಗಬೇಕು. ಬರೇ ಕಾನೂನು ಕ್ರಮಗಳಿಂದ ಅದನ್ನು ಮೂಲೋತ್ಪಾಟನೆ ಮಾಡುವುದು ಅಸಾಧ್ಯ.

Advertisement

ಏಷ್ಯಾ ಫೆಸಿಫಿಕ್‌ ವಲಯದಲ್ಲಿರುವ ದೇಶಗಳ ಪೈಕಿ ಅತಿ ಹೆಚ್ಚು ಭ್ರಷ್ಟಾಚಾರವಿರುವುದು ಭಾರತದಲ್ಲಿ ಎಂಬ ಅಂಶ ಟ್ರಾನ್ಸ್‌ಫ‌ರೆನ್ಸಿ ಇಂಟರ್‌ನ್ಯಾಶನಲ್‌ ನಡೆಸಿದ ಸಮೀಕ್ಷೆಯಲ್ಲಿ ಬಯಲಾಗಿದೆ. ಇದರಲ್ಲೇನೋ ವಿಶೇಷವಿಲ್ಲ. ಟ್ರಾನ್ಸ್‌ಫ‌ರೆನ್ಸಿ ಇಂಟರ್‌ನ್ಯಾಶನಲ್‌ ಎಂದಲ್ಲ, ವರ್ಷದುದ್ದಕ್ಕೂ ವಿವಿಧ ಸಂಸ್ಥೆಗಳು ನಡೆಸುವ ಭ್ರಷ್ಟಾಚಾರದ ಸಮೀಕ್ಷೆಗಳಲ್ಲಿ ಭಾರತಕ್ಕೊಂದು ಸ್ಥಾನ ಇದ್ದೇ ಇರುತ್ತದೆ ಮತ್ತು ಬಹುತೇಕ ಸಂದರ್ಭಗಳಲ್ಲಿ ಇದು ಅಗ್ರಸ್ಥಾನವೇ ಆಗಿರುತ್ತದೆ. ಇದು ಹೀಗೇಕೆ ಎಂದು ಕೇಳಿದರೆ ಭ್ರಷ್ಟಾಚಾರ ಎನ್ನುವುದು ಭಾರತದಲ್ಲಿ ಜೀವನ ವಿಧಾನವೇ ಆಗಿದೆ. ರಾಜಕೀಯದಿಂದ ಹಿಡಿದು ನ್ಯಾಯಾಂಗದ ತನಕ ಭ್ರಷ್ಟಾಚಾರ ಸರ್ವವ್ಯಾಪಿ. ಹೀಗಾಗಿ ಭ್ರಷ್ಟಾಚಾರದ ಕುರಿತು ಸಮೀಕ್ಷೆಗಳು ನೀಡುವ ಅಂಕಿಅಂಶಗಳು ಬೆಚ್ಚಿಬೀಳಿಸುವುದೂ ಇಲ್ಲ, ಅಚ್ಚರಿ ಹುಟ್ಟಿಸುವುದೂ ಇಲ್ಲ. ನಿಜವಾಗಿ ಹೇಳುವುದಾದರೆ ಜನರು ಇಂತಹ ಸಮೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಏಕೆಂದರೆ ಭ್ರಷ್ಟಾಚಾರಕ್ಕೆ ಅವರು ಅಷ್ಟು ಒಗ್ಗಿ ಹೋಗಿದ್ದಾರೆ. 

ಟ್ರಾನ್ಸ್‌ಫ‌ರೆನ್ಸಿ ಇಂಟರ್‌ನ್ಯಾಶನಲ್‌ ಸಮೀಕ್ಷೆಯ ವರದಿಯ ಪ್ರಕಾರ ಪೊಲೀಸರು ಅತಿ ಭ್ರಷ್ಟರು. ಬಿಸಿನೆಸ್‌ ಎಕ್ಸಿಕ್ಯೂಟಿವ್‌ಗಳು, ಸ್ಥಳೀಯಾಡಳಿತ ಮಂಡಳಿಗಳ ಸದಸ್ಯರು, ಸಂಸದರು, ತೆರಿಗೆ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು ಹೀಗೆ ಎಲ್ಲರ ಭ್ರಷ್ಟಾಚಾರದ ಪ್ರಮಾಣವನ್ನು ಈ ವರದಿ ಅಳೆದಿದೆ. ಅಂಕಿಅಂಶಗಳಲ್ಲಿ ಹೆಚ್ಚು ಕಡಿಮೆಯಾಗಿದ್ದರೂ ಉಳಿದಂತೆ ಇವೆಲ್ಲ ಹಳೇ ವಿಷಯಗಳೇ. ಧಾರ್ಮಿಕ ಮುಖಂಡರಲ್ಲೂ ಭ್ರಷ್ಟಾಚಾರವಿದೆ ಎಂಬ ಅಂಶ ಮಾತ್ರ ಈ ವರದಿಯಲ್ಲಿ ತುಸು ಕುತೂಹಲ ಕೆರಳಿಸಿದೆ. ಇಷ್ಟರ ತನಕ ಯಾರೂ ಧಾರ್ಮಿಕ ಕ್ಷೇತ್ರದ ಭ್ರಷ್ಟಾಚಾರದ ಬಗ್ಗೆ ಸಮೀಕ್ಷೆ ನಡೆಸಿರಲಿಲ್ಲ. ಏಷ್ಯಾ ಫೆಸಿಫಿಕ್‌ ವಲಯದಲ್ಲಿ ಐವರಲ್ಲಿ ನಾಲ್ಕು ಮಂದಿ ಧಾರ್ಮಿಕ ಮುಖಂಡರು ಭ್ರಷ್ಟರು ಎಂದು ಸಮೀಕ್ಷೆ ಹೇಳುತ್ತಿದೆ. 

ಸರಳವಾಗಿ ಹೇಳುವುದಾದರೆ ಭ್ರಷ್ಟಾಚಾರ ಎಂದರೆ ಲಂಚ ನೀಡುವುದು. ಲಂಚದ ಸ್ವರೂಪ ಬೇರೆಬೇರೆಯಾಗಿರಬಹುದು, ಅದರ ಉದ್ದೇಶ ಮಾತ್ರ ಒಂದೇ. ಅದು ಕಾನೂನಿನ ಕಣ್ಣಿಗೆ ಮಣ್ಣೆರಚಿ ಅಥವಾ  ಕಾನೂನು ಉಲ್ಲಂ ಸಿ ಸ್ವಂತ ಲಾಭ ಮಾಡಿಕೊಳ್ಳುವುದು. ಸ್ವಜನ ಪಕ್ಷಪಾತವೂ ಭ್ರಷ್ಟಾಚಾರವೇ. ಆರು ದಶಕಗಳ ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿ ಭ್ರಷ್ಟಾಚಾರಕ್ಕೆ ಜನರು ಎಷ್ಟು ಹೊಂದಿಕೊಂಡಿದ್ದಾರೆ ಲಂಚ ನೀಡುವುದೂ ತೆಗೆದುಕೊಳ್ಳುವುದೂ ಅತ್ಯಂತ ಸಹಜ ಎಂಬಂತಾಗಿದೆ. ಭ್ರಷ್ಟಾಚಾರದ ಆರೋಪ ಹೊತ್ತು ಸರಕಾರಗಳು ಉರುಳಿವೆ, ಘಟಾನುಘಟಿ ನಾಯಕರು ಜೈಲಿಗೆ ಹೋಗಿದ್ದಾರೆ. ಆದರೆ ವ್ಯವಸ್ಥೆ ಸುಧಾರಿಸಿಲ್ಲ. ಹಾಗೆಂದು ಭ್ರಷ್ಟಾಚಾರದ ವಿರುದ್ಧ ಹೋರಾಟವೇ ಆಗಿಲ್ಲ ಎಂದಲ್ಲ.

ಕಾಲಕಾಲಕ್ಕೆ ಅದರ ವಿರುದ್ಧ ದೊಡ್ಡ ಮಟ್ಟದಲ್ಲಿ ಆಂದೋಲನ ನಡೆಸಲಾಗಿದೆ. ಅಂತೆಯೇ ಭ್ರಷ್ಟಾಚಾರ ನಿಗ್ರಹಕ್ಕಾಗಿ ನೂರಾರು ಕಾಯಿದೆಗಳು ರೂಪುಗೊಂಡಿವೆ. ಅದು ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವುದರಿಂದ ಯಾವ ಕ್ರಮದಿಂದಲೂ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ಮೂಲೋತ್ಪಾಟನೆ ಮಾಡಲು ಸಾಧ್ಯವಾಗಿಲ್ಲ. 

Advertisement

ಎಲ್ಲ ಕ್ರಮಗಳು ಭ್ರಷ್ಟಾಚಾರವೆಂಬ ಮಂಜು ಪರ್ವತದ ತುದಿಯನ್ನು ಮಾತ್ರ ಸ್ಪರ್ಶಿಸಿವೆಯೇ ಹೊರತು ಅದರ ಮೂಲಕ್ಕೆ ತಲುಪಿಲ್ಲ. ಭ್ರಷ್ಟಾಚಾರದ ಮೂಲವಿರುವುದು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ. ರಾಜಕೀಯ ಪಕ್ಷಗಳು ಮತ್ತು ಚುನಾವಣೆಯಲ್ಲಿ ಅಕ್ರಮ ಹಣದ ಹರಿವನ್ನು ತಡೆದರೆ ರಾಜಕೀಯ ವ್ಯವಸ್ಥೆಯ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಮೋದಿ ನೇತೃತ್ವದ ಸರಕಾರ ಕೆಲವೊಂದು ದಿಟ್ಟ ಕ್ರಮಗಳನ್ನು ಕೈಗೊಂಡಿರುವುದು ಇಂದಲ್ಲ ನಾಳೆಯಾದರೂ ವ್ಯವಸ್ಥೆ ಸ್ವತ್ಛವಾದೀತು ಎಂಬ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಭ್ರಷ್ಟಾಚಾರಕ್ಕೆ ರಾಜಕೀಯ ವ್ಯವಸ್ಥೆಯನ್ನು ಉತ್ತರದಾಯಿ ಮಾಡದೆ ಕೇವಲ ಭ್ರಷ್ಟ ರಾಜಕಾರಣಿಗಳನ್ನು ಅಥವಾ ಅಧಿಕಾರಿಗಳನ್ನು ಮಾತ್ರ ಹಿಡಿದರೆ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವುದಿಲ್ಲ. 

ಭ್ರಷ್ಟಾಚಾರ ಬದುಕಿನ ಸಹಜ ರೀತಿ ಎಂಬ ಮನೋಭಾವ ಬದಲಾಗಬೇಕು. ಭ್ರಷ್ಟಾಚಾರ ನಿಗ್ರಹದ ಕಾನೂನು ಕ್ರಮಗಳ ಜತೆಗೆ ಲಂಚ ಸಹಜ, ಲಂಚ ತೆಗೆದುಕೊಂಡರೂ ಕೆಲಸ ಮಾಡಿಕೊಳ್ಳುತ್ತಾರಲ್ಲ ಎಂಬ “ಸ್ಟಾಕ್‌ಹೋಮ್‌ ಸಿಂಡ್ರೋಮ್‌’ಗೆ ಸಮನಾದ ಸ್ವೀಕೃತಿಯ, ಸಹಿಷ್ಣುತೆಯ ಮನೋಭಾವ ಜನರ ಮನಸ್ಸಿನಿಂದ ದೂರವಾದಾಗ ಮಾತ್ರ ಭ್ರಷ್ಟಾಚಾರಕ್ಕೆ ಬ್ರೇಕ್‌ ಬೀಳಲು ಸಾಧ್ಯ. ಒಂದೇ ಕೈಯಿಂದ ಚಪ್ಪಾಳೆಯಾಗದಲ್ಲ!

Advertisement

Udayavani is now on Telegram. Click here to join our channel and stay updated with the latest news.

Next