Advertisement
ತಮಗೆಲ್ಲ ಗೊತ್ತಿರುವ ಹಾಗೆ ಕಾಸರಗೋಡಿನಲ್ಲಿ ಅನೇಕ ಪ್ರತಿಕೂಲಗಳ ನಡುವೆ ಬದುಕಬೇಕಾದ ಪರಿಸ್ಥಿತಿ ನಮಗೆ ಅನಿವಾರ್ಯವಾಗಿ ಪ್ರಾಪ್ತವಾಗಿದೆ. ಇದಕ್ಕೆ ರಾಜ್ಯ ಪುನರ್ ವಿಂಗಡಣೆ ಸಂದರ್ಭದಲ್ಲಿ ನಡೆದ ಪ್ರಮಾದವೇ ಮುಖ್ಯವಾದ ಕಾರಣವಾಗಿದ್ದು, ಈಗ ನಮ್ಮ ಮುಂದಿರುವ ಜ್ವಲಂತ ಪ್ರಶ್ನೆ ಎಂದರೆ – To be or Not to be ಎಂಬ ಹಾಗೆ – ಬಂದದ್ದನ್ನೆಲ್ಲ ಪ್ರಾರಬ್ಧವೆಂದು ಭಾವಿಸಿ ಅದನ್ನು ಅನುಭವಿಸುತ್ತಾ ಬರುವುದೇ ಅಥವಾ ಈ ಸಮಸ್ಯೆಯಿಂದ ಹೊರ ಬರುವುದಕ್ಕೆ ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಕ್ಕೆ ರಚನಾತ್ಮಕವಾದ ಹೋರಾಟದಲ್ಲಿ ನಿರತರಾಗವುದೇ?
Related Articles
Advertisement
ಅಲ್ಲಿಯವರೆಗೆ ಇಲ್ಲಿನ ಸಂಸ್ಕೃತಿಯನ್ನು ಉಳಿಸುವುದಕ್ಕೆ ಬೇಕಾದ ಒಂದೇ ಒಂದು ಸೂತ್ರವೆಂದರೆ ಕರ್ನಾಟಕದೊಂದಿಗೆ ಕಾಸರಗೋಡಿನ ಸಾಂಸ್ಕೃತಿಕ ವಿಲೀನೀಕರಣವನ್ನು ಸಾಧಿಸುವುದು. ಶಾಸನಾತ್ಮಕವಾಗಿ ಇದು ಸಂಭಾವ್ಯವಾದರೆ ಈ ಯೋಜನೆಯಂತೆ ಕಾಸರಗೋಡನ್ನು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಕರ್ನಾಟಕದ ಒಳನಾಡು ಎಂಬಂತೆ ನಡೆಸಿಕೊಳ್ಳಬೇಕು. ಮಾತ್ರವಲ್ಲ ಗಡಿನಾಡು ಎಂಬ ನೆಲೆಯಲ್ಲಿ ವಿಶೇಷವಾದ ಸೌಲಭ್ಯಗಳಿಗೆ ಅವಕಾಶವನ್ನು ಕಲ್ಪಿಸಬೇಕು. ಇದಕ್ಕಾಗಿ ಕಾಸರಗೋಡು ಸಾಂಸ್ಕೃತಿಕ ಪ್ರಾಧಿಕಾರವೊಂದನ್ನು ಕರ್ನಾಟಕ ಸರಕಾರ ಸ್ಥಾಪಿಸಬೇಕು. ಅದರ ಉಸ್ತುವಾರಿಯನ್ನು ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರಿಗೆ ವಹಿಸಿ ಎಲ್ಲ ಅಕಾಡೆಮಿಗಳ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುಸ್ತಕ ಪ್ರಾಧಿಕಾರಗಳ ಅಧ್ಯಕ್ಷರು ಅಥವಾ ಪ್ರತಿನಿಧಿಗಳು ಅದರಲ್ಲಿ ಸದಸ್ಯರಾಗಬೇಕು. ಕಾಸರಗೋಡಿನಿಂದಲೂ ಅರ್ಹತೆಯ ಮೇಲೆ ಪ್ರತಿನಿಧಿಗಳ ಸೇರ್ಪಡೆ ಯಾಗಬೇಕು. ಕರ್ನಾಟಕದ ಬಜೆಟಿನಲ್ಲಿ ಪ್ರತ್ಯೇಕ ಅನುದಾನವನ್ನು ಕಾಸರಗೋಡು ಪ್ರಾಧಿಕಾರಕ್ಕೆ ನೀಡಿ ಅದರ ಮೂಲಕ ಕಾಸರಗೋಡಿನ ಸಾಂಸ್ಕೃತಿಕ, ಶೈಕ್ಷಣಿಕ ಸಮೃದ್ಧಿಯನ್ನು ಸಾಧಿಸುವುದಕ್ಕೆ ಸರಕಾರ ಬದ್ಧವಾಗಬೇಕು.
ಕೇರಳ ಸರಕಾರದಿಂದ ಸಂವಿಧಾನಬದ್ಧವಾಗಿ ಸಿಗಲೇ ಬೇಕಾದ ಸವಲತ್ತು ಸೌಲಭ್ಯಗಳನ್ನು ಪಡೆಯುವುದಕ್ಕಿರುವ ಎಲ್ಲ ಪ್ರಯತ್ನಗಳನ್ನೂ ಸಂವಾದಿಯಾಗಿ ಮುಂದುವರಿಸುತ್ತಲೇ ಇರಬೇಕು. ಯಾವ ಕಾರಣಕ್ಕೂ ನಾವಿಲ್ಲಿ ದ್ವಿತೀಯ ದರ್ಜೆಯ ಪ್ರಜೆಗಳಾಗಿ ಬದುಕುವ ದಯನೀಯ ಪರಿಸ್ಥಿತಿ ಉಂಟಾಗಬಾರದು.
ಹೀಗೆ ರಚನಾತ್ಮಕವಾಗಿ-ಪ್ರಾಯೋಗಿಕವಾಗಿ ಮುಂದುವರಿಯ ಬೇಕಾದರೆ ಕಾಸರ ಗೋಡಿನಿಂದ ಒಕ್ಕೊರಲಿನ ಒಗ್ಗಟ್ಟಿನ ಕರೆಯೊಂದು ಮೂಡಿಬರಬೇಕು. ಈ ವಿಷಯಗಳಲ್ಲಿ ನಾವೆಲ್ಲರೂ ಒಂದು ಎನ್ನುವ ಸಂದೇಶ ಕೇರಳಕ್ಕೂ ಕರ್ನಾಟಕಕ್ಕೂ ಪರಿಣಾಮಕಾರಿಯಾದ ರೀತಿಯಲ್ಲಿ ಮುಟ್ಟಬೇಕು. ಸಮಸ್ತ ಕನ್ನಡಿಗರ ಹೃದಯವನ್ನು ಅದು ತಟ್ಟಬೇಕು.
ಭಿನ್ನತೆಯಲ್ಲಿ ಏಕತೆ – ಪ್ರತ್ಯೇಕತೆಯಲ್ಲಿ ಏಕತೆ ಎನ್ನುವುದು ನಮ್ಮ ರಾಷ್ಟ್ರದ ಸಂಸ್ಕೃತಿಯೇ ಆಗಿರುವುದರಿಂದ ವಿವಿಧ ಸಂಘಟನೆಗಳಲ್ಲಿ ಮತ್ತು ರಾಜಕೀಯ ಪಕ್ಷಗಳಲ್ಲಿ ಹಂಚಿಹೋದ ಕನ್ನಡಿಗರೆಲ್ಲ ತಮ್ಮ ಐಡೆಂಟಿಟಿಯನ್ನು ಉಳಿಸಿಕೊಂಡೇ ಪ್ರತ್ಯೇಕತೆಯನ್ನು ಬದಿಗಿರಿಸಿ ಒಂದು ಉದ್ದೇಶಕ್ಕಾಗಿ ಏಕತೆಯನ್ನು ಐಕ್ಯಮಂತ್ರದ ಅಡಿಗಲ್ಲಿನಲ್ಲಿ ಸ್ವೀಕರಿಸಬೇಕು. ಕಾಸರಗೋಡಿನ ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಒಗ್ಗಟ್ಟಿನಿಂದ ಸಂಘಟಿತರಾಗಬೇಕು.
ಸಂಬಂಧಿಸಿದವರೆಲ್ಲ ಪರಸ್ಪರ ಪ್ರೀತಿ ವಿಶ್ವಾಸದಿಂದ ಈ ಪ್ರಯತ್ನದಲ್ಲಿ ತೊಡಗಿಸಿಕೊಳ್ಳಬೇಕೆಂಬುದು ನನ್ನ ಕಳಕಳಿಯ ವಿನಂತಿ. ತಮ್ಮಿಂದ ಪೂರಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುವ.
ಡಾ| ರಮಾನಂದ ಬನಾರಿ, ಮಂಜೇಶ್ವರಅಧ್ಯಕ್ಷರು, ಕಾಸರಗೋಡು ಜಿಲ್ಲಾ ಲೇಖಕರ ಸಂಘ