ಬೆಂಗಳೂರು: ದೇವಸ್ಥಾನ ಹಾಗೂ ಮದುವೆ ಸಮಾರಂಭಗಳಿಗೆ ಹೂವಿನ ಅಲಂಕಾರ ಮಾಡುವ ಗುತ್ತಿಗೆ ವ್ಯವಹಾರ ಮಾಡುತ್ತಿದ್ದ ಉದ್ಯಮಿಯೊಬ್ಬರಿಗೆ ಕರೆ ಮಾಡಿರುವ ದುಷ್ಕರ್ಮಿಗಳು ಎರಡು ಕೋಟಿ ರೂ. ನೀಡುವಂತೆ ಪ್ರಾಣ ಬೆದರಿಕೆ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಸಂಬಂಧ ಉದ್ಯಮಿ ಸತ್ಯಪ್ರಕಾಶ್ ಎಂಬುವರು ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.
ನಂದಿನಿಲೇಔಟ್‌ನ ಸರಸ್ವತಿಪುರಂನ ನಿವಾಸಿ ಉದ್ಯಮಿ ಸತ್ಯಪ್ರಕಾಶ್‌ಗೆ ಇತ್ತೀಚೆಗೆ ಎರಡು ಬಾರಿ ಇಂಟರ್‌ನೆಟ್ ಕರೆ ಮಾಡಿರುವ ದುಷ್ಕರ್ಮಿಗಳು ಕೂಡಲೇ ಹಣ ನೀಡಬೇಕು. ಇಲ್ಲವಾದರೆ ಹತ್ಯೆಗೈಯುವುದಾಗಿ ಬೆದರಿಕೆ ಹಾಕಿದ್ದಾರೆ. ದುಷ್ಕರ್ಮಿಗಳು ಹಿಂದಿ ಭಾಷೆಯಲ್ಲಿ ಮಾತನಾಡಿದ್ದು, ಎರಡು ಕೋಟಿ ರೂಗೆ ಬೇಡಿಕೆ ಇಟ್ಟಿದ್ದರು ಎಂದು ಸತ್ಯಪ್ರಕಾಶ್ ದೂರು ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಸೆ.19ರಂದು ಸಂಜೆ ಅಮೃತಹಳ್ಳಿಯ ದೇವಾಲಯದಲ್ಲಿರುವ ವೇಳೆ ಮೊದಲ ಕರೆ ಬಂದಿದ್ದು, ದುಷ್ಕರ್ಮಿ ಹಿಂದಿಯಲ್ಲಿ ಮಾತನಾಡುತ್ತಿದ್ದ. ಆ ಕಡೆ ಮಾತನಾಡುತ್ತಿದ್ದ ಅಪರಿಚಿತ ವ್ಯಕ್ತಿ, “ನಿನ್ನ ಸಂಪೂರ್ಣ ವ್ಯವಹಾರದ ಬಗ್ಗೆ ನಮ್ಮ ಬಾಸ್‌ಗೆ ಮಾಹಿತಿಯಿದೆ. ನಮ್ಮ ಬಾಸ್ 2 ಕೋಟಿ ರೂ. ಹಣ ಪಡೆಯಲು ಸೂಚಿಸಿದ್ದಾರೆ. ನಮ್ಮ ಯುವಕರು ನಿನ್ನನ್ನು ಹಿಂಬಾಲಿಸುತ್ತಿದ್ದಾರೆ. ಒಂದು ವೇಳೆ ಪೊಲೀಸರಿಗೆ ಮಾಹಿತಿ ನೀಡಿದರೆ, ಸ್ಥಳದಲ್ಲೇ ಕೊಂದು ಹಾಕುತ್ತೇವೆ.
ಕೂಡಲೇ ಹಣದ ವ್ಯವಸ್ಥೆ ಮಾಡಿಕೊಡುವಂತೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಸತ್ಯಪ್ರಕಾಶ್ ಏರು ಧ್ವನಿಯಲ್ಲಿ ನಿಂದಿಸಿ, ಕರೆ ಸ್ಥಗಿತಗೊಳಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಿಇಎಲ್ ರಸ್ತೆಯಲ್ಲಿರುವ ಆಧ್ಯಾತ್ಮಿಕ ವಾಹಿನಿಯೊಂದರಲ್ಲಿರುವ ಸಂದರ್ಭದಲ್ಲಿ ಮತ್ತೂಂದು ಕರೆ ಬಂದಿದ್ದು, ಆಗ ಸತ್ಯಪ್ರಕಾಶ್, ಕರೆ ಸ್ವೀಕರಿಸುವಂತೆ ತಮ್ಮ ಸ್ನೇಹಿತರೊಬ್ಬರಿಗೆ ಮೊಬೈಲ್ ಕೊಟ್ಟಿದ್ದಾರೆ.
ಇತ್ತ ಕರೆ ಸ್ವೀಕರಿಸುತ್ತಿದ್ದಂತೆ ಆ ಕಡೆ ಏರು ಧ್ವನಿಯಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿ ಕೂಡಲೇ ಸತ್ಯಪ್ರಕಾಶ್‌ಗೆ ಮೊಬೈಲ್ ಕೊಡುವಂತೆ ತಾಕೀತು ಮಾಡಿದ್ದಾನೆ. ಆದರೆ, ಸತ್ಯಪ್ರಕಾಶ್ ಸ್ನೇಹಿತ ಕರೆ ಸ್ಥಗಿತಗೊಳಿಸಿದ್ದಾರೆ ನಂತರ ಗಾಬರಿಗೊಂಡ ಸತ್ಯಪ್ರಕಾಶ್ ಕೂಡಲೇ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ವ್ಯಕ್ತಿಯ ಮೇಲೆ ಶಂಕೆ: ಈ ಹಿಂದೆ ಸತ್ಯಪ್ರಕಾಶ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನನ್ನ ಬಳಿ ಲಕ್ಷಾಂತರ ರೂಪಾಯಿ ಮೌಲ್ಯ ಚಿನ್ನಾಭರಣಗಳಿದ್ದು, ಕಡಿಮೆ ದರಕ್ಕೆ ಮಾರಾಟ ಮಾಡುತ್ತೇನೆ. ಖರೀದಿ ಮಾಡಬಹುದು ಎಂದಿದ್ದ. ಆದರೆ, ಸತ್ಯಪ್ರಕಾಶ್ ಇದಕ್ಕೆ ನಿರಾಕರಿಸಿದ್ದರು. ಈ ವ್ಯಕ್ತಿಯೇ ಈ ರೀತಿ ಇಂಟರ್‌ನೆಟ್ ಕರೆ ಮಾಡುತ್ತಿರುವ ಸಾಧ್ಯತೆಯಿದ್ದು, ತನಿಖೆ ನಡೆಯುತ್ತಿದೆ ಎಂದು ಸದಾಶಿವನಗರಠಾಣೆಯ ಪೊಲೀಸರು ತಿಳಿಸಿದ್ದಾರೆ.