Advertisement
ಭ್ರಷ್ಟಾಚಾರ ಬಗ್ಗೆ ಈಗಾಗಲೇ ತನಿಖೆ ನಡೆಸುತ್ತಿರುವ ಜಂಟಿ ತನಿಖಾ ತಂಡ, ಷರೀಫ್ ಕುಟುಂಬದ 2006ನೇ ಇಸವಿಯ ಆಸ್ತಿ ಪತ್ರ ಮೈಕ್ರೋಸಾಫ್ಟ್ ಕ್ಯಾಲಿಬ್ರಿ ಫಾಂಟ್‌ನಲ್ಲಿರುವುದನ್ನು ಪತ್ತೆ ಹಚ್ಚಿದೆ. ಅಚ್ಚರಿ ಎಂದರೆ ಕಾಲಿಬ್ರಿ ಫಾಂಟ್ ಬಿಡುಗಡೆಯಾಗಿರುವುದೇ 2007ರಲ್ಲಿ! ಈ ಹಿನ್ನೆಲೆಯಲ್ಲಿ ಆಸ್ತಿ ಪತ್ರ ತೀವ್ರ ಶಂಕಾಸ್ಪದವಾಗಿದೆ. ಈ ದಾಖಲೆ ಪರಿಶೀಲನೆ ಮತ್ತು ಕೈಬರಹದ ಬಗ್ಗೆ ತನಿಖೆ ನಡೆಸುತ್ತಿರುವ ಯು.ಕೆ. ಮೂಲದ ವಿಧಿವಿಜ್ಞಾನ ತಜ್ಞರು ದಾಖಲೆಗಳು ಸುಳ್ಳು ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಈ ದಾಖಲೆಗಳನ್ನು ಅಕ್ರಮ ಆಸ್ತಿ ಪಾಸ್ತಿ ಸಂಪಾದನೆ ಆರೋಪಕ್ಕೆ ಸಂಬಂಧಿಸಿ ಪ್ರಧಾನಿ ಷರೀಫ್ ಪುತ್ರಿ ಮರಿಯಮ್ ಸಫ್ದರ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದು, 2006ರಲ್ಲೇ ಆಸ್ತಿಪತ್ರಗಳನ್ನು ಮಾಡಿಕೊಂಡಿದ್ದಾಗಿ ಹೇಳಿದ್ದರು. ಆದರೆ ಆಗಿನ್ನೂ ಕ್ಯಾಲಿಬ್ರಿ ಫಾಂಟ್ ಜಗತ್ತಿನಲ್ಲಿ ಬಿಡುಗಡೆಗೊಂಡೇ ಇರಲಿಲ್ಲ. ಹಾಗಾಗಿ, 2007ರಲ್ಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ, ಅವುಗಳು 2006ರದ್ದು ಎಂದು ಷರೀಫ್ ಕುಟುಂಬ ವಂಚಿಸಿರುವುದು ಹಾಗೂ ಈ ಮೂಲಕ ಕಾನೂನಿನ ಕಣ್ಣಿಗೆ ಮಣ್ಣೆರಚಿರುವುದು ಸ್ಪಷ್ಟವಾಗಿದೆ ಎಂದು ವಿಪಕ್ಷಗಳು ಆರೋಪ ಮಾಡಿವೆ. ಜೊತೆಗೆ ಆನ್‌ಲೈನ್‌ನಲ್ಲೂ ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿವೆೆ.
ಪನಾಮಾ ಪೇಪರ್ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕೆಂಬ ವಿಪಕ್ಷಗಳ ಬೇಡಿಕೆಯನ್ನು ಪ್ರಧಾನಿ ನವಾಜ್ ಷರೀಫ್ ತಿರಸ್ಕರಿಸಿದ್ದಾರೆ. ಗುರುವಾರ ತುರ್ತು ಸಂಪುಟ ಸಭೆ ನಡೆಸಿ ಮಾತನಾಡಿದ ಅವರು ‘ಪಾಕ್ ಜನತೆ ನಮ್ಮನ್ನು ಆಯ್ಕೆ ಮಾಡಿದ್ದು, ಅವರು ಮಾತ್ರ ನಮ್ಮನ್ನು ಹುದ್ದೆಯಿಂದ ಕೆಳಗಿಳಿಸಲು ಸಾಧ್ಯವಿದೆ’ ಎಂದಿದ್ದಾರೆ. ಅಲ್ಲದೇ ‘ರಾಜಕಾರಣಕ್ಕೆ ಸೇರಿದ ಬಳಿಕ ತಾವೇನೂ ಸಂಪಾದಿಸಿಲ್ಲ. ಬದಲಿಗೆ ಕಳೆದುಕೊಂಡಿದ್ದೇ ಹೆಚ್ಚು’ ಎಂದಿದ್ದಾರೆ.