Advertisement

ವಿಮಾನ ನಿಲ್ದಾಣ ಕಾಮಗಾರಿ ಆರಂಭಕ್ಕೆ ದಿನಗಣನೆ

03:30 PM Sep 21, 2021 | Team Udayavani |

ಹಾಸನ: ನಗರದ ಹೊರ ವಲಯದ ಬೂವನಹಳ್ಳಿ ಬಳಿ ಹಾಸನ ವಿಮಾನ ನಿಲ್ದಾಣ ನಿರ್ಮಾಣದ ಕಾಮಗಾರಿ ಚಾಲನೆಗೆ ದಿನಗಣನೆ ಆರಂಭವಾಗಿದೆ.

Advertisement

195 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎರಡು ತಿಂಗಳ ಹಿಂದೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಈಗ ಟೆಂಡರ್‌ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಕಾಮ ಗಾರಿ ಆರಂಭಕ್ಕೆ ಸಿದ್ಧತೆ ನಡೆದಿದ್ದು, ತಕ್ಷಣದಿಂದಲೇ ಮಾರ್ಕಿಂಗ್‌ ಕಾರ್ಯ ಆರಂಭಿಸುವಂತೆ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳು, ಹಾಗೂ ವಿಮಾನ ಕಾಮಗಾರಿ ಗುತ್ತಿಗೆ ಪಡೆದಿರುವ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಜಿಲ್ಲಾಧಿಕಾರಿಯವರು, ಹಾಸನ ವಿಮಾನ ನಿಲ್ದಾಣ ನಿರ್ಮಾಣವು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ದಶಕಗಳ ನಿರೀಕ್ಷೆಯ ವಿಮಾನ ನಿಲ್ದಾಣ ಯೋಜನೆ ಅನುಷ್ಠಾನ ವಿಳಂಬವಿಲ್ಲದೆ ಕಾಲ ಮಿತಿಯೊಳಗೆ ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.

ಕೆಪಿಟಿಸಿಎಲ್‌ ಸೂಪರ್‌ಡೆಂಟ್‌ ಎಂಜಿನಿಯರ್‌ ಉಮೇಶ್‌ ಅವರು ಮಾತನಾಡಿ, ವಿಮಾನ ನಿಲ್ದಾಣಕ್ಕೆ ಗುರುತಿಸಿರುವ ಪ್ರದೇಶದಲ್ಲಿ 9 ಕಿ.ಮೀ. ಮಾರ್ಗದಲ್ಲಿ 35 ಮೀಟರ್‌ ವಿಸ್ತೀರ್ಣದ ಹೈಟೆನ್ಷನ್‌ ವಿದ್ಯುತ್‌ ತಂತಿಗಳನ್ನು ಹಾಗೂ ಟವರ್‌ಗಳನ್ನು 17 ಕಿ.ಮೀ. ದೂರಕ್ಕೆ ಸ್ಥಳಾಂತರಿಸಬೇಕಾಗಿದೆ. ವಿದ್ಯತ್‌ ಮಾರ್ಗ ಸ್ಥಳಾಂತರದ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದ್ದು, 68 ಟವರ್‌ಗಳ ಪೈಕಿ 66 ಟವರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು 2ಟವರ್‌ ನಿರ್ಮಾಣ ಹಾಗೂ 8 ಕಿ.ಮೀ. ತಂತಿಗಳನ್ನು ಅಳವಡಿಸುವ ಕಾರ್ಯ ಬಾಕಿ ಇದೆ. 19 ಕೋಟಿ ರೂ. ವೆಚ್ಚವನ್ನು ಮೂಲಭೂತ ಸೌಕರ್ಯ ಇಲಾಖೆಯಿಂದ ಒದಗಿಸಿದರೆ ಭೂ ಪರಿಹಾರಧನವನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದರು.

ಇದನ್ನೂ ಓದಿ:ಮುಂದಿನ ಚುನಾವಣೆಗೆ ಭದ್ರಾವತಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದ ಕುಮಾರಸ್ವಾಮಿ

Advertisement

ವಿದ್ಯತ್‌ ಲೈನ್‌ ಸ್ಥಳಾಂತರಿಸುವ 34 ಎಕರೆ ಭೂ ಪ್ರದೇಶಕ್ಕೆ 7.3 ಕೋಟಿ ರೂ. ಭೂ ಪರಿಹಾರ ಧನ ಸೇರಿ 19.7 ಕೋಟಿ ರೂ. ಬಿಡುಗಡೆ ಮಾಡಿಕೊಡುವಂತೆ ಕೋರಲಾಗಿದೆ. ತುರ್ತಾಗಿ ಹಣ ಬಿಡುಗಡೆ ಮಾಡಬೇಕು ಎಂದರು.

ಜಿಪಂ ಸಿಇಒ ಪರಮೇಶ್‌, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ. ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್‌, ಸೆಸ್ಕ್ ಅಧೀಕ್ಷಕ ಎಂಜಿನಿಯರ್‌ ಅಣ್ಣೇಗೌಡ, ಕಾರ್ಯನಿರ್ವಾಹಕ ಎಂಜಿನಿಯರ್‌ ಲೋಕೇಶ್‌, ಕಾರ್ಯವಾಹಕ ಎಂಜಿನಿಯರ್‌ ಅರ್ಜುನ್‌, ಕೆಪಿಟಿಸಿಎಲ್‌ ಮುಖ್ಯ ಕಾರ್ಯ ನಿರ್ವಾಹಕ ಎಂಜಿನಿಯರ್‌ ನಾಗಾರ್ಜುನ್‌, ಸಹಾಯಕ ಎಂಜಿನಿಯರ್‌ ಕರುಣಾಕರ್‌, ತಹಶೀಲ್ದಾರ್‌ ನಟೇಶ್‌, ಕೆಪಿಟಿಸಿಎಲ್‌ ಇತರರಿದ್ದರು. ಸಭೆ ಬಳಿಕ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆ ಪಡೆದಿರುವ ಸಂಸ್ಥೆಯ ಪ್ರತಿನಿಧಿಗಳು ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಭೂಮಾಲೀಕರಿಗೆ
ಸೂಕ್ತ ಪರಿಹಾರ
ವಿಮಾನ ನಿಲ್ದಾಣ ಕಾಮಗಾರಿಗೆ ಅಡಚಣೆಯಾಗಿರುವ ಹೈಟೆನ್ಷನ್‌  ವಿದ್ಯುತ್‌ ಮಾರ್ಗವನ್ನು ಸ್ಥಳಾಂತರವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬದಲಿ ವಿದ್ಯುತ್‌ ಮಾರ್ಗ ನಿರ್ಮಾಣಕ್ಕೆ ಬಳಸಿಕೊಳ್ಳುವ ಭೂಮಿಯ ಮಾಲೀಕರಿಗೆ ಬೆಳೆ ಪರಿಹಾರ ಹಾಗೂ ಸೂಕ್ತ ಭೂ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಕೆಪಿಟಿಸಿಎಲ್‌ ಮತ್ತು ಸೆಸ್ಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಶಿಲಾನ್ಯಾಸಕ್ಕೆ ಶಿಷ್ಟಾಚಾರದ ಪ್ರಕಾರ ಅತಿಥಿ ಗಣ್ಯರನ್ನು ಅಹ್ವಾನಿಸಬೇಕಾಗುತ್ತದೆ. ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮೊದಲು ಪ್ರಾಥಮಿಕ ಹಂತದ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next