Advertisement

ಕೂಡುವ ಕಳೆಯುವ ಲೆಕ್ಕ

05:04 PM Apr 16, 2018 | |

ಹೊಸ ಹಣಕಾಸು ವರ್ಷ ಆರಂಭವಾಗಿದೆ. ವರ್ಷದ ನಮ್ಮ ಹಣಕಾಸು ಯೋಜನೆಯನ್ನು ವಿಮರ್ಶಿಸಲು, ನಮ್ಮ ಹಣಕಾಸು ಗುರಿಯನ್ನು ನಿಗದಿಪಡಿಸಲು ಇದು ಸೂಕ್ತ ಸಮಯ. ಪ್ರತಿಯೊಂದನ್ನೂ ಕೊನೇ ಕ್ಷಣದವರೆಗೆ ತಳ್ಳುವುದರ ಬದಲು ವರ್ಷದ ಆರಂಭದಲ್ಲೇ ಯೋಜಿಸುವುದು ಸೂಕ್ತ. ಪ್ರತಿಯೊಂದು ಹೂಡಿಕೆಗೂ ಒಂದು ಉದ್ದೇಶವಿರಬೇಕು. ಹಣಕಾಸಿನ ಗುರಿಯಿರಬೇಕು. ವೈಯಕ್ತಿಕ ಹಣಕಾಸಿನ ದೃಷ್ಟಿಕೋನದಿಂದ ನಾವು ಈಗ ಕೈಗೊಳ್ಳಬೇಕಾಗಿರುವ ಪ್ರಮುಖವಾದ ಕ್ರಮಗಳತ್ತ ನೋಡೋಣ.

Advertisement

1. ಲೆಕ್ಕಾಚಾರದೊಂದಿಗೆ ಹೂಡಿಕೆ ಮಾಡಿ: ಕಳೆದ ಹಣಕಾಸು ವರ್ಷದಲ್ಲಿ ನಿಮ್ಮ ಜೀವನದಲ್ಲಿ ಭಾರೀ ಬದಲಾವಣೆಯಾಗಿದ್ದರೆ, ನಿಮ್ಮ ಹೂಡಿಕೆಯ ತಂತ್ರ ಮತ್ತು ಗುರಿ ಸಂಯೋಜನೆಯನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಮುಖ್ಯ. ನಿವೃತ್ತಿ ಸಮೀಪಿಸುತ್ತಿದ್ದರೆ, ಮನೆಗೆ ಹೊಸ ಸದಸ್ಯರ ಪ್ರವೇಶವಾಗಿದ್ದರೆ, ಮಕ್ಕಳ ಮದುವೆ ಇದ್ದರೆ, ಮಗು ಜನಿಸಿದ್ದರೆ, ಉದ್ಯೋಗ ನಷ್ಟ ಅಥವಾ ಉದ್ಯಮದಲ್ಲಿ ಕೈಸುಟ್ಟುಕೊಂಡು ವಾರ್ಷಿಕ ಆದಾಯ ಕುಸಿತವಾಗಿದ್ದರೆ, ಹೂಡಿಕೆಯಿಂದ ದೂರವಿದ್ದು ನಿಧಿಯ ರಕ್ಷಣೆ ಮಾಡಿಕೊಳ್ಳುವುದು ಉತ್ತಮ.

2. ತೆರಿಗೆ- ಉಳಿತಾಯ ಆರಂಭಿಸಿ: ವೇತನ ಪಡೆಯುವ ವ್ಯಕ್ತಿಗಳಿಗೆ ಮುಂದಿನ ವರ್ಷದಲ್ಲಿ ತಾವು ಗಳಿಸುವ ಆದಾಯ ಎಷ್ಟೆಂದು ತಿಳಿದಿರುತ್ತದೆ. ಆದರೂ ಎಲ್ಲರೂ ಹಣಕಾಸು ವರ್ಷದ ಕೊನೆಯಲ್ಲಿ 80ಸಿ ಅಡಿಯಲ್ಲಿ ಸಂಪೂರ್ಣವಾಗಿ ತೆರಿಗೆ ಲಾಭವನ್ನು ಬಳಸಿಕೊಳ್ಳುತ್ತಾರಾ? ಕೆಲವರು ಆ ಕ್ಷಣದ ಮಾರುಕಟ್ಟೆಯ ಸ್ಥಿತಿಗತಿಯನ್ನು ನೋಡದೆ ದೊಡ್ಡ ಮೊತ್ತವನ್ನು ಈಕ್ವಿಟಿ ಜೋಡಿತ ಉಳಿತಾಯ ಯೋಜನೆಗಳಲ್ಲಿ (ಇಎಲ್‌ಎಸ್‌ಎಸ್‌) ಹಾಕುತ್ತಾರೆ. ಅದು ಸರಿಯಲ್ಲ, ವರ್ಷದ ಕೊನೆಯಲ್ಲಿ ತೆರಿಗೆ ಉಳಿತಾಯ ದೃಷ್ಟಿಯಿಂದ ಇಎಲ್‌ಎಸ್‌ಎಸ್‌ನಲ್ಲಿ ನೀವು ಹೂಡಿಕೆ ಮಾಡಲು ಇಚ್ಛಿಸುವ ಒಟ್ಟು ಮೊತ್ತವನ್ನು ಲೆಕ್ಕ ಹಾಕಿ.

ನಂತರ ವರ್ಷದ ಕೊನೆಯಲ್ಲಿ ದೊಡ್ಡ ಮೊತ್ತವನ್ನು ಒಂದೇ ಬಾರಿ ಹೂಡಿಕೆ ಮಾಡುವ ಬದಲು, ಈ ಯೋಜನೆಗಳ ಎಸ್‌ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಆರಂಭಿಸಿ. ಹೊಸ ಹಣಕಾಸು ವರ್ಷದ ಆರಂಭದಿಂದಲೇ ಪ್ರತಿ ತಿಂಗಳಿಗೊಮ್ಮೆಯಂತೆ ಹೂಡಿಕೆ ಆರಂಭಿಸಿ. ಹೊಯ್ದಾಟದ ಮಾರುಕಟ್ಟೆಯಲ್ಲಿ ವೆಚ್ಚವನ್ನು ಸರಾಸರಿಗೊಳಿಸಲು ಎಸ್‌ಐಪಿ ಉತ್ತಮ ಕಾರ್ಯತಂತ್ರ. ಷೇರು ಮಾರುಕಟ್ಟೆ ಕುಸಿತವಿದ್ದ ವೇಳೆ ಹೂಡಿಕೆದಾರರಿಗೆ ಹೆಚ್ಚು ಯುನಿಟ್‌ಗಳು ದೊರಕುತ್ತವೆ. ಎಸ್‌ಐಪಿ ನಷ್ಟ ಕನಿಷ್ಠಗೊಳಿಸುವುದಷ್ಟೇ ಅಲ್ಲ, ಮಾರುಕಟ್ಟೆಯ ಸಂದಿಗ್ಧತೆಯ ಅಪಾಯದಿಂದಲೂ ಕಾಪಾಡುತ್ತದೆ. 

3. ನಿವೃತ್ತಿಯ ಗುರಿಗಾಗಿ ನಿಮ್ಮ ಹೂಡಿಕೆಗಳನ್ನು ವಿಮರ್ಶಿಸಿ: ನಿವೃತ್ತಿ ವೇಳೆ ಜೊತೆಯಾಗುವ ಮೊತ್ತವನ್ನು ಅವಲೋಕಿಸುವುದು ಇನ್ನೊಂದು ಮುಖ್ಯವಾದ ವಾರ್ಷಿಕ ಚಟುವಟಿಕೆ. ಇದು ತುಂಬಾ ದೀರ್ಘ‌ಕಾಲಿಕ ಹಣಕಾಸು ಗುರಿಯಾದ್ದರಿಂದ, ವಾರ್ಷಿಕ ಅವಲೋಕನ ಸಾಕಾಗುತ್ತದೆ. ನಿವೃತ್ತಿಯ ನಂತರ ನಿಮ್ಮ ಬಯಕೆಯ ಜೀವನಶೈಲಿಗೆ ತಕ್ಕಂತೆ ನೀವು ಹೂಡಿಕೆ ಟ್ರಾಕ್‌ನಲ್ಲಿದ್ದೀರಾ? ಎಷ್ಟು ಮೊತ್ತದ ಉಳಿತಾಯ ಮಾಡಲಾಗಿದೆ, ಯಾವ ಬಗೆಯ ಹೂಡಿಕೆ ಮಾಡಲಾಗಿದೆ, ಅದಕ್ಕೆ ಕೊಡಬೇಕಾದ  ತೆರಿಗೆ ಎಷ್ಟು?  

Advertisement

ಈಗ ಅದಕ್ಕಿಂತ ಉತ್ತಮ ಹೂಡಿಕೆ ಆಯ್ಕೆ ಲಭ್ಯವಿದೆಯೇ ಇತ್ಯಾದಿ ಸಂಗತಿಯನ್ನು ಗಮನಿಸಬೇಕು. ನಿವೃತ್ತಿಗಾಗಿ ನಿಧಿ ಜೋಡಿಸುವಲ್ಲಿ ಎನ್‌ಪಿಎಸ್‌ನಲ್ಲಿನ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ) ಹೂಡಿಕೆ ಇನ್ನೊಂದು ಆಯ್ಕೆಯಾಗಿದೆ. ಹೊಸ ಹಣಕಾಸು ವರ್ಷದಲ್ಲೇ ಇದನ್ನು ಆರಂಭಿಸಬಹುದು, ಎನ್‌ಪಿಎಸ್‌ ನಿಮಗೆ ಹೆಚ್ಚುವರಿಯಾಗಿ 50,000 ರೂ. ತೆರಿಗೆ ಉಳಿತಾಯ ಮಾಡಿಕೊಡುವುದಲ್ಲದೆ, ವರ್ಷಗಳು ಕಳೆದಂತೆ ನೀವು ಹಾಗೂ ನಿಮ್ಮ ಕುಟುಂಬಕ್ಕೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ.

4. ವಿಮೆಯ ಅಗತ್ಯಗಳನ್ನು ಅವಲೋಕಿಸಿ: ಹೊಸ ವಿತ್ತೀಯ ವರ್ಷದ ಆರಂಭದಲ್ಲಿ ನಿಮ್ಮ ವಿಮೆಯ ಅಗತ್ಯವನ್ನು ಅವಲೋಕಿಸುವುದು ಉತ್ತಮ. ಕುಟುಂಬದಲ್ಲಿ ಪರಿಸ್ಥಿತಿಗಳು ಬದಲಾಗಬಹುದು. ಕುಟುಂಬದಲ್ಲಿ ಹೊಸ ಸದಸ್ಯರ ಆಗಮನ, ಮರಣ ಇತ್ಯಾದಿ ಸಂಭವಿಸಬಹುದು. ನಮ್ಮ ಅವಲಂಬಿತರ ರಕ್ಷಣೆಗೋಸ್ಕರ ಜೀವವಿಮೆ ಅತ್ಯಗತ್ಯ. ಆರೋಗ್ಯ ವಿಮೆಯತ್ತಲೂ ಗಮನ ಬೇಕು.+ 

5. ಹೂಡಿಕೆ ಹೆಚ್ಚಲಿ: ಸಿಪ್‌ (ಸಿಸ್ಟ್‌ಮೆಟಿಕ್‌ ಇನ್‌ವೆಸ್ಟ್‌ಮೆಂಟ್‌ ಪ್ಲಾನ್‌)  )ಎಂದರೆ ಸಾಮಾನ್ಯವಾಗಿ ನಿಶ್ಚಿತ ಮೊತ್ತದ ಹೂಡಿಕೆಯಾಗಿರುತ್ತದೆ. ಬಹುತೇಕರು ಇದನ್ನು ಪ್ರತಿ ವರ್ಷ ಏರಿಸುವುದಿಲ್ಲ. ಇದು ಸರಿಯಲ್ಲ. ಕಡಿಮೆ ಆದಾಯವಿದ್ದಾಗ ಸಣ್ಣ ಮೊತ್ತದ ಹೂಡಿಕೆ ಮಾಡಬೇಕು. ವರ್ಷಗಳು ಕಳೆದಂತೆ ವೇತನ, ವಾರ್ಷಿಕ ಆದಾಯ ಹೆಚ್ಚಿದಂತೆ ಸಿಪ್‌ ಮೊತ್ತವನ್ನು  ಹೆಚ್ಚಿಸುತ್ತಾ ಹೋಗಬೇಕು. ವೇತನ ಹೆಚ್ಚಿದಂತೆ ಹೂಡಿಕೆಯ ಸಾಮರ್ಥ್ಯವೂ ಹೆಚ್ಚುತ್ತದೆ. ಆ ಕೆಲಸವನ್ನು ಪ್ರತಿ ವರ್ಷದ ಆರಂಭದಲ್ಲಿ ಮಾಡಬೇಕು.

6. ಬೋನಸ್‌ ಅನ್ನು ಸ್ಮಾರ್ಟ್‌ ಆಗಿ ಉಪಯೋಗಿಸಿ: ಬೋನಸ್‌ ಬರಲಿದೆ ಎಂದಾದರೆ, ಅದನ್ನು ಸರಿಯಾಗಿ ಬಳಸಲು ಯೋಜಿಸಬೇಕು. ಸಾಲವನ್ನು ಪೂರ್ತಿಯಾಗಿ ಅಥವಾ ಭಾಗಶಃ ಪಾವತಿಸಬಹುದು. ಅಥವಾ ಮಕ್ಕಳ ಗುರಿಯೊಂದಿಗೆ ಬೋನಸ್‌ ಹಣ ಹೇಗೆ ಬಳಸುವುದೆಂದು ಪ್ಲಾನ್‌ ಮಾಡದೆ ಹ ಓದರೆ, ಲಾಟರಿಯ ರೂಪದಲ್ಲಿ ದೊರೆತ ಆ ಹಣ ಕಣ್ಮುಂದೆಯೇ ಖರ್ಚಾಗಿ ಹೋಗುವುದು ನಿಮಗೆ ತಿಳಿಯುವುದೇ ಇಲ್ಲ. 

* ರಾಧಾ

Advertisement

Udayavani is now on Telegram. Click here to join our channel and stay updated with the latest news.

Next