Advertisement

ಕೇಡರ್‌ ಬಲವರ್ಧನೆ: ಶಾ ನೇತೃತ್ವದಲ್ಲಿ ಕೋರ್‌ ಕಮಿಟಿ ಸಭೆ

12:31 AM Mar 27, 2023 | Team Udayavani |

ಬೆಂಗಳೂರು: ಬಿಜೆಪಿಯ ಹಿರಿಯ ನಾಯಕರು ಹಾಗೂ ಕೋರ್‌ ಕಮಿಟಿ ಸಭೆ ರವಿವಾರ ನಡೆದಿದ್ದು, ವಿಧಾನಸಭಾ ಚುನಾವಣೆಗೆ “ದಿಲ್ಲಿ ಲೀಡರ್‌; ಹಳ್ಳಿ ಕೇಡರ್‌’ ಬಲದ ಬಗ್ಗೆ ಸುದೀರ್ಘ‌ ಚರ್ಚೆ ನಡೆದಿದೆ. ಈ ಮೂಲಕ ಬಿಜೆಪಿಯ ಸಂಘಟನಾತ್ಮಕ ಶಕ್ತಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಿಕಿತ್ಸೆ ನೀಡಿದ್ದಾರೆ.

Advertisement

ಸಭೆಯಲ್ಲಿ ಪಕ್ಷದ ಸಂಘಟನೆಗೆ ಸಂಬಂಧಪಟ್ಟಂತೆ ಬೂತ್‌ ಮಟ್ಟದವರೆಗೂ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಅಮಿತ್‌ ಶಾ ಮಾಹಿತಿ ಪಡೆದುಕೊಂಡರು. ಚುನಾವಣೆಯ ಕಾವು ಆರಂಭವಾದ ಬಳಿಕ ನಡೆದ ಎರಡನೇ ಕೋರ್‌ ಕಮಿಟಿ ಸಭೆ ಇದಾಗಿರುವುದರಿಂದ ಸಹಜವಾಗಿಯೇ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿ ರಾಜ್ಯ ನಾಯಕರಲ್ಲಿ ಕುತೂಹಲ ಸೃಷ್ಟಿಯಾಗಿತ್ತು.

ಸಂಘಟನೆ, ಸಭೆ, ಪ್ರಚಾರ, ರಾಜಕೀಯ ತಂತ್ರಗಾರಿಕೆ ಬಗ್ಗೆಯೇ ಹೆಚ್ಚು ಚರ್ಚೆ ನಡೆದಿದ್ದು, ಬೂತ್‌ ಮಟ್ಟದ ಸಂಘಟನೆ ಬಗ್ಗೆ ಶಾ ಹೆಚ್ಚಿನ ಒತ್ತು ನೀಡಿದ್ದರು ಎಂದು ತಿಳಿದು ಬಂದಿದೆ.

ಪ್ರಧಾನಿ ಸಭೆ ಚರ್ಚೆ
ಸಭೆಯಲ್ಲಿ ಪಕ್ಷದ ಕೇಡರ್‌ ಬಗ್ಗೆ ನಡೆದ ಚರ್ಚೆಯ ಜತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ನಾಯಕರ ಸಭೆಗಳ ಬಗ್ಗೆಯೂ ಪ್ರಸ್ತಾವವಾಗಿದೆ. ಕಳೆದ ಚುನಾವಣೆಯಲ್ಲಿ ಪ್ರಧಾನಮಂತ್ರಿ 22 ಕಡೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.

ಈ ಬಾರಿಯೂ ಸಾಕಷ್ಟು ಬಾರಿ ಪ್ರಧಾನಿ ರಾಜ್ಯಕ್ಕೆ ಬರುವ ಬಗ್ಗೆ ಅಮಿತ್‌ ಶಾ ಮುನ್ಸೂಚನೆ ನೀಡಿದ್ದಾರೆ. ಕಳೆದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಒಳಮೀಸಲು ಹಾಗೂ ಒಕ್ಕಲಿಗ, ಲಿಂಗಾ ಯತ ಪಂಚಮಸಾಲಿ ಮೀಸಲು ಹೆಚ್ಚಳ ನಿರ್ಧಾರದ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾವವಾಗಿದೆ. ಮೀಸಲಾತಿ ಹೆಚ್ಚಳವು ಐತಿಹಾಸಿಕ ನಿರ್ಧಾರವಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.

Advertisement

ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ರಾಜ್ಯ ಚುನಾವಣ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯ ಬಿಜಿಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್‌ ಶೆಟ್ಟರ್‌, ಸದಾನಂದ ಗೌಡ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ, ಸಚಿವರಾದ ಆರ್‌.ಅಶೋಕ್‌, ಸಿ.ಸಿ.ಪಾಟೀಲ್‌, ರಾಜ್ಯ ಚುನಾವಣ ನಿರ್ವಹಣ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಸಹಿತ ಪ್ರಮುಖ ನಾಯಕರು ಭಾಗವಹಿಸಿದ್ದರು.

ಪರ್ಯಾಯ ಪ್ರಚಾರ ಬೇಡ: ಪ್ರಧಾನ್‌ ಸಲಹೆ
ಈ ಚುನಾವಣೆಯಲ್ಲಿ ಬಿಜೆಪಿ ಸರಕಾರದ ಸಾಧನೆಯನ್ನು ಮುಂದಿಟ್ಟುಕೊಂಡೇ ಪ್ರಚಾರ ತಂತ್ರ ನಡೆಸ ಬೇಕು. ಪರ್ಯಾಯ ಪ್ರಚಾರ ವ್ಯವಸ್ಥೆಗಳ ನಿರ್ಮಾಣ ಬೇಡ. ಪರ್ಯಾಯ ಪ್ರಚಾರದಿಂದ ಗೊಂದಲ ಸೃಷ್ಟಿಯಾಗ ಬಹುದು ಎಂದು ರಾಜ್ಯ ಚುನಾವಣ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಸಲಹೆ ನೀಡಿದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next