Advertisement

ಕಚ್ಚಾ ತೈಲಾಗಾರದ 210 ಎಕರೆ ಭೂಸ್ವಾಧೀನಕ್ಕೆ “ಕ್ಯಾಡಸ್ಟ್ರಲ್‌ ಸರ್ವೇ’

08:00 PM Nov 24, 2020 | mahesh |

ಕಾಪು: ತಾಲೂಕಿನ ಮಜೂರು ಗ್ರಾ.ಪಂ. ವ್ಯಾಪ್ತಿಯ ಪಾದೂರಿನಲ್ಲಿ ನಿರ್ಮಾಣ ಗೊಂಡಿರುವ ಐ.ಎಸ್‌.ಪಿ.ಆರ್‌.ಎಲ್‌. ಯೋಜನೆಯ (ಕಚ್ಚಾ ತೈಲಾಗಾರದ) 2ನೇ ಹಂತದ ಕಚ್ಚಾ ತೈಲ ಸಂಗ್ರಹಣ ಘಟಕದ ವಿಸ್ತರಣೆಗಾಗಿ ಸುಮಾರು 210 ಎಕ್ರೆ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಇದಕ್ಕೆ ಪೂರಕವಾಗಿ ಪಾದೂರು ಗ್ರಾಮದಲ್ಲಿ “ಕ್ಯಾಡಸ್ಟ್ರಲ್‌ ಸರ್ವೇ’ ಈಗಾಗಲೇ ಪೂರ್ಣಗೊಂಡಿದ್ದು, ಅದಕ್ಕಾಗಿ ಭೂಮಿ ಕಳೆದುಕೊಳ್ಳುವ ಸಂತ್ರಸ್ತರು ತಮ್ಮ ಭೂಮಿಯನ್ನು ಜುಜುಬಿ ಮೌಲ್ಯಕ್ಕೆ ನೀಡಬೇಕಾದ ಸ್ಥಿತಿಗೆ ಸಿಲುಕಿದ್ದಾರೆ.

Advertisement

ಘಟಕಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳಲು 10 ವರ್ಷಗಳ ಹಿಂದೆ ಪ್ರಸ್ತಾವನೆ ಸಿದ್ಧಗೊಂಡಿದ್ದರೂ, ಪ್ರತಿಭಟನೆಯಿಂದಾಗಿ ವಿಸ್ತರಣೆ ತಡೆ ಹಿಡಿಯಲಾಗಿತ್ತು. ಅಲ್ಲದೆ ಗ್ರಾಮದ ಸ್ಥಿರತೆ ಬಗ್ಗೆ ಅನುಮಾನ, ಗೊಂದಲಗಳಿದ್ದುದರಿಂದ ಯಾರೂ ಜಾಗ ಮಾರಾಟ ಮಾಡಲಾಗದ ಸ್ಥಿತಿ ಇತ್ತು. ಇದರಿಂದಾಗಿ ಕಳೆದ 4 ವರ್ಷಗಳ ಅವಧಿಯಲ್ಲಿ ಸ್ಥಿರಾಸ್ತಿ (ಖುಷ್ಕಿ, ತರಿ ಮತ್ತು ಭಾಗಾಯ್ತ)ಗಳ ಸರಕಾರದ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿಯಲ್ಲಿ ಭೂಮಿಯ ಮೌಲ್ಯ ಕನಿಷ್ಠ ಏರಿಕೆ ಕಂಡಿದೆ. ಪಕ್ಕದ ಶಿರ್ವ ಗ್ರಾಮದಲ್ಲಿ ಸರಕಾರದ ಮಾರ್ಗಸೂಚಿಯಂತೆ ಭೂಮಿಯ ಮೌಲ್ಯವು ಸುಮಾರು 3-4 ಪಟ್ಟಿಗೂ ಅಧಿಕ ಏರಿಕೆ ಕಂಡಿದೆ.

ಕಡಿಮೆ ಪರಿಹಾರ?
ಸಂತ್ರಸ್ತರಿಗೆ ಭೂಮಿಯ ಪರಿಹಾರ ಮೌಲ್ಯ ನಿಗದಿ ಸಂದರ್ಭ ಉಪನೋಂದಣಿ ಕಚೇರಿಯಲ್ಲಿ ನಮೂದಾದ ಗ್ರಾಮದ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿ ಪ್ರಮುಖ ಪಾತ್ರ ವಹಿಸಲಿದೆ. ಇದರಿಂದಾಗಿ ಭೂಮಿ ಕಳೆದುಕೊಳ್ಳುವ ಜನತೆ ಜುಜುಬಿ ಮೊತ್ತದ ಪರಿಹಾರ ಮೌಲ್ಯವನ್ನು ಪಡೆದುಕೊಳ್ಳಬೇಕಾಗುತ್ತದೆ.

11 ಸಾವಿರ ರೂ.!
ನಾಲ್ಕು ವರ್ಷಗಳ ಸರಕಾರದ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿಯಂತೆ ಪಾದೂರು ಗ್ರಾಮದಲ್ಲಿ ಕೃಷಿ ಭೂಮಿಗೆ ಸೆಂಟ್ಸ್‌ ಒಂದಕ್ಕೆ 11 ಸಾವಿರ ರೂ. ಮೌಲ್ಯವಿದ್ದರೆ, ಅದಕ್ಕೆ ತಾಗಿಕೊಂಡೇ ಇರುವ ಪಕ್ಕದ ಶಿರ್ವ ಗ್ರಾಮದಲ್ಲಿ ಕೃಷಿ ಭೂಮಿಯ ಮೌಲ್ಯ 50 ಸಾವಿರ ರೂ. ವರೆಗೆ ಏರಿಕೆ ಕಂಡಿದೆ.

ಇಕ್ಕಟ್ಟಿನಲ್ಲಿ ಸಂತ್ರಸ್ತರು
ಕಡಿಮೆ ಮೌಲ್ಯಕ್ಕೆ ಜಾಗ ನೀಡಬೇಕಾದ ಒತ್ತಡದಲ್ಲಿರುವ ಸಂತ್ರಸ್ತರು ತಮ್ಮ ಪಕ್ಕದ ಗ್ರಾಮದಲ್ಲಿ ಜಾಗ ಖರೀದಿ ಮಾಡಬೇಕಾದರೂ ನಾಲ್ಕೈದು ಪಟ್ಟು ಹೆಚ್ಚು ಮೌಲ್ಯ ನೀಡಿ ಭೂಮಿ ಖರೀದಿಸಬೇಕಾದ ಅನಿವಾರ್ಯ ಇದೆ ಅಥವಾ ಸಿಕ್ಕ ಪರಿಹಾರದ ಹಣದಲ್ಲಿ ಜಾಗವನ್ನೇ ಖರೀದಿಸಲು ಆಗದ ಸ್ಥಿತಿಯೂ ಇರಬಹುದು. ಕಡಿಮೆ ಜಾಗ ಹೊಂದಿದವ ರಂತೂ ಬಾಡಿಗೆ ಮನೆಗಳನ್ನು ಆಶ್ರಯಿಸ ಬೇಕಾದ ಅನಿವಾರ್ಯ ಇದೆ.

Advertisement

210 ಎಕ್ರೆಯಲ್ಲಿ ಕ್ಯಾಡಸ್ಟ್ರಲ್‌ ಸರ್ವೇ
2ನೇ ಹಂತದಲ್ಲಿ 10 -15 ಎಕರೆ ಸರಕಾರಿ ಜಮೀನು, 25-30 ಎಕರೆ ಪರಿವರ್ತಿತ ಭೂಮಿ, 175 ಎಕರೆಯಷ್ಟು ಕೃಷಿ ಭೂಮಿ ಸೇರಿಕೊಂಡಿವೆ. 30 ಮನೆಗಳವರು ಯೋಜನೆಗೆ ಭೂಮಿ ಕಳೆದುಕೊಳ್ಳಲಿದ್ದಾರೆ. ಪ್ರಥಮ ಹಂತದಲ್ಲಿ 180 ಎಕರೆ ನೀಡಲಾಗಿದ್ದು, ಇದರಲ್ಲಿ 40 ಎಕರೆ ಸರಕಾರಿ ಭೂಮಿ, 20 ಎಕರೆ ಪರಿವರ್ತನೆಗೊಂಡ ಭೂಮಿ ಮತ್ತು 120 ಎಕರೆ ಕೃಷಿ ಭೂಮಿಯಿತ್ತು. 5 ಮನೆಗಳೂ ಇದ್ದವು. ಅಂದು ಪ್ರತಿ ಸೆಂಟ್ಸ್‌ಗೆ 12 ಸಾವಿರದಿಂದ 14 ಸಾವಿರ ರೂ. ಪರಿಹಾರ ನೀಡಲಾಗಿತ್ತು.

ಪತ್ರ ಬರೆಯಲಾಗಿದೆ
ದರಪಟ್ಟಿ ಸೂಕ್ತವಾಗಿ ಪರಿಷ್ಕರಿಸುವಂತೆ ಶಾಸಕರು, ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಜತೆಗೆ ಕಾಪು ಶಾಸಕರು ಅಗತ್ಯ ಕ್ರಮಕ್ಕಾಗಿ ಜಿಲ್ಲಾಧಿಕಾರಿ, ಸರಕಾರದ ಕಂದಾಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಪಾದೂರು ಯೋಜನೆ ವಿಚಾರದಲ್ಲಿ ಜನಜಾಗೃತಿ ಸಮಿತಿ ಜನರೊಂದಿಗೆ ಇದ್ದು, ಹೋರಾಟ ನಡೆಸಲಿದೆ.
-ಅರುಣ್‌ ಶೆಟ್ಟಿ ಪಾದೂರು, ಅಧ್ಯಕ್ಷರು, ಜನಜಾಗೃತಿ ಸಮಿತಿ

ಭರವಸೆ ದೊರೆತಿದೆ
ಗ್ರಾಮಸ್ಥರ ಭೂಮಿಗೆ ಸರಕಾರ ನಿಗದಿಪಡಿಸಿದ ಮೌಲ್ಯ ಕಡಿಮೆಯಾದ್ದರಿಂದ ನಾವು ಸಮಿತಿಯ ಜತೆಗೂಡಿ ಸರಕಾರ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದು ಸರಕಾರದ ಮೊರೆ ಹೋಗಿದ್ದೇವೆ. ಸ್ಪಂದನೆ ಭರವಸೆ ಸಿಕ್ಕಿದೆ. ಆದರೆ ಮೌಲ್ಯ ದೊರಕದೆ ಭೂ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ.
-ಶಿಲ್ಪಾ ಜಿ. ಸುವರ್ಣ, ಸದಸ್ಯರು, ಉಡುಪಿ ಜಿಲ್ಲಾ ಪಂಚಾಯತ್‌

ದರಪಟ್ಟಿ ಬದಲಾಗಲಿ
ದೇಶದ ಭದ್ರತೆಯ ಕಾರಣಕ್ಕೆ ಯೋಜನೆಗೆ ನಾವು ಸಹಕಾರ ನೀಡಿದ್ದೇವೆ. ಆದರೆ ಈಗ ನಾಲ್ಕು ವರ್ಷಗಳ ಹಿಂದೆ ನಿಗದಿ ಪಡಿಸಿದ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿಯನ್ನೇ ಮಾನದಂಡವಾಗಿರಿಸಿಕೊಂಡು, ಭೂ ಸ್ವಾಧೀನಕ್ಕೆ ಮುಂದಾದ‌ಲ್ಲಿ ಅದಕ್ಕೆ ನಮ್ಮ ವಿರೋಧವಿದೆ. ಯಾವುದೇ ಕೆಲಸಕ್ಕೂ ಸಮ್ಮತಿ ನೀಡುವುದಿಲ್ಲ.
– ಸುರೇಂದ್ರ ಕುಮಾರ್‌ ಜೈನ್‌, ಸ್ಥಳೀಯರು, ಪಾದೂರು

ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next