Advertisement

ಸಂಪುಟ ಕಸರತ್ತು ಬಿರುಸು; ಸಿಎಂ ನಿವಾಸಕ್ಕೆ ದೌಡಾಯಿಸಿದ ಆಕಾಂಕ್ಷಿಗಳು

12:27 AM Nov 12, 2020 | mahesh |

ಬೆಂಗಳೂರು: ಉಪಚುನಾವಣೆ ಫ‌ಲಿತಾಂಶ ಹೊರಬಿದ್ದ ಬೆನ್ನಲ್ಲೇ ಬಿಜೆಪಿಯ ಸಚಿವಾಕಾಂಕ್ಷಿಗಳಲ್ಲಿ ಚಟುವಟಿಕೆ ಗರಿಗೆದರಿದೆ. ಒಂದು ಗುಂಪು ಸಚಿವ ರಮೇಶ್‌ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಸಿದರೆ, ಇನ್ನೊಂದು ಗುಂಪು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ.

Advertisement

ಮತ್ತೂಂದೆಡೆ ಕೆಲವು ಶಾಸಕರು ತಮಗೆ ಸಚಿವ ಸ್ಥಾನ ನೀಡಬೇಕು ಎಂಬ ಬಯಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಸೋತವರಿಗೆ ಸಚಿವ ಸ್ಥಾನ ಕೊಡಬಾರದು ಎಂಬ ಕೂಗೂ ಕೇಳಿಬಂದಿದೆ.

ಸದ್ಯದಲ್ಲೇ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗುವುದಾಗಿ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಬೆನ್ನಲ್ಲೇ ಸಚಿವಾಕಾಂಕ್ಷಿಗಳು ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಭೇಟಿಗೆ ದೌಡಾಯಿಸಿದ್ದರು. ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಮುರುಗೇಶ್‌ ನಿರಾಣಿ, ರಾಜು ಗೌಡ, ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್‌ ಮತ್ತಿತರರು “ಕಾವೇರಿ’ ನಿವಾಸಕ್ಕೆ ಭೇಟಿ ನೀಡಿ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿದರು.

ಜಾರಕಿಹೊಳಿ ಭೋಜನಕೂಟ
ಮಧ್ಯಾಹ್ನದ ಹೊತ್ತಿಗೆ ಸಚಿವ ರಮೇಶ್‌ ಜಾರಕಿಹೊಳಿ ಅವರ ಸದಾಶಿವನಗರ ನಿವಾಸದಲ್ಲಿ ಶಾಸಕರ ದಂಡೊಂದು ನೆರೆದು ಕುತೂಹಲ ಮೂಡಿಸಿತು. ಈ ತಂಡದಲ್ಲಿ ರೇಣುಕಾಚಾರ್ಯ, ರಾಜು ಗೌಡ, ಬೆಳ್ಳಿಪ್ರಕಾಶ್‌, ಶಿವರಾಜ ಪಾಟೀಲ್‌, ಪೂರ್ಣಿಮಾ ಶ್ರೀನಿವಾಸ್‌, ಶಂಕರ ಪಾಟೀಲ್‌ ಮತ್ತಿತರರು ಇದ್ದರು. “ಗುರುವಾರ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಚರ್ಚೆ ನಡೆಸಲಾಗಿದೆ. ಆದರೆ ಸಚಿವ ಸ್ಥಾನ, ಪುನಾರಚನೆ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸಿಲ್ಲ’ ಎಂದು ಸಭೆಯ ಬಳಿಕ ರಮೇಶ್‌ ಜಾರಕಿಹೊಳಿ ಮತ್ತಿತರರು ಹೇಳಿಕೆ ನೀಡಿದ್ದರೂ ದಿಢೀರ್‌ ಭೋಜನ ಕೂಟ ಚರ್ಚೆಗೆ ಗ್ರಾಸವಾಗಿದೆ.

ಚುನಾವಣೆಯಲ್ಲಿ ಪದೇ ಪದೆ ಸೋತವರಿಗೆ ಸ್ಥಾನಮಾನ ನೀಡುವುದು ಸರಿಯಲ್ಲ. ಬದಲಿಗೆ ಪಕ್ಷಕ್ಕಾಗಿ ದುಡಿದ ಹಿರಿಯ ಶಾಸಕರಿಗೂ ಅವಕಾಶ ನೀಡಬೇಕು ಎಂದು ಈ ಸಭೆಯಲ್ಲಿ ಹಲವು ಸಚಿವಾಕಾಂಕ್ಷಿಗಳು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಪರಾಭವಗೊಂಡವರಿಗೆ ಮತ್ತೆ ಸ್ಥಾನಮಾನ ನೀಡುವ ಸಂದರ್ಭ ಎದುರಾದರೆ ಅದನ್ನು ವಿರೋಧಿಸಬೇಕು ಎಂಬುದಾಗಿಯೂ ಸಚಿವ ರಮೇಶ್‌ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

Advertisement

ಏಳು ಸ್ಥಾನ ಖಾಲಿ
ಬಿಎಸ್‌ವೈ ಸಂಪುಟದಲ್ಲಿ ಸದ್ಯ ಏಳು ಸ್ಥಾನಗಳು ಖಾಲಿ ಇವೆ. ಮೊದಲಿಗೆ ಆರು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಾಗಿತ್ತು. ಸಿ.ಟಿ. ರವಿ ರಾಜೀನಾಮೆ ನೀಡಿದ ಅನಂತರ ಏಳಕ್ಕೆ ಏರಿದೆ. ಈಗಷ್ಟೇ ಗೆದ್ದಿರುವ ಮುನಿರತ್ನ ಮತ್ತು ಎಂಟಿಬಿ ನಾಗರಾಜ್‌, ಆರ್‌. ಶಂಕರ್‌ಗೆ
ಸಚಿವ ಸ್ಥಾನ ಕೊಡಬೇಕಾಗಿದೆ. ಉಳಿದ ನಾಲ್ಕು ಸ್ಥಾನಗಳ ಬಗ್ಗೆ ಪೈಪೋಟಿ ಬಿರುಸಾಗಿದೆ.

ದೀಪಾವಳಿ ಬಳಿಕ ದಿಲ್ಲಿಗೆ?
ದೀಪಾವಳಿ ಹಬ್ಬದ ಬಳಿಕ ಸಿಎಂ ಬಿಎಸ್‌ವೈ ಅವರು ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಗೆ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ. ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕ ಸದ್ಯದಲ್ಲೇ ಘೋಷಣೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯನ್ನು ತ್ವರಿತವಾಗಿ ನಡೆಸಲು ಯಡಿಯೂರಪ್ಪ ಬಯಸಿದ್ದಾರೆ ಎನ್ನಲಾಗಿದೆ.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಬಳಿಕ ಸರಕಾರ ರಚನೆ ಪ್ರಕ್ರಿಯೆ ಮುಗಿಯುವ ವರೆಗೆ ವರಿಷ್ಠರಿಗೆ ಕಾರ್ಯ ಒತ್ತಡವಿರಲಿದೆ. ಹಾಗಾಗಿ ದೀಪಾವಳಿ ಬಳಿಕವಷ್ಟೇ ಸಿಎಂ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಬಹುದು. ನ. 19ರ ವರೆಗೆ ಮುಖ್ಯಮಂತ್ರಿಗಳ ಕಾರ್ಯಕ್ರಮ ನಿಗದಿಯಾಗಿದೆ ಎಂದು ಮೂಲಗಳು ಹೇಳಿವೆ.

ಒಟ್ಟಾರೆಯಾಗಿ ಸಿಎಂ ಅವರು ಸಂಪುಟ ಸರ್ಜರಿಗೆ ಮುಂದಾಗಿರುವುದು ಹಾಲಿ ಸಚಿವರಲ್ಲಿ ಆತಂಕ ಸೃಷ್ಟಿಸಿದ್ದರೆ ಸಚಿವಾಕಾಂಕ್ಷಿಗಳಲ್ಲಿ ಆಶಾವಾದ ಮೂಡಿಸಿದೆ. ಜತೆಗೆ ಮೂಲ- ವಲಸಿಗ ಸಚಿವಾಕಾಂಕ್ಷಿಗಳಲ್ಲೂ ಪೈಪೋಟಿ ತೀವ್ರವಾಗಲಾರಂಭಿಸಿದೆ.

ನಾನಂತೂ ಸಚಿವನಾಗುವುದಿಲ್ಲ. ಅದಕ್ಕಾಗಿ ಯಾರ ಮನೆಗೂ ಹೋಗಿ ಕಾಲಿಗೂ ಬೀಳುವುದಿಲ್ಲ. ನ. 25ರ ವರೆಗೆ ಕಾಯಿರಿ. ಈ ದೀಪಾವಳಿ ಸಿಹಿ ನೀಡುತ್ತದೆಯೋ ಕಹಿ ನೀಡುತ್ತೋ ಕಾದು ನೋಡಿ.
-ಬಸನಗೌಡ ಪಾಟೀಲ್‌ ಯತ್ನಾಳ್‌, ಶಾಸಕ

ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಸಚಿವ ಸ್ಥಾನ ಬೇಡ ಎನ್ನುವಷ್ಟು ದೊಡ್ಡ ಗುಣವೂ ಇಲ್ಲ. ಸಚಿವ ಸ್ಥಾನಕ್ಕೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದ್ದು, ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದೆ.
-ರಾಜುಗೌಡ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next