Advertisement

ಸಂಕ್ರಾತಿ ಬಳಿಕ ಸಂಪುಟ ಸಂಕ್ರಮಣ: ವಿಸ್ತರಣೆಯೋ, ಪುನರಚನೆಯೋ ?

12:48 PM Dec 26, 2021 | Team Udayavani |

ಬೆಂಗಳೂರು : ಸಂಕ್ರಾತಿ ಬಳಿಕ ಸರಕಾರ ಹಾಗೂ ಬಿಜೆಪಿ ಸಂಘಟನೆಯಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದ್ದು, ಸಂಪುಟದ ಕೆಲ ಹಿರಿಯರು ಹಾಗೂ ಅಸಮರ್ಥರಿಗೆ “ಕೊಕ್‌ ʼʼ ಕೊಡುವ ಸಾಧ್ಯತೆಗಳು ದಟ್ಟವಾಗಿದೆ.

Advertisement

ಬಸವರಾಜ್‌ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ನಡೆದ ಹೊಸ ಸಂಪುಟದಲ್ಲಿ ಇನೂ ನಾಲ್ಕು ಸ್ಥಾನಗಳು ಬಾಕಿ ಇವೆ. ಕೆಲ ಸಚಿವರಿಗೆ ಎರಡು ಖಾತೆ ನೀಡಲಾಗಿದ್ದು, ಅಲ್ಪಸಂಖ್ಯಾತ ಕಲ್ಯಾಣ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ಕೆಲವು ಖಾತೆಗಳನ್ನು ಸಿಎಂ ಬೊಮ್ಮಾಯಿ ಅವರ ಬಳಿ ಇದೆ. ಒಟ್ಟಾರೆಯಾಗಿ ನಾಲ್ಕು ಸ್ಥಾನಗಳು ಖಾಲಿ ಇದ್ದು, ಅವುಗಳ ಭರ್ತಿಗೆ ಸಿಎಂ ಮುಂದಾಗುತ್ತಾರೋ ಅಥವಾ ವರಿಷ್ಠರ ಒಪ್ಪಿಗೆ ಪಡೆದು ಚುನಾವಣಾ ದೃಷ್ಟಿಯಿಂದ ಸಂಪೂರ್ಣ “ಪುನಾರಚನೆʼʼಗೆ ಮುಂದಾಗುತ್ತಾರೋ ಎಂಬ ಕುತೂಹಲ ಈಗ ಪ್ರಾರಂಭವಾಗಿದೆ.

ಬಿಜೆಪಿ ಮೂಲಗಳ ಪ್ರಕಾರ ಜನವರಿ 15ರ ನಂತರ ಸಂಪುಟ ಕಸರತ್ತು ಪ್ರಾರಂಭವಾಗಲಿದೆ. ಸಂಕ್ರಾತಿ ಬಳಿಕ ಸಿಎಂ ದಿಲ್ಲಿಗೆ ತೆರಳಿ ವರಿಷ್ಠರ  ಜತೆಗೆ ಚರ್ಚೆ ನಡೆಸಲಿದ್ದಾರೆ. ಚುನಾವಣೆಗೆ ಇನ್ನು ಒಂದುವರೆ ವರ್ಷ ಮಾತ್ರ ಬಾಕಿ ಇರುವುದರಿಂದ ಸರಕಾರದ ಇಮೇಜ್‌ ವೃದ್ಧಿಸುವುದು ಹಾಗೂ ಆಡಳಿತಕ್ಕೆ ಚಲನಶೀಲತೆ ನೀಡುವುದು ಮುಖ್ಯವಾಗಿದೆ. ಈ ದೃಷ್ಟಿಯಿಂದ ಸಂಪುಟ ಪುನಾರಚನೆ ಬಗ್ಗೆಯೇ ಸಿಎಂ ಬೊಮ್ಮಾಯಿ ಹೆಚ್ಚಿನ ಒಲವು ಹೊಂದಿದ್ದಾರೆ.

ವದಂತಿಗೆ ಎಚ್ಚರಿಕೆ : ಡಿಸೆಂಬರ್‌ 28 ಹಾಗೂ 29ರಂದು ಹುಬ್ಬಳ್ಳಿಯಲ್ಲಿ ಬಿಜೆಪಿಯ ಕಾರ್ಯಕಾರಿಣಿ ನಡೆಯಲಿದ್ದು, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹಾಜರಿಲಿದ್ದಾರೆ. ಈ ಸಂದರ್ಭದಲ್ಲಿ ಸಂಪುಟ ಪುನಾರಚನೆ ಬಗ್ಗೆ ಸಿಎಂ ಪ್ರಾಸಂಗಿಕ ಚರ್ಚೆ ನಡೆಸುವ ಸಾಧ್ಯತೆ ಹೆಚ್ಚಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕೆಲ ಸಚಿವರು ಹಾಗೂ ಶಾಸಕರು ಸರಕಾರದ ಬಗ್ಗೆ ಸಲ್ಲದ ವದಂತಿ ಹಬ್ಬಿಸುತ್ತಿರುವುದು ಸಿಎಂ ಬೊಮ್ಮಾಯಿಯವರನ್ನು ಕೆರಳಿಸಿದೆ. ಇಂಥವರಿಗೆ ಪಕ್ಷದ ಶಿಸ್ತು ಚೌಕಟ್ಟಿನ ವ್ಯಾಪ್ತಿಯಲ್ಲಿ ಎಚ್ಚರಿಕೆ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಬಿಎಸ್‌ವೈ ದಿಲ್ಲಿ ಭೇಟಿ : ಇದೆಲ್ಲದರ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಕ್ರಾತಿ ಬಳಿಕ ದಿಲ್ಲಿಗೆ ತೆರಳುವ ಸಾಧ್ಯತೆ ದಟ್ಟವಾಗಿದೆ.

Advertisement

ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ ಬಳಿಕ ಅವರು ಇದುವರೆಗೆ ದಿಲ್ಲಿಗೆ ಭೇಟಿ ನೀಡಿ ವರಿಷ್ಠರ ಜತೆ ಚರ್ಚೆ ನಡೆಸಿಲ್ಲ. ಪಕ್ಷ ಹಾಗೂ ಸರಕಾರದ ವಿಚಾರದಲ್ಲಿ ಯಡಿಯೂರಪ್ಪ ತುಸು ಅಸಮಾಧಾನ ಹೊಂದಿದ್ದಾರೆ. ವರಿಷ್ಠರ ಕೆಲ ನಡೆಯ ಬಗ್ಗೆಯೂ ಅಸಮಾಧಾನ ಹೊಂದಿದ್ದಾರೆ. ಇದು ವಿಧಾನ ಪರಿಷತ್‌ ಹಾಗೂ ಉಪಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸಿದೆ. ಯಡಿಯೂರಪ್ಪನವರನ್ನು “ಪಕ್ಕಕ್ಕೆ ಇಟ್ಟು ʼʼ ಚುನಾವಣೆ ಎದುರಿಸುವುದು ಸುಲಭವಲ್ಲ ಎಂಬ ಭಾವನೆ ವರಿಷ್ಠರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಂಕ್ರಾತಿ ಬಳಿಕ ಬಿಎಸ್‌ ವೈ ಅವರನ್ನು ದಿಲ್ಲಿಗೆ ಕರೆಸಿ ತೆರೆಮರೆಯ ಸಂಧಾನ ನಡೆಸುವ ಸಾಧ್ಯತೆ ಇದೆ.

ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ದೊರಕಿಸಿಕೊಡಬೇಕೆಂಬ ಮಹದಾಸೆಯನ್ನು ಯಡಿಯೂರಪ್ಪ ಹೊಂದಿದ್ದಾರೆ. ಆದರೆ ಈ ಜವಾಬ್ದಾರಿಯನ್ನು ಅವರು ವರಿಷ್ಠರ ಮೇಲೆ ಹೊರಿಸಿದ್ದಾರೆ. ದಿಲ್ಲಿ ಭೇಟಿ ಸಂದರ್ಭದಲ್ಲಿ ಈ ವಿಚಾರಕ್ಕೂ ಸ್ಪಷ್ಟತೆ ದೊರಕಬಹುದು ಎಂದು ಹೇಳಲಾಗುತ್ತಿದೆ.

ಪಕ್ಷದಲ್ಲೂ ಬದಲಾವಣೆ :ಇದೆಲ್ಲದಕ್ಕಿಂತ ಹೆಚ್ಚಾಗಿ ಚುನಾವಣಾ ದೃಷ್ಟಿಯಿಂದ ಬಿಜೆಪಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ವರಿಷ್ಠರು ಚಿಂತನೆ ನಡೆಸಿದ್ದಾರೆ. ಹಾಲಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಚುನಾವಣೆ ಎದುರಿಸುವ ಸಾಧ್ಯತೆ ಕ್ಷೀಣವಾಗಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರ ಬದಲಾವಣೆ ಪಕ್ಕಾ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

 

 

Advertisement

Udayavani is now on Telegram. Click here to join our channel and stay updated with the latest news.

Next