Advertisement

ಆಕಾಂಕ್ಷಿಗಳ ಪರ ನಾಯಕರ ಲಾಬಿ​​​​​​​

06:00 AM Dec 02, 2018 | Team Udayavani |

ಬೆಂಗಳೂರು: ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆಗೆ ರಾಜ್ಯ ಕಾಂಗ್ರೆಸ್‌ ನಾಯಕರು ಕಸರತ್ತು ನಡೆಸಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಒಪ್ಪಿಗೆಗೆ ಕಾಯಲಾಗುತ್ತಿದೆ.

Advertisement

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಡಿಸೆಂಬರ್‌ 5 ರವರೆಗೂ ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದರಿಂದ ಆ ನಂತರ ಭೇಟಿಗೆ ಅವಕಾಶ ನೀಡುವಂತೆ ರಾಜ್ಯ ನಾಯಕರು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ರಾಹುಲ್‌ ಗಾಂಧಿ ಪ್ರಚಾರ ಮುಕ್ತಾಯವಾದ ನಂತರ ವಿದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇರುವುದರಿಂದ ರಾಜ್ಯ ನಾಯಕರ ಭೇಟಿಗೆ ಅವಕಾಶ ದೊರೆಯುತ್ತಾ ಎಂಬುದು ಕಾದು ನೋಡಬೇಕಾಗಿದೆ. ರಾಹುಲ್‌ ಒಪ್ಪಿಗೆ ಸಿಕ್ಕರೆ ಮಾತ್ರ ಅಧಿವೇಶನಕ್ಕೂ ಮೊದಲು ವಿಸ್ತರಣೆಯಾಗಲಿದೆ.

ಡಿಸೆಂಬರ್‌ 10 ರೊಳಗೆ ಸಂಪುಟ ವಿಸ್ತರಣೆಯಾಗಬಹುದು ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿರುವುದರಿಂದ ಸಚಿವಾಕಾಂಕ್ಷಿಗಳು ಲಾಬಿ ಆರಂಭಿಸಿದ್ದಾರೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಮಾಜಿ ಸಚಿವ ಎಂ.ಬಿ. ಪಾಟೀಲ್‌, ಬಿ.ಸಿ.ಪಾಟೀಲ್‌ ಹಾಗೂ ಸಿ.ಎಸ್‌.ಶಿವಳ್ಳಿ ಪರವಾಗಿ ನಿಂತಿದ್ದಾರೆ. ಬಿ.ಕೆ. ಸಂಗಮೇಶ್‌ ಪರ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ  ಸಚಿವ ಡಿ.ಕೆ.ಶಿವಕುಮಾರ್‌, ಎಂಟಿಬಿ ನಾಗರಾಜ್‌ ಪರವಾಗಿ ಸಂಸದರಾದ ವೀರಪ್ಪ ಮೊಯಿಲಿ ಹಾಗೂ ಕೆ.ಎಚ್‌. ಮುನಿಯಪ್ಪ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಹೀಂ ಖಾನ್‌ ಪರವಾಗಿ ಹೈ ಕಮಾಂಡ್‌ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ಎಡಗೈ ಸಮುದಾಯದ ಆರ್‌.ಬಿ. ತಿಮ್ಮಾಪುರ್‌, ಧರ್ಮಸೇನಾ ಅಥವಾ ಕೆಜಿಎಫ್ ಶಾಸಕಿ ರೂಪಾ ಶಶಿಧರ್‌ ಅವರಲ್ಲಿ ಯಾರಿಗಾದರೂ ಸಚಿವ ಸ್ಥಾನ ನೀಡುವಂತೆ ಎಚ್‌.ಆಂಜನೇಯ, ಎಲ್‌. ಹನುಮಂತಯ್ಯ ಶನಿವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಶನಿವಾರ  ಸ್ವತಃ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಸಿಎಂ ಭೇಟಿ ಮಾಡಿದ ಬಿ.ಸಿ.ಪಾಟೀಲ್‌
ಈಮಧ್ಯೆ, ಸಚಿವಾಕಾಂಕ್ಷಿಯಾಗಿರುವ ಕಾಂಗ್ರೆಸ್‌ ಶಾಸಕ ಬಿ.ಸಿ. ಪಾಟೀಲ್‌ ಶನಿವಾರ ಬೆಳಿಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸೆಂಬರ್‌ 10 ರೊಳಗೆ ಸಂಪುಟ ವಿಸ್ತರಣೆ ಆಗಬೇಕು ಎನ್ನುವುದು ನಮ್ಮೆಲ್ಲ ಶಾಸಕರ ಒತ್ತಾಯ. ಪಕ್ಷದ ನಾಯಕರು ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದ್ದು, ನನಗೂ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next