ಬೆಂಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕುರಿತು ಡಾ| ಕೆ. ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸಚಿವ ಸಂಪುಟ ಸಭೆ ಸಂಪೂರ್ಣವಾಗಿ ತಿರಸ್ಕರಿಸಿದೆ.
ಕಸ್ತೂರಿ ವರದಿ ಅನುಷ್ಠಾನ ಸಂಬಂಧ ಕರಡು ಅಧಿಸೂಚನೆ ಸಿದ್ಧಪಡಿಸಿದ್ದ ಕೇಂದ್ರ ಸರಕಾರವು, ಎಲ್ಲ ರಾಜ್ಯ ಸರಕಾರಗಳಿಂದ ಆಕ್ಷೇಪಗಳನ್ನು ಆಹ್ವಾನಿಸಿತ್ತು. 5 ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಿದ್ದ ರಾಜ್ಯ ಸರಕಾರ, ಇದೀಗ 6ನೇ ಅಧಿಸೂಚನೆಯಲ್ಲಿನ ಅಂಶಗಳಿಗೂ ವಿರೋಧ ವ್ಯಕ್ತಪಡಿಸಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ನಿರ್ಧರಿಸಿದೆ. ಇದನ್ನೇ ಕೇಂದ್ರ ಸರಕಾರಕ್ಕೆ ತನ್ನ ನಿಲುವೆಂದೂ ತಿಳಿಸಲಿದೆ.
ಸಭೆಯ ಬಳಿಕ ಕಾನೂನು ಸಚಿವ ಎಚ್.ಕೆ. ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಉನ್ನತ ಮಟ್ಟದ ಕಾರ್ಯನಿರತ ತಂಡವು ಕೇವಲ ದೂರಸಂವೇದಿ ದತ್ತಾಂಶದ ಆಧಾರದ ಮೇಲೆ ಪಶ್ಚಿಮಘಟ್ಟಗಳ ಪ್ರದೇಶವನ್ನು ನಿಗದಿಪಡಿಸಿದೆ. ಕೇಂದ್ರ ಸರಕಾರವು ಪಶ್ಚಿಮಘಟ್ಟ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು 2024ರ ಜು. 31ರಂದು 6ನೇ ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿತ್ತು ಎಂದರು.
ಡಾ| ಕೆ. ಕಸ್ತೂರಿ ರಂಗಬ್ ವರದಿಯನ್ವಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ರಾಜ್ಯದ 20,688 ಚದರ ಕಿಲೋ ಮೀಟರ್ ಪ್ರದೇಶವನ್ನು ಗುರುತಿಸಿದ್ದು, ವಾಸ್ತವ ಲೋಪದೋಷಗಳ ತಿದ್ದುಪಡಿ ಅನಂತರ ಇದರ ಪ್ರಮಾಣವು 19,252.70 ಚ.ಕಿ.ಮೀ.ಗೆ ಇಳಿದಿತ್ತು. ಈಗಾಗಲೇ ವಿವಿಧ ಕಾನೂನುಗಳ ಅಡಿಯಲ್ಲಿ ಸಂರಕ್ಷಿತ ಪ್ರದೇಶ, ಅಧಿಸೂಚಿತ ಅರಣ್ಯ ಅಥವಾ ಪರಿಸರ, ಪರಿಸರ ಸೂಕ್ಷ್ಮ ವಲಯವಾಗಿ ಅಧಿಸೂಚಿಸಿ 16,0356.72 ಚ.ಕಿ.ಮೀ. ಪ್ರದೇಶವನ್ನು ರಾಜ್ಯದಲ್ಲಿ ಸಂರಕ್ಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಹ್ಯಾಟ್ ಹಿಲ್ ವಸತಿ ಕಟ್ಟಡದ ವಾಲ್ ಪುಟ್ಟಿಗೆ 11.70 ಕೋಟಿ ರೂ.
ದಕ್ಷಿಣ ಕನ್ನಡ ಜಿಲ್ಲೆಯ ಹ್ಯಾಟ್ ಹಿಲ್‌ನಲ್ಲಿ ನಿರ್ಮಿಸಿರುವ ನ್ಯಾಯಾಂಗ ಅಧಿಕಾರಿಗಳ ವಸತಿ ನಿಲಯ ಕಟ್ಟಡಗಳ ನಿರ್ಮಾಣಕ್ಕೆ 11.70 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೂ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಕಾಮಗಾರಿಯ ಮೂಲ ಅಂದಾಜು ಪಟ್ಟಿಯಲ್ಲಿ ಕೇವಲ 2 ಫ್ಲ್ಯಾಟ್‌ಗಳಿಗೆ ವಾಲ್ ಪುಟ್ಟಿ ಅವಕಾಶ ಕಲ್ಪಿಸಿದ್ದು, ಉಳಿದ 6 ಫ್ಲ್ಯಾಟ್‌ಗಳಿಗೆ ವಾಲ್ ಪುಟ್ಟಿ ಆವಶ್ಯಕತೆಯಿದೆ ಎಂದು ಪರಿಷ್ಕೃತ ಅಂದಾಜಿನಲ್ಲಿ ಪರಿಗಣಿಸಲಾಗಿದೆ. ಅನುಮೋದಿತ ಅಂದಾಜಿಗಿಂತ 1.72 ಕೋ.ರೂ.ಹೆಚ್ಚುವರಿಯಾಗಿ ಸೇರಿಸಲಾಗುತ್ತದೆ.