Advertisement
ಸಚಿವ ಸಂಪುಟ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಕೇಂದ್ರ ಸರ್ಕಾರದ ಇತರ ಕಲ್ಯಾಣ ಯೋಜನೆ ಅಡಿಯಲ್ಲಿ ವಿಶೇಷ ಸಂಘ ಸಂಸ್ಥೆಗಳಿಗೆ 5.60 ರೂಪಾಯಿಗೆ ಪ್ರತಿ ಕೆ.ಜಿ. ಅಕ್ಕಿ ನೀಡಲಾಗುತ್ತಿತ್ತು. ಈಗ ದಾಸೋಹ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರದಿಂದ ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಈ ಯೋಜನೆ ಜಾರಿಯಿಂದ ಬೊಕ್ಕಸಕ್ಕೆ ವಾರ್ಷಿಕ 34.4 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿಸಿದರು.
Related Articles
Advertisement
ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಗೆ ಕಾನೂನು ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಿಂದ ನೇರ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸುವಂತೆ ನಿಯಮಗಳಿಗೆ ತಿದ್ದುಪಡಿ ಮಾಡಲು ಸಂಪುಟ ಅನುಮತಿ ನೀಡಿದೆ. ಶಿವಮೊಗ್ಗ ಕೃಷಿ ವಿವಿ ನೂತನ ಕ್ಯಾಂಪಸ್ ಇರುವಕ್ಕಿ ಗ್ರಾಮದ ಬಳಿ 600 ಎಕರೆ ಪ್ರದೇಶವನ್ನು ವಿಶ್ವ ವಿದ್ಯಾಲಯಕ್ಕೆ ನೀಡಲು ತೀರ್ಮಾನಿಸಲಾಗಿದು, 138.69 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಸೂಚಿಸಲಾಗಿದೆ. ಈ ಬಗ್ಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಎಸಿಎಸ್ ನೇತೃತ್ವದ ಸಮಿತಿ ವರದಿ ಪರಿಗಣಿಸಲು ಒಪ್ಪಿಗೆ:ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿ ವಿಚಾರದಲ್ಲಿ ಹಿಂದುಳಿದ ವರ್ಗದ ಆಯೋಗದ ಸಮೀಕ್ಷೆ ಬದಲು ಎಸಿಎಸ್ ನೇತೃತ್ವದ ಸಮಿತಿ ವರದಿ ಪರಿಗಣಿಸಲು ಸಂಪುಟ ಒಪ್ಪಿಗೆ. ಎಸ್ಸಿ ಎಸ್ಟಿ ಸಮುದಾಯ ಹಿಂದುಳಿದಿರುವಿಕೆಗೆ ಕಾರಣಗಳನ್ನು ಪತ್ತೆ ಹಚ್ಚಲು ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸ್ಸು ಮಾಡಿತ್ತು. ನಂತರ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರತ್ನಪ್ರಭ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದರಿಂದ ಆಯೋಗಕ್ಕೆ ನೀಡಿದ್ದ ಆದೇಶವನ್ನು ಸಂಪುಟದಲ್ಲಿ ವಾಪಸ್ ಪಡೆಯಲಾಗಿದೆ ಎಂದು ಟಿ.ಬಿ. ಜಯಚಂದ್ರ ಹೇಳಿದರು. ಸಂಪುಟದ ಇತರ ತೀರ್ಮಾನಗಳು.
-ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಆರೋಗ್ಯ ಭವನ ಕಟ್ಟಡಕ್ಕೆ ಪರಿಷ್ಕೃತ ಅಂದಾಜು ಮೊತ್ತ 22.85 ಕೋಟಿಗೆ ಒಪ್ಪಿಗೆ
-ಹಾಸನ ಜಿಲ್ಲೆ ಸಕಲೇಶಪುರ ರಾಜ್ಯ ಹೆದ್ದಾರಿ 107 ರಲ್ಲಿ ಜಮನಾಪುರ ವನಗೂರು ರಸ್ತೆ ಅಭಿವೃದ್ಧಿಗೆ 29.64 ಕೋಟಿ ಪರಿಷ್ಕೃತ ಅಂದಾಜು ಮೊತ್ತಕ್ಕೆ ಒಪ್ಪಿಗೆ
-ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಕೌಶಲ್ಯ ಮಿಷನ್ ಮತ್ತು ಇತರ ಏಜೆನ್ಸಿ ಸ್ಥಾಪನೆಗೆ ಸಂಪುಟ ಅನುಮತಿ
-ಅಬಕಾರಿ ಇಲಾಖೆಯ ಬಾಕಿ ಕರ ವಸೂಲಿ ಅವಧಿಯನ್ನು ಅಕ್ಟೋಬರ್ 31 ರ ವರೆಗೆ ವಿಸ್ತರಣೆ
-ಬಾಂಗ್ಲಾದೇಶದಿಂದ ವಲಸೆ ಬಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ವಾಸವಾಗಿರುವ ನಾಮಶೂದ್ರ, ಪೋಡ್, ಪೌಂಡ್ರ, ರಾಜಬಂಶಿ ಜಾತಿಗಳನ್ನು ಎಸ್ಸಿ ಸಮುದಾಯಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನ.
-ಬಸವನಬಾಗೇವಾಡಿ ಯಲ್ಲಿ 32.73 ಕೋಟಿ ವೆಚ್ಚದಲ್ಲಿ ಮೆಗಾ ವಾಣಿಜ್ಯ ಮಾರುಕಟ್ಟೆ ನಿರ್ಮಿಸಲು ಸಂಪುಟ ಒಪ್ಪಿಗೆ
-ವಿಶ್ವ ಬ್ಯಾಂಕ್ ನೆರವಿನಿಂದ 581 ಕೋಟಿ ರೂಪಾಯಿ ವೆಚ್ಚದಲ್ಲಿ 22 ಆಣೆಕಟ್ಟೆಗಳ ಪುನಶ್ಚೇತನ ಕಾಮಗಾರಿ ಕೈಗೊಳ್ಳಲು ಒಪ್ಪಿಗೆ
-ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಗರ್ಭಗುಡಿ ಬಳಿ 51.40 ಕೋಟಿ ವೆಚ್ಚದಲ್ಲಿ ಪಿಕಪ್ ಕಂ ಬ್ರಿಡ್ಜ್ ನಿರ್ಮಾಣಕ್ಕೆ ಅನುಮೋದನೆ. ಇದರಿಂದ 4600 ಎಕರೆ ನೀರಾವರಿ ಹರಪನಹಳ್ಳಿ ತಾಲೂಕಿನ 108 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಾಗುವುದು.
-ಬೀದರ್‌ನಲ್ಲಿ 58 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಅನುಮತಿ
-ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಯೋಜನೆ ಅನುಷ್ಠಾನಕ್ಕಾಗಿ ಕೆಎಸ್‌ಐಐಡಿಸಿ ಮತ್ತು ಗೇಲ್ ಗ್ಯಾಸ್ ಸಂಸ್ಥೆ ಒಳಗೊಂಡ ಕಂಪನಿ ಸ್ಥಾಪನೆಗೆ ಒಪ್ಪಿಗೆ
-ಗಂಗಾವತಿ ತಾಲೂಕಿನ ಕಡೆಬಾಗಿಲು ಬಳಿ ತುಂಗಭದ್ರ ನದಿಗೆ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ
-ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣ ಹಾಗೂ 23 ಹಳ್ಳಿಗಳಿಗೆ ಕಾರಂಜಾ ಜಲಾಶಯದಿಂದ 140 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಗೆ ಅನುಮತಿ. ಕಲ್ಲಿದ್ದಲು ಗಣಿಗಳಿಂದ ಕಲ್ಲಿದ್ದಲು ಖರೀದಿಸುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಸಂಪುಟ ಸಭೆಯಲ್ಲಿ ಸುಮಾರು ಒಂದು ಗಂಟೆ ಚರ್ಚೆ ನಡೆದಿದೆ. ರಾಜ್ಯ ಸರ್ಕಾರ ಕಲ್ಲಿದ್ದಲು ಖರೀದಿಸಲು ಖಾಸಗಿ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಖರೀದಿಗೆ ಮೊದಲೇ ಸುಪ್ರೀಂ ಕೊರ್ಟ್ ಕಲ್ಲಿದ್ದಲು ಹರಾಜು ಮಾಡುವುದಕ್ಕೆ ತಡೆ ನೀಡಿರುವುದರಿಂದ ರಾಜ್ಯ ಸರ್ಕಾರ ಮುಂದೆ ಹೇಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ವಿಷಯದ ಮೇಲೆ ಸುದೀರ್ಘ ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟು ಸ್ಪಷ್ಟ ಮಾಹಿತಿ ಪಡೆದು ಮುಂದಿನ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಂಪುಟ ಸಭೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.