ಕೋಲ್ಕತಾ: ಏಳು ದಿನದ ಒಳಗೆ ದೇಶಾದ್ಯಂತ ಪೌರತ್ವ (ತಿದ್ದುಪಡಿ) ಕಾಯ್ದೆ(ಸಿಎಎ)ಯನ್ನು ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಶಂತನು ಠಾಕೂರ್ ತಿಳಿಸಿದ್ದಾರೆ.
ಇದನ್ನೂ ಓದಿ:Parachute ತೆರೆಯಲು ವಿಫಲ…29ನೇ ಮಹಡಿಯಿಂದ ಹಾರಿದ ಯುವಕ ಮೃತ್ಯು!
ಮುಂದಿನ ಏಳು ದಿನಗಳಲ್ಲಿ ಪಶ್ಚಿಮಬಂಗಾಳ ಮಾತ್ರವಲ್ಲ, ದೇಶಾದ್ಯಂತ ಸಿಎಎ ಜಾರಿಯಾಗಲಿದೆ ಎಂಬ ಭರವಸೆ ನೀಡುತ್ತೇನೆ ಎಂದು ಠಾಕೂರ್ ಬಂಗಾಳದ ದಕ್ಷಿಣ 24 ಪರಾಗಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿರುವುದಾಗಿ ವರದಿಯಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿಎಎ ಕುರಿತು ನೀಡಿದ್ದ ಹೇಳಿಕೆಯನ್ನು ಬಂಗಾಳದ ಬಂಗಾವ್ ನ ಬಿಜೆಪಿ ಲೋಕಸಭಾ ಸಂಸದ ಶಂತನು ಠಾಕೂರ್ ಪುನರುಚ್ಚರಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಮಾತನಾಡುತ್ತ, ಕೇಂದ್ರ ಸರ್ಕಾರ ಸಿಎಎ ಅನ್ನು ಜಾರಿಗೊಳಿಸಲಿದ್ದು, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಗುರಿಯಾಗಿರಿಸಿಕೊಂಡು ತಿರುಗೇಟು ನೀಡಿದ್ದರು.
ಕೋಲ್ಕತಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಶಾ ಅವರು ಅಕ್ರಮ ನುಸುಳುವಿಕೆ, ಭ್ರಷ್ಟಾಚಾರ, ರಾಜಕೀಯ ಹಿಂಸಾಚಾರದ ವಿಷಯ ಪ್ರಸ್ತಾಪಿಸಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಪಶ್ಚಿಮಬಂಗಾಳದಲ್ಲಿನ ಬ್ಯಾನರ್ಜಿ ಸರ್ಕಾರವನ್ನು ಕಿತ್ತೊಗೆದು 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು.