ಹುಬ್ಬಳ್ಳಿ: ದೇಶದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ, ಕಾಂಗ್ರೆಸ್ ಮಿತ್ರರು ಈ ಕಾಯ್ದೆ ಕುರಿತು ಮುಸ್ಲಿಂ ಬಾಂಧವರಲ್ಲಿ ತಪ್ಪು ಭಾವನೆ ಮೂಡಿಸಿ ಧಾರ್ಮಿಕ ವಿಷ ಬೀಜ ಬಿತ್ತುತ್ತಿದ್ದಾರೆ. ಇದಕ್ಕೆ ಅಲ್ಪಸಂಖ್ಯಾತ ಬಾಂಧವರು ಕಿವಿಗೊಡದೆ ಶಾಂತಿ ಕಾಪಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದಲ್ಲಿ ಶನಿವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಇಂದಿಗೂ ದೌರ್ಜನ್ಯ ಅನುಭವಿಸುತ್ತಿದ್ದಾರೆ. ಅಲ್ಲಿನ ದೌರ್ಜನ್ಯ ಸಹಿಸಲಾಗದೆ ಭಾರತಕ್ಕೆ ಬಂದು ನೆಲೆಸಿದ್ದಾರೆ. ಅವರಿಗೆ ಪೌರತ್ವ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಈ ಪೌರತ್ವ ಪಡೆಯಲು ಹಿಂದೆ 11 ವರ್ಷ ಕಾಯಬೇಕಾಗಿತ್ತು. ಆದರೆ, ಇದನ್ನು ಈಗ ಐದು ವರ್ಷಕ್ಕೆ ಇಳಿಸಲಾಗಿದೆ. ಇದು ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಮುಖ ತಿರುಳಾಗಿದೆ. ಆದರೆ, ಇದನ್ನು ವ್ಯತಿರಿಕ್ತವಾಗಿ ಬಿಂಬಿಸಲಾಗುತ್ತಿದೆ ಎಂದು ಹೇಳಿದರು.
ಮುಂದಿನ ಮೂರು ವರ್ಷ ಬಿಜೆಪಿಯದೇ ಸರ್ಕಾರ: ಮುಂದಿನ ಆಯವ್ಯಯದಲ್ಲಿ ಕೆಲವೊಂದು ಮಹತ್ವದ ನಿರ್ಣಯ ಕೈಗೊಂಡು ರಾಜ್ಯದ ಜನರಿಗೆ ಸ್ವಾಭಿಮಾನಿ ಬದುಕು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ರೈತರ ಹೊಲಗಳಿಗೆ ನೀರು ಹರಿಸುವುದು, ಬೆಳೆಗೆ ಉತ್ತಮ ಬೆಲೆ ದೊರಕಿಸಿಕೊಡೋದು ಸರಕಾರದ ಆದ್ಯತೆಯಾಗಿದೆ. ಕರ್ನಾಟಕವನ್ನು ದೇಶದಲ್ಲಿ ಮಾದರಿ ರಾಜ್ಯವನ್ನಾಗಿ ನಿರ್ಮಾಣ ಮಾಡುವ ಮಹತ್ತರ ಚಿಂತನೆಯಿದೆ ಎಂದರು.
ಮುಂದಿನ ಮೂರೂವರೆ ವರ್ಷ ಬಿಜೆಪಿ ಅಧಿಕಾರದಲ್ಲಿರಲಿದೆ. ಅಲ್ಲದೇ ಮುಂದಿನ ಅವಧಿಗೆ ರಾಜ್ಯದ 150 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆಲ್ಲುವ ಮೂಲಕ ಮೋದಿ ಹಾಗೂ ಅಮಿತ್ ಶಾ ಅವರ ಕೈಬಲಪಡಿಸಬೇಕು. ಇದಕ್ಕಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಕ್ಷೇತ್ರದಲ್ಲಿ ಸುತ್ತಾಡಿ ಪಕ್ಷ ಸಂಘಟನೆ ಮಾಡಬೇಕು. ಎಲ್ಲಾ ಮೋರ್ಚಾಗಳನ್ನು ಬಲಪಡಿಸುವ ಮೂಲಕ ಪಕ್ಷ ಗಟ್ಟಿಗೊಳಿಸಬೇಕು. ಜನರ ಪ್ರೀತಿ ಹಾಗೂ ವಿಶ್ವಾಸ ಗೆಲ್ಲಬೇಕು ಎಂದು ಹೇಳಿದರು.
ಪಟೇಲ್ ಬಳಿಕ ಅಮಿತ್ ಶಾ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಂತರ ಗೃಹ ಖಾತೆಗೆ ಬಲ ತುಂಬಿದವರು, ಆ ಸ್ಥಾನದ ಮಹತ್ವವನ್ನು ತೋರಿಸಿಕೊಟ್ಟವರು ಅಮಿತ್ ಶಾ. ಗೃಹ ಸಚಿವರಾಗಿ ಮಹತ್ವದ ನಿರ್ಣಯ ಕೈಗೊಂಡು, ದೇಶದ ಸಮಸ್ಯೆಗಳಿಗೆ ಪರಿಹಾರ ಕೈಗೊಂಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ತ್ರಿವಳಿ ತಲಾಖ್ ರದ್ದತಿ ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸೇರಿ ಹಲವು ನಿರ್ಧಾರಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ವಿಶ್ವ ಹಾಗೂ ಇಡೀ ದೇಶ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಕಡೆ ನೋಡುತ್ತಿದೆ ಎಂದರು.