ಕನ್ನಡದಲ್ಲೀಗ ಕ್ರೈಮ್ ಥ್ರಿಲ್ಲರ್ ಚಿತ್ರಗಳದ್ದೇ ಸದ್ದು. ಆ ಸಾಲಿಗೆ ಈಗ “ಸಿ 12′ ಎಂಬ ಹೊಸಬರ ಚಿತ್ರ ಹೊಸ ಸೇರ್ಪಡೆಯಾಗಿದೆ. ಹೌದು, ಇಲ್ಲಿ ತೆರೆಯ ಮೇಲೆ ಇರುವ ಕಲಾವಿದರನ್ನು ಹೊರತುಪಡಿಸಿ, ತೆರೆಯ ಹಿಂದೆ ಕೆಲಸ ಮಾಡಿದವರೆಲ್ಲರಿಗೂ ಇದು ಹೊಸ ಅನುಭವ. ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಪ್ರೇಕ್ಷಕರ ಮುಂದೆ ಬರಲು ತಯಾರಿ ಮಾಡಿಕೊಳ್ಳುತ್ತಿದೆ.
ಈ ಚಿತ್ರದ ಮೂಲಕ ಮನೋಜ್ ನಿರ್ದೇಶಕರಾಗುತ್ತಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ ಹಲವು ಕಿರುಚಿತ್ರಗಳಲ್ಲಿ ಕೆಲಸ ಮಾಡುವುದರ ಜೊತೆಗೆ ಟೆಲಿಫಿಲ್ಮ್ ಮಾಡಿದ ಅನುಭವ, “ಸಿ 12′ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವಂತೆ ಮಾಡಿದೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿರುವ ನಿರ್ದೇಶಕ ಮನೋಜ್‌ಗೆ ತನ್ನ ಮೊದಲ ಚಿತ್ರದಲ್ಲೇ ಅತೀವ ಭರವಸೆ ಇದೆ.
ಅದಕ್ಕೆ ಕಾರಣ, ಕಥೆ ಎಂಬುದು ಅವರ ಹೇಳಿಕೆ. ಹಾಗಾದರೆ, “ಸಿ 12′ ಚಿತ್ರದ ಕಥೆ ಏನು? ಇದಕ್ಕೆ ಉತ್ತರಿಸುವ ಮನೋಜ್, ಇದೊಂದು ಕ್ರೈಮ್ ಥ್ರಿಲ್ಲರ್ ಹೊಂದಿರುವ ಚಿತ್ರ. ಕ್ರೈಮ್ ಅಂದಾಕ್ಷಣ ಹಾಗೊಮ್ಮೆ ರಾತ್ರಿಯ ನೆನಪಾಗುತ್ತದೆ. ಈ ಚಿತ್ರ ಕೂಡ ರಾತ್ರಿಯಲ್ಲೇ ಸಾಗುತ್ತದೆ. ಒಂದೇ ದಿನದಲ್ಲಿ ನಡೆಯುವ ಕಥೆಯಲ್ಲಿ ನೂರೆಂಟು ಗೊಂದಲಗಳಿವೆ.
ಇಲ್ಲಿ ಹನ್ನೆರೆಡು ಪಾತ್ರಗಳ ಸುತ್ತವೇ ಕಥೆ ಸುತ್ತುತ್ತದೆ. ಬಹುತೇಕ ಯುವತಂಡ ಕಟ್ಟಿಕೊಂಡು ಚಿತ್ರ ಮಾಡಿದ್ದೇವೆ. ಇದನ್ನು ಪ್ರಯತ್ನ, ಪ್ರಯೋಗ ಹೀಗೆ ಏನುಬೇಕಾದರೂ ಕರೆಯಬಹುದು. ಕಾರಣ, ಇಲ್ಲಿ ಚಿತ್ರಕಥೆ ಹೈಲೈಟ್. ನಾಯಕ, ನಾಯಕಿ ಅಂತ ಇಲ್ಲಿ ಯಾರೂ ಇಲ್ಲ. ಕಥೆ, ಚಿತ್ರಕಥೆ ಚಿತ್ರದ ಜೀವಾಳ ಎನ್ನುತ್ತಾರೆ ಮನೋಜ್.
ಚಿತ್ರದಲ್ಲಿ ಶ್ರೀ ಮಹದೇವ್, ಚೇತನ್‌ಗಂಧರ್ವ ಹಾಗು ಸಾತ್ವಿಕ ಅಪ್ಪಯ್ಯ ಪ್ರಮುಖವಾಗಿ ಕಾಣಸಿಗುತ್ತಾರೆ. ಉಳಿದಂತೆ ಸಂದೀಪ್ ನೀನಾಸಂ, ರವಿ ಮಂಡ್ಯ, ನರೇಶ್, ಸಿದ್ಧರಾಜ್ ಕಲ್ಯಾಣ್‌ಕರ್, ಚಿತ್‌ಕಲಾ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ. ಇನ್ನು, ಚೇತನ್ ಗಂಧರ್ವ ಅವರಿಲ್ಲಿ ರಗಡ್ ಶೈಲಿಯ ಪಾತ್ರ ನಿರ್ವಹಿಸಿದ್ದು, ಈವರೆಗೆ ಮಾಡದೇ ಇರುವಂತಹ ಪಾತ್ರವನ್ನು ಮಾಡಿದ್ದಾರೆ ಎಂಬುದು ಚಿತ್ರತಂಡದ ಹೇಳಿಕೆ.
ಅದೆಲ್ಲಾ ಸರಿ, “ಸಿ 12′ ಅಂದರೆ ಏನು? ಎಂಬ ಸಣ್ಣ ಪ್ರಶ್ನೆಗೆ ಉತ್ತರ ಸಿನಿಮಾ ನೋಡಬೇಕು ಎಂಬುದು ನಿರ್ದೇಶಕರ ಮಾತು. ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯಲ್ಲಿ ಸಾಕಷ್ಟು ಏರಿಳಿತಗಳಿವೆ. ಕ್ರೈಮ್ ಸುತ್ತ ಏನೆಲ್ಲಾ ಆಗುತ್ತೆ ಅನ್ನೋದೇ ಚಿತ್ರದ ಹೈಲೈಟ್. ಚಿತ್ರಕ್ಕೆ ಉದಯ್ ಲೀಲಾ ಛಾಯಾಗ್ರಹಣ ಮಾಡಿದರೆ, ಅದಿಲ್ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ.
ಇನ್ನು, ಅಭಿನಂದನ ಕ್ರಿಯೇಷನ್ಸ್ ಮೈಸೂರ್ ಬ್ಯಾನರ್‌ನಲ್ಲಿ ಅಭಿನಂದನ್ ಅರಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇವರಿಗೂ ಇದು ಮೊದಲ ಚಿತ್ರ. ಬಹುತೇಕ ಬೆಂಗಳೂರು ಸುತ್ತಮುತ್ತ 15 ದಿನದಲ್ಲೇ ಚಿತ್ರೀಕರಣ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ದಸರಾ ಹಬ್ಬಕ್ಕೆ “ಸಿ 12′ ಚಿತ್ರ ಬಿಡುಗಡೆಯಾಗಲಿದೆ.