ಬೆಂಗಳೂರು: ಜಾತ್ಯತೀತ ಜನತಾದಳ ಇದೀಗ ಮಹಾರಾಷ್ಟ್ರದ ಶಿವಸೇನೆ ರೀತಿ ಇಬ್ಭಾಗವಾಗುವ ಲಕ್ಷಣಗಳು ಗೋಚರಿಸಿವೆ. ದಳಪತಿಗಳಿಗೆ ಉಚ್ಚಾಟಿತ ಸಿ.ಎಂ.ಇಬ್ರಾಹಿಂ ಬಣ ತೊಡೆತಟ್ಟಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಸೋಮವಾರ ಬೆಂಗಳೂರಿನ ಕಾಡುಗೊಂಡನಹಳ್ಳಿಯ ಖಾಸಗಿ ಸಭಾಭನದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು ಅವರನ್ನು ಆಯ್ಕೆ ಮಾಡಲಾಯಿತು. ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಒಂದು ಸಾಲಿನ ನಿರ್ಣಯವನ್ನು ತೆಲಂಗಾಣ ಜೆಡಿಎಸ್ ಅಧ್ಯಕ್ಷ ಸೂರಿ ಅವರು ಓದಿ ಹೇಳಿದರು.
ಈ ಹಿಂದೆ ಡಿ.9ರಂದು ರಾಷ್ಟ್ರೀಯ ಕಾರ್ಯಕಾರಣಿ ಸಭೆ ಕರೆದಿದ್ದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಸಿ.ಕೆ.ನಾಣು ಹಾಗೂ ರಾಜ್ಯಾಧ್ಯಕ್ಷರಾಗಿದ್ದ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಇದರ ಬೆನ್ನಲ್ಲೇ ಸಿ.ಕೆ.ನಾಣು ಸೋಮವಾರ ಸಭೆ ಕರೆದು ದೇವೇಗೌಡರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ತೆಗೆದು, ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಲದೊಂದಿಗೆ ತಾವೇ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ದೇವೇಗೌಡರಿಗೆ ಸೆಡ್ಡು ಹೊಡೆದಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ.ಇಬ್ರಾಹಿಂ, ಪಕ್ಷದ ತತ್ವ-ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡ ಕಾರಣಕ್ಕೆ ಎಚ್.ಡಿ.ದೇವೇಗೌಡರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಸಿ.ಕೆ.ನಾಣು ಅವರನ್ನು ನೇಮಿಸಲಾಗಿದೆ. ಎಲ್ಲಾ ರಾಜ್ಯಗಳ ಅಧ್ಯಕ್ಷರ ನೇಮಕವನ್ನು ನಾಣುರವರಿಗೆ ನೀಡಲಾಗಿದೆ. ಶೀಘ್ರದಲ್ಲೇ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುತ್ತದೆ. ಸಮಾವೇಶಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರಿಗೂ ಆಹ್ವಾನ ನೀಡಲಾಗುತ್ತದೆ. ಬಿಹಾರದ ಸಿಎಂ ನಿತೀಶ್ ಕುಮಾರ್ ಮತ್ತು ಅಖಿಲೇಶ್ ಯಾದವ್ ಕೂಡ ಆಗಮಿಸಲಿದ್ದಾರೆ ಎಂದರು.
ದೇವೇಗೌಡರು ಸತ್ತವರ ಫೋಟೋ ಹಾಕಿದ್ದಾರೆ ಎಂದು ಹೇಳಿದ್ದರು. ಜಯಪ್ರಕಾಶ ನಾರಾಯಣ್, ಗಾಂಧೀಜಿ, ರಾಮಕೃಷ್ಣ ಹೆಗಡೆ ಇವರು ಸತ್ತರೂ ಸಿದ್ಧಾಂತದಿಂದ ಜೀವಂತವಾಗಿರುತ್ತಾರೆ. ಕೆಲವರು ಬದುಕಿದ್ದರೂ ಹೆಣ ಎನ್ನುವುದನ್ನು ಹೇಳಲು ಇಷ್ಟಪಡುತ್ತೇನೆ. ಮಕ್ಕಳ ಹಿತ, ಎರಡು ಸೀಟ್‌ಗಾಗಿ ಸಿದ್ಧಾಂತ ಬಲಿ ಕೊಟ್ಟಿದ್ದೀರಿ. ಸೋಮವಾರ ಅವರನ್ನು(ದೇವೇಗೌಡ) ಅಧ್ಯಕ್ಷಗಿರಿಯಿಂದ ತೆಗೆದು ಸಿ.ಕೆ.ನಾಣು ಅವರಿಗೆ ಅಧಿಕಾರ ಕೊಟ್ಟಿದ್ದೇವೆ. 92ನೇ ವಯಸ್ಸಿನಲ್ಲಿ ಸಿದ್ಧಾಂತ ಬಿಟ್ಟು ಕೊಟ್ರಿ. ನಾನು ಹುಟ್ಟಿದ್ದು ಸಿದ್ಧಾಂತಕ್ಕಾಗಿ. ವಾಜಪೇಯಿಯವರು ಮಂತ್ರಿಯಾಗಲು ಕರೆದರೂ ನಾನು ಹೋಗಲಿಲ್ಲ. ಗೌರ್ನರ್ ಆಗಲು ಕರೆದರೂ ಹೋಗಲಿಲ್ಲ. 5 ಮಂದಿ ಶಾಸಕರು ನಮ್ಮ ಬಳಿ ಇದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ನಮ್ಮದೇ ನಿಜವಾದ ಜೆಡಿಎಸ್: ಈ ವೇಳೆ ಮಾತನಾಡಿದ ಸಿ.ಕೆ.ನಾಣು, ಪಕ್ಷದ ಹಿತಾಸಕ್ತಿ ಬಲಿಕೊಟ್ಟು ಚುನಾವಣೆ ಗೆಲುವಿಗಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ದೇವೇಗೌಡರ ವರ್ತನೆಯನ್ನು ಸಭೆಯಲ್ಲಿ ಖಂಡಿಸಿದ್ದೇವೆ. ಗಾಂಧೀಜಿ ತತ್ವ-ಸಿದ್ಧಾಂತ ಬಿಟ್ಟುಕೊಡದೇ ಜಾತ್ಯತೀತ ಸಿದ್ಧಾಂತ ಮೈಗೂಡಿಸಿಕೊಂಡಿರುವ ನಮ್ಮದೇ ನಿಜವಾದ ಜೆಡಿಎಸ್ ಎಂದರು.
ಇಂಡಿಯಾಗೆ ಬೆಂಬಲ
ದೇಶದಲ್ಲಿ ಸದ್ಯ “ಇಂಡಿಯಾ’ ಮತ್ತು “ಎನ್‌ಡಿಎ’ ಎಂಬ ಎರಡು ಬಣಗಳಿವೆ. ನಾವು ಇಂಡಿಯಾಗೆ ಬೆಂಬಲಿಸಲು ನಿರ್ಧಾರ ಕೈಗೊಂಡಿದ್ದೇವೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.
ಇದೇ ನಿಜವಾದ ಜನತಾದಳ ಪಕ್ಷ. ನಮ್ಮದು ಸಿದ್ಧಾಂತ ಹೊಂದಿರುವ ಜೆಡಿಎಸ್ ಪಕ್ಷ. ನಮಗೇ ಜೆಡಿಎಸ್ ಪಕ್ಷದ ಚಿನ್ಹೆ ಕೊಡಬೇಕು. ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇವೆ.
– ಸಿ.ಎಂ.ಇಬ್ರಾಹಿಂ