ಹುಬ್ಬಳ್ಳಿ: ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಹಾಗೂ ಹುಬ್ಬಳ್ಳಿ ನಗರದಲ್ಲಿ ವಾಹನ ದಟ್ಟಣೆ ಕುಗ್ಗಿಸಲು ಸಹಕಾರಿಯಾಗುವ ಬೈಪಾಸ್ ಕಾಮಗಾರಿ ಇನ್ನು 15 ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹಾಗೂ ಸಂಸದ ಪ್ರಹ್ಲಾದ ಜೋಶಿ ತಿಳಿಸಿದರು. ಸೋಮವಾರ ಇಬ್ಬರು ನಾಯಕರು ಬೈಪಾಸ್ ಕಾಮಗಾರಿ ವೀಕ್ಷಿಸಿದರಲ್ಲದೆ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆ ಪಡೆದವರಿಂದ ಅಗತ್ಯ ಮಾಹಿತಿ ಪಡೆದುಕೊಂಡರು.
ಕಾಮಗಾರಿ ಕುರಿತಾಗಿ ಪ್ರತಿಕ್ರಿಯಿಸಿದ ಜಗದೀಶ ಶೆಟ್ಟರ, ಹುಬ್ಬಳ್ಳಿ-ವಿಜಯಪುರ, ಅಂಕೋಲಾ-ಹೊಸಪೇಟೆ, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಮೂಲಕ ನಗರದಲ್ಲಿ ಶೇ.50ರಷ್ಟು ವಾಹನ ದಟ್ಟಣೆ ಕಡಿಮೆ ಮಾಡಲು ಈ ಬೈಪಾಸ್ ಸಹಕಾರಿ ಆಗಲಿದೆ. 2018ರ ಜುಲೈ ವೇಳೆಗೆ ಬೈಪಾಸ್ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ.
248 ಕೋ.ರೂ. ಯೋಜನೆ: ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳಾದ 4, 63 ಹಾಗೂ 218ನ್ನು ಸಂಪರ್ಕ ಕಲ್ಪಿಸಬೇಕೆಂಬ ಬೇಡಿಕೆ ಹಲವಾರು ವರ್ಷಗಳಿದ್ದ ಇದೆ. ಈ ಮೊದಲ ಸೀಮಿತ ಯೋಜನೆಯಡಿ ಬೈಪಾಸ್ ನಿರ್ಮಾಣಕ್ಕೆ ಯೋಜಿಸಲಾಗಿತ್ತು.
ಅಂಕೋಲಾ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಮಾರ್ಗವಾಗಿಸುವ ಯೋಜನೆ ಅಡಿಯಲ್ಲಿಯೇ ಇದನ್ನು ಕೈಗೊಳ್ಳಲು ನಿರ್ಧರಿಸಲಾಗಿತ್ತಾದರೂ, ಅನಂತರದಲ್ಲಿ ವಿಸ್ತೃತ ಯೋಜನೆಗೆ ಕ್ರಮ ಕೈಗೊಳ್ಳಲಾಯಿತು ಎಂದರು.
ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ವಿಸ್ತೃತ ಯೋಜನೆಗೆ ಆರ್ಥಿಕ ನೆರವು ನೀಡಿದ್ದರಿಂದಾಗಿ ನವಲಗುಂದದಿಂದ ಗದಗ ರಸ್ತೆಗೆ ಹೆದ್ದಾರಿ ಸಂರ್ಪಕಕ್ಕೆ ಸುಮಾರು 68 ಕೋಟಿ ರೂ., ಹಾಗೂ ಅಂಚಟಗೇರಿಯಿಂದ ಗಬ್ಬೂರವರೆಗೆ ಹಾಗೂ ಗದಗ ರಸ್ತೆಗೆ ಸಂರ್ಪಕಕ್ಕೆ ಸುಮಾರು 180 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಒಟ್ಟಾರೆ ಬೈಪಾಸ್ ರಸ್ತೆ ಸುಮಾರು 15.9 ಕಿ.ಮೀ. ಉದ್ದ ಇದೆ. ಒಂದು ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ(ಹೆದ್ದಾರಿ), ಇನ್ನೊಂದನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳಲಾಗುತ್ತಿದೆ ಎಂದರು.
ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಬೈಪಾಸ್ ಮಾರ್ಗದಲ್ಲಿ ಒಂದು ಕಡೆ ಜಂಕ್ಷನ್ ಬರುತ್ತದೆ. ಎರಡು ಕಡೆ ರೈಲು ಮಾರ್ಗವನ್ನು ದಾಟಬೇಕಾಗಿದ್ದು, ರೈಲು ಮಾರ್ಗ ದಾಟಲು ಅಂಡರ್‌ಪಾಸ್ ಮಾಡಲಾಗುತ್ತದೆ. ಚತುಷ್ಪಥ ಬೈಪಾಸ್ ಮುಂದಿನ ವರ್ಷದ ಜುಲೈ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು.