ಬೈಂದೂರು: ಬೈಂದೂರು ಸಮೀಪದ ಒತ್ತಿನೆಣೆ ತಿರುವು ಅಪಘಾತಗಳಿಗೆ ಆಹ್ವಾನ ನೀಡುವ ಸ್ಥಳವಾಗಿ ಮಾರ್ಪಟ್ಟಿದೆ. ಹಲವಾರು ಅಪಘಾತ ನಡೆದರೂ ಸಹ ಇಲಾಖೆ ಇದುವರೆಗೆ ದುರಸ್ತಿಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ನಿರಂತರ ರಸ್ತೆ ಅಪಘಾತ ಹೆದ್ದಾರಿ ಕಾಮಗಾರಿ ನಡೆಸುವ ಕಂಪೆನಿಗೆ ಬೈಂದೂರು ಒತ್ತಿನೆಣೆ ಸವಾಲಾಗಿ ಪರಿಣಮಿಸಿದೆ. ಜೇಡಿ ಮಣ್ಣಿನಿಂದಾವೃತವಾದ ಗುಡ್ಡವನ್ನು ಕೊರೆದು ರಸ್ತೆ ನಿರ್ಮಾಣ ಮಾಡಿರುವುದು ಆರಂಭದಲ್ಲಿ ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿತ್ತು. ಗುಡ್ಡ ಕುಸಿತ ಉಂಟಾಗಿ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು.
ಬಳಿಕ ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳ ನಿರಂತರ ಒತ್ತಡದಿಂದ ಸುಗಮ ರಸ್ತೆ ನಿರ್ಮಾಣವಾದರೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ನಿರಂತರ ಅಪಘಾತಗಳು ನಡೆಯುತ್ತಿದೆ. ಹೀಗಾಗಿ ಹೆದ್ದಾರಿ ಪ್ರಾಧಿಕಾರ ಅಪಾಯಕಾರಿ ತಿರುವುಗಳನ್ನು ಸರಿಪಡಿಸಿ ರಸ್ತೆ ಅಪಘಾತ ನಿಯಂತ್ರಿಸುವ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ.
6 ತಿಂಗಳಲ್ಲಿ 8ಕ್ಕೂ ಹೆಚ್ಚು ಅಪಘಾತ ಶಿರೂರು ಕಡೆಯಿಂದ ಬೈಂದೂರು ಮಾರ್ಗವಾಗಿ ಸಾಗುವಾಗ ಎಡಭಾಗದ ರಸ್ತೆ ಸಾಕಷ್ಟು ಎತ್ತರದಲ್ಲಿದೆ. ಇಳಿಜಾರಿನಲ್ಲಿ ಒಮ್ಮೆಲೆ ತಿರುವು ಎದುರಾಗುವುದರಿಂದ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಬಲಭಾಗದ ರಸ್ತೆಗೆ ಉರುಳುತ್ತಿದೆ. ಕಳೆದ ಆರು ತಿಂಗಳಲ್ಲಿ ಎಂಟಕ್ಕೂ ಅಧಿಕ ಘಟನೆಗಳು ನಡೆದಿದೆ. ಹೀಗಾಗಿ ಇಲಾಖೆ ಮತ್ತು ಕಾರ್ಯನಿರ್ವಾಹಕ ಕಂಪೆನಿ ಈ ಬಗ್ಗೆ ಗಮನಹರಿಸಿ ತಾತ್ಕಾಲಿಕ ಕ್ರಮ ನಿರ್ವಹಿಸಬೇಕಿದೆ.
ಒತ್ತಿನೆಣೆ ಅಪಾಯದ ತಿರುವು ಹಾಗೂ ಅವೈಜ್ಞಾನಿಕ ಕಾಮಗಾರಿ ಕುರಿತು ಈ ಹಿಂದೆ ಆರಕ್ಷಕ ಇಲಾಖೆ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದಿದೆ. ನಿರಂತರ ಅಪಘಾತ ನಡೆಯುವುದಕ್ಕೆ ಹೆದ್ದಾರಿ ಅಸಮರ್ಪಕತೆ ಕಾರಣವಾಗಿತ್ತು. ಸರಿಪಡಿಸಲು ಇಲಾಖೆಯ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಗಮನಹರಿಸುತ್ತೇವೆ ಎಂದು ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ.
-ಸಂತೋಷ ಕಾಯ್ಕಿಣಿ, ವೃತ್ತನಿರೀಕ್ಷಕರು ಬೈಂದೂರು