Advertisement

ಹೆಸರಿಗೆ ಮಾತ್ರ ಹೈಟೆಕ್‌; ಇರೋದು ಓಬಿರಾಯನ ಕಾಲದ ವ್ಯವಸ್ಥೆ

03:10 AM Mar 24, 2021 | Team Udayavani |

ಬೈಂದೂರು: ತಾಲೂಕು ಕೇಂದ್ರವಾದ ಬೈಂದೂರಿನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಳೆದೊಂದು ತಿಂಗಳಿಂದ ತಾಂತ್ರಿಕ ಸಮಸ್ಯೆಯಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದು ಆಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ. ಹೆಸರಿಗೆ ಮಾತ್ರ ಹೈಟೆಕ್‌ ಆಡಳಿತ, ಕಚೇರಿಯಲ್ಲಿ ಮಾತ್ರ ಓಬಿರಾಯನ ಕಾಲದ
ವ್ಯವಸ್ಥೆ ಇದೆ ಎನ್ನುವುದು ಸಾಮಾನ್ಯ ಜನರ ಅಳಲಾಗಿದೆ.

Advertisement

ನಿರಂತರ ಕೈ ಕೊಡುತ್ತಿರುವ ಸರ್ವರ್‌
ಬೈಂದೂರಿನ ಜನರ ಪಾಲಿಗೆ ನೋಂದಣಿ ಎನ್ನುವುದು ಗಗನ ಕುಸುಮದಂತೆ ಭಾಸವಾಗಿದೆ. ಬೆಂಗಳೂರಿಗೆ ತೆರಳಿಯಾದರೂ ಕಚೇರಿ ಕೆಲಸ ಮಾಡಿ ಬರಬಹುದು. ಆದರೆ ಬೈಂದೂರಿನ ಕಚೇರಿಗಳಲ್ಲಿ ಸಣ್ಣ ಕೆಲಸವೂ ಆಗುತ್ತಿಲ್ಲ. ತಾಲೂಕು ಕೇಂದ್ರದ ಪ್ರಮುಖ ನೋಂದಣಿ ಕಚೇರಿಯಲ್ಲಿ ಸರ್ವರ್‌ ಇದ್ದರೆ ಕಂಪ್ಯೂಟರ್‌ ಸರಿ ಇರುವು ದಿಲ್ಲ, ಕಂಪ್ಯೂಟರ್‌ ಸರಿ ಇದ್ದರೆ ಸರ್ವರ್‌ ಸಮಸ್ಯೆ. ಒಟ್ಟಾರೆಯಾಗಿ ಸಾಲದ ನೋಂದಣಿ, ಬ್ಯಾಂಕ್‌ ವ್ಯವಹಾರ, ಸಾಲುಪಟ್ಟಿ, ಭೂಮಿ ನೋಂದಣಿ ಸೇರಿದಂತೆ ಹತ್ತಾರು ವ್ಯವಹಾರಗಳಿಗೆ ನೂರಾರು ಜನರು ಕಳೆದ ಒಂದು ತಿಂಗಳಿಂದ ಬೈಂದೂರಿನ ಕಚೇರಿಗೆ ಅಲೆಯುವಂತಾಗಿದೆ.

ನಿಗದಿಪಡಿಸಿದ ನೋಂದಣಿಗಳು ಬಾಕಿ
ಕಳೆದ ಬಾರಿ ರಾಜ್ಯ ವ್ಯಾಪ್ತಿ ನೋಂದಣಿ ಸಮಸ್ಯೆ ಇರುವುದನ್ನು ಸರಿಪಡಿಸಿದ ಬಳಿಕ ಸೋಮವಾರ ಕಡತವೊಂದು ಕಂಪ್ಯೂಟರ್‌ನಲ್ಲಿ ಬಾಕಿಯಾದ ಹಿನ್ನೆಲೆಯಲ್ಲಿ ನಿಗದಿಪಡಿಸಿದ ನೋಂದಣಿಗಳು ಬಾಕಿ ಉಳಿದು ಬಿಟ್ಟಿದೆ. ಕರಾವಳಿ ಭಾಗದಲ್ಲಿ ಒಂದು ಕುಟುಂಬದಲ್ಲಿ ನೂರಾರು ಸದಸ್ಯರಿರುತ್ತಾರೆ.ಜಾಗ ವಿಕ್ರಯಿಸುವಾಗ ಎಲ್ಲ ಸದಸ್ಯರ ಸಹಿ ಬೇಕಾಗಿರುವುದರಿಂದ ವಯೋವೃದ್ಧರನ್ನು ಕೂಡ ಮುಂಚಿತವಾಗಿ ಕಚೇರಿಗೆ ಕರೆ ತಂದು ಕುಳ್ಳಿರಿಸಿ ಕಾಯುವುದು ನಿತ್ಯ ಕತೆ ಯಾಗಿದೆ. ಅದರಲ್ಲೂ ನೋಂದಣಿ ಕಚೇರಿಯಲ್ಲಿ ಮೂಲ ಸೌಕರ್ಯಗಳಿಲ್ಲದೆ ಮಹಿಳೆಯರು, ಹಿರಿಯರು ಫ‌ಜೀತಿ ಪಡುವಂತಾಗಿದೆ. ದೂರದ ಊರಿನಿಂದ ನೋಂದಣಿಗಾಗಿ ಒಂದು ದಿನದ ಮಟ್ಟಿಗೆ ಬಂದವರ ಪರಿಸ್ಥಿತಿ ಹೇಳತೀರದಾಗಿದೆ.

ತಾಲೂಕು ಕಚೇರಿಯಲ್ಲಿ ಸಿಬಂದಿಯಿಲ್ಲ
ನೋಂದಣಿ ಕಚೇರಿ ಪರಿಸ್ಥಿತಿ ಈ ರೀತಿಯಾದರೆ ಇನ್ನು ತಾಲೂಕು ಕಚೇರಿ ಅವ್ಯವಸ್ಥೆ ಹೇಳತೀರದಾಗಿದೆ. ಕಳೆದ ಹಲವು ದಿನಗಳಿಂದ ಹರತಾಳ ನಡೆಸುವ ಸರ್ವೇ ಸಿಬಂದಿಯಿಂದಾಗಿ ತಟಸ್ಥವಾದರೆ, ಪ್ರಮುಖ ಕಚೇರಿಯಲ್ಲಿ ಸಿಬಂದಿ ಕೊರತೆಯಿಂದ ಇರುವ ಮೂರ್‍ನಾಲ್ಕು ಸಿಬಂದಿ ಅಧಿಕ ಒತ್ತಡದ ಕೆಲಸ ನಿರ್ವಹಿಸುವಂತಾಗಿದೆ. ಈ ಕುರಿತು ಸುದಿನ ಹಿಂದೆ ಕೂಡ ವರದಿ ಮಾಡಿತ್ತು. ಇದುವರೆಗೆ ಬೈಂದೂರಿನಲ್ಲಿ ಖಾಯಂ ತಹಶೀಲ್ದಾರರು ಕೂಡ ಇಲ್ಲ, ಕೆಲಸದ ಒತ್ತಡದಿಂದ ತಾಲೂಕು ಕಚೇರಿ ಸಿಬಂದಿಯೋರ್ವ ಹೃದಯಾಘಾತ ಉಂಟಾಗಿ ಆಸ್ಪತ್ರೆ ಸೇರಿರುವ ಘಟನೆ ಕೂಡ ನಡೆದಿದೆ. ಆದರೂ ಸಹ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲ.
ಒಟ್ಟಾರೆಯಾಗಿ ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಫಾಲೋಅಫ್‌ ಕೊರತೆಯಿಂದ ತಾಲೂಕು ಕೇಂದ್ರದ ಆಡಳಿತ ವ್ಯವಸ್ಥೆ ಹಳಿ ತಪ್ಪಿರುವುದು ಬೈಂದೂರಿನ ಭವಿಷ್ಯದ ಬೆಳವಣಿಗೆಗೆ ಹೊಡೆತ ನೀಡುವು ದರಲ್ಲಿ ಎರಡು ಮಾತಿಲ್ಲ ಎನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.

ತಾತ್ಕಾಲಿಕ ತಾಂತ್ರಿಕ ಸಮಸ್ಯೆ
ಬೈಂದೂರು ಕಚೇರಿಯಲ್ಲಿ ತಾತ್ಕಾಲಿಕ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ನೋಂದಣಿ ವಿಳಂಬವಾಗಿದೆ. ಕಳೆದ ವಾರ ಸರ್ವರ್‌ ಸಮಸ್ಯೆ ರಾಜ್ಯದ ಎಲ್ಲ ಕಡೆ ಉಂಟಾಗಿದ್ದು ಪ್ರಸ್ತುತ ಕಂಪ್ಯೂಟರ್‌ ಸಮಸ್ಯೆ ಸರಿಪಡಿಲಾಗುವುದು.ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೇವೆ ನೀಡಲಾಗುವುದು.
-ಮಧು ಸೂ ದನ್‌,ಉಪ ನೋಂದಣಾಧಿಕಾರಿ ಬೈಂದೂರು

Advertisement

– ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next