ಬೈಂದೂರು: ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಕುತೂಹಲಕ್ಕೆ ಕಾರಣವಾಗಿರುವ ಕ್ಷೇತ್ರ ಬೈಂದೂರು. ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಶಾಸಕರಾಗಿದ್ದ ಕೆ. ಗೋಪಾಲ ಪೂಜಾರಿ ಸ್ಪರ್ಧಿಸಿ ದ್ದರೆ, ಬಿಜೆಪಿಯಿಂದ ಅಚ್ಚರಿಯ ಹೊಸ ಮುಖ ಗುರುರಾಜ್ ಗಂಟಿಹೊಳೆ ಸ್ಪರ್ಧಿಸಿದ್ದಾರೆ. ಇಬ್ಬರ ನಡುವೆ ನಿಕಟ ಪೈಪೋಟಿ ಏರ್ಪಟ್ಟಿರುವುದು ಸ್ಪಷ್ಟ. ಹಾಗಾಗಿ ಬೈಂದೂರು ಕ್ಷೇತ್ರದಲ್ಲಿ 9 ಮಂದಿ ಕಣದಲ್ಲಿದ್ದರೂ ಕಾಂಗ್ರೆಸ್ – ಬಿಜೆಪಿ ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ.
4 ಬಾರಿ ಶಾಸಕರಾದ ಕಾಂಗ್ರೆಸ್‌ನ ಗೋಪಾಲ ಪೂಜಾರಿ ಕ್ಷೇತ್ರದ ಆಳ – ಅಗಲಗಳನ್ನೆಲ್ಲ ಚೆನ್ನಾಗಿ ಅರಿತರವರು. ಒಂದು ವರ್ಷದಿಂದ ಕ್ಷೇತ್ರದಾದ್ಯಂತ ಸುತ್ತಾಟ ನಡೆಸಿದ್ದಾರೆ. ಜಿಲ್ಲೆಯ ಬೇರೆಡೆಗಿಂತ ಇಲ್ಲಿ ಕೊಂಚ ಹೆಚ್ಚು ಪಕ್ಷದ ಸಂಘಟನೆ ಗಟ್ಟಿ ಇದ್ದಂತಿರುವುದು, ಕ್ಷೇತ್ರದ ಮಲೆ ನಾಡು ಕಡೆ ಪ್ರಾಬಲ್ಯ ಹೊಂದಿರುವುದು, ಕಳೆದ ಬಾರಿಯ ಸೋಲಿನ ಕುರಿತ ತುಸು ಅನು ಕಂಪ, ಬಿಜೆಪಿಯಲ್ಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟರ ಬದಲಿಗೆ ಬೇರೊಬ್ಬರಿಗೆ ಟಿಕೆಟ್ ನೀಡಿರುವುದು, ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದವರು ಕಾಂಗ್ರೆಸ್ ಸೇರಿರುವುದು ಗೋಪಾಲ ಪೂಜಾರಿಗೆ ಎಷ್ಟರಮಟ್ಟಿಗೆ ಲಾಭ ತಂದುಕೊಡಲಿದೆ ಎಂಬು ದನ್ನು ನೋಡಬೇಕಿದೆ.
ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾದ ಅನುಭವವಿರುವ ಆರೆಸ್ಸೆಸ್ ಕಟ್ಟಾಳು ಗುರುರಾಜ್ ಗಂಟಿಹೊಳೆ 10 ವರ್ಷಗಳ ಕಾಲ ಪ್ರಚಾರಕರಾಗಿ ಶ್ರಮಿಸಿದ್ದರೂ ಚುನಾವಣ ರಾಜಕೀಯಕ್ಕೆ ಹೊಸಬರು. ಸಾಮಾನ್ಯ ಕಾರ್ಯಕರ್ತರಾಗಿದ್ದ ಇವರನ್ನು ಗುರುತಿಸಿ ಟಿಕೆಟ್ ಕೊಟ್ಟಿರುವುದೇ ಬಿಜೆಪಿಗೆ ಲಾಭ ತಂದರೂ ಅಚ್ಚರಿಯಿಲ್ಲ. ಕ್ಷೇತ್ರದ ಕರಾವಳಿ ಭಾಗದಲ್ಲಿ ಪಕ್ಷ ಸಂಘಟನೆ ಬಲಿಷ್ಠವಾಗಿರುವುದು, ಹಿಂದಿನ ಶಾಸಕರ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯ, ಕೇಂದ್ರ, ರಾಜ್ಯ ಸರಕಾರದ ಕಾರ್ಯಗಳು, ಆರೆಸ್ಸೆಸ್ ಸಂಘಟನೆಯ ಬಲ, ಇದಲ್ಲದೆ ಅಮಿತ್ ಶಾ ರಂತಹ ಪ್ರಮುಖ ನಾಯಕರು ಬೈಂದೂರಿಗೆ ಪ್ರಚಾರಕ್ಕೆ ಬರುತ್ತಿರುವುದು ಅನುಕೂಲಕರ ವಾತಾವರಣ ನಿರ್ಮಿಸಬಹುದು ಎನ್ನುವ ಅಭಿಪ್ರಾಯವಿದೆ. ಈ ಮಧ್ಯೆ ಶಾಸಕ ಬಿ.ಎಂ. ಸುಕುಮಾರ ಶೆಟ್ಟರು ನಿಷ್ಕ್ರಿಯರಾಗಿರುವುದೂ ಮೈನಸ್ ಆಗ ಬಹುದೇ ಎಂಬ ಮಾತುಗಳಿವೆ.
ಜಾತಿ ಕೈಹಿಡಿಯಬಹುದೇ?: ಇಲ್ಲಿ ಬಿಲ್ಲವ ಹಾಗೂ ಬಂಟ ಮತದಾರರೇ ಹೆಚ್ಚಿದ್ದು, ಬಿಜೆಪಿ ಬಂಟ ಸಮುದಾಯದ ಗುರುರಾಜ್ ಗಂಟಿಹೊಳೆ ಹಾಗೂ ಕಾಂಗ್ರೆಸ್ ಬಿಲ್ಲವ ಸಮುದಾಯದ ಗೋಪಾಲ ಪೂಜಾರಿಯವರಿಗೆ ಅವಕಾಶ ನೀಡಿವೆ. ಇನ್ನಿತರ ಪ್ರಮುಖ ಸಮುದಾಯಗಳಾದ ದೇವಾಡಿಗರು, ಕೊಂಕಣ ಖಾರ್ವಿ, ಎಸ್ಸಿ-ಎಸ್ಟಿ, ಮೊಗವೀರರು ಯಾರ ಕಡೆಗೆ ಎನ್ನುವುದೂ ಮತ್ತೂಂದು ಪ್ರಮುಖ ಅಂಶ. ಇನ್ನು ಜೆಡಿಎಸ್‌ನಿಂದ ಮನ್ಸೂರ್ ಇಬ್ರಾಹಿಂ, ಎಷ್ಟರ ಮಟ್ಟಿಗೆ ಅಲ್ಪ ಸಂಖ್ಯಾಕ ಮತಗಳನ್ನು ಪಡೆಯಲಿದ್ದಾರೆ ಎಂಬುದು ಪ್ರಮುಖವಾಗಿದೆ.
-ಪ್ರಶಾಂತ್ ಪಾದೆ