Advertisement

Byndoor constituency: ಬಿಜೆಪಿ ಟಿಕೆಟ್‌ ಆಕಾಂಕ್ಷಿ ಬಾಬು ಹೆಗ್ಡೆ ಕಾಂಗ್ರೆಸ್‌ ಸೇರ್ಪಡೆ

01:03 PM Apr 25, 2023 | Team Udayavani |

ಕುಂದಾಪುರ/ಬೈಂದೂರು: ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಜಿ.ಪಂ. ಮಾಜಿ ಸದಸ್ಯ ಬಾಬು ಹೆಗ್ಡೆ, ಮತ್ತೋರ್ವ ಮಾಜಿ ಸದಸ್ಯ ಶಂಕರ ಪೂಜಾರಿ ಸಹಿತ ಹಲವು ಪ್ರಮುಖ ಬಿಜೆಪಿ ನಾಯಕರನ್ನು ರವಿವಾರ ಬೈಂದೂರಿನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ ಧ್ವಜ ನೀಡಿ, ಬರಮಾಡಿಕೊಂಡರು.

Advertisement

ಬಿಜೆಪಿ ಮಾಜಿ ಪ್ರ. ಕಾರ್ಯದರ್ಶಿ, ತಾ.ಪಂ. ಮಾಜಿ ಸದಸ್ಯರಾದ ಸದಾಶಿವ ಪಡುವರಿ, ದಸ್ತಗಿರಿ ಸಾಹೇಬ್‌, ಕುಂದಾಪುರ ಎಪಿಎಂಸಿ ಅಧ್ಯಕ್ಷ ವೆಂಕಟ ಪೂಜಾರಿ, ಬಿಜೆಪಿ ವಂಡ್ಸೆ ಶಕ್ತಿ ಕೇಂದ್ರದ ಅಧ್ಯಕ್ಷ ದೀಪಕ್‌ ಶೆಟ್ಟಿ, ಗ್ರಾಮ ಮಟ್ಟದ ನಾಯಕರು ಹಾಗೂ ಅವರೊಂದಿಗೆ ನೂರಾರು ಮಂದಿ ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆಯಾದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಬಿಜೆಪಿ ಮೇಲೆ ವಿಶ್ವಾಸ ಕಳೆದುಕೊಂಡು, ನಮ್ಮ ಮೇಲೆ ನಂಬಿಕೆಯಿಟ್ಟು, ನೂರಾರು ಮಂದಿ ಬಂದಿದ್ದಾರೆ. ಇಲ್ಲಿ ಹೊಸಬರು, ಹಳಬರೆಂಬ ಗೊಂದಲ ಬೇಡ. ಒಟ್ಟಾಗಿ ಶ್ರಮಿಸೋಣ. ಕಾಂಗ್ರೆಸ್‌ ಗೆಲ್ಲಿಸೋಣ ಎಂದರು.

ಕಾಂಗ್ರೆಸ್‌ ಸಮುದ್ರವಿದ್ದಂತೆ

ಯೂಸ್‌ ಮಾಡಿ ಕಸದ ಬುಟ್ಟಿಗೆ ಬಿಸಾಕುವ ಸಂಸ್ಕೃತಿ ಕಾಂಗ್ರೆಸ್‌ನದ್ದಲ್ಲ. ಬಾಬು ಹೆಗ್ಡೆ ಸಹಿತ 101-2 ಮಂದಿಗೆ ಟಿಕೆಟ್‌ ಕೊಡುವುದಾಗಿ ನಂಬಿಸಿ, ಕೆಲಸ ಮಾಡಲು ಹೇಳಿ ವಂಚಿಸಿದರು. ಪಕ್ಷಕ್ಕೆ ಬಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಕೆಲಸ ಮಾಡುವವರನ್ನು ಗುರುತಿಸುವ ಕೆಲಸ ಪಕ್ಷ ಖಂಡಿತ ಮಾಡುತ್ತದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಹೇಳಿದರು.

Advertisement

ಸ್ವಂತ ಮನೆಗೆ ಬಂದಿದ್ದೇನೆ;

ಜಿ.ಪಂ. ಮಾಜಿ ಸದಸ್ಯ ಶಂಕರ ಪೂಜಾರಿ ಮಾತನಾಡಿ, ಕಾಂಗ್ರೆಸ್‌ ನನ್ನ ಸ್ವಂತ ಮನೆ. 20 ವರ್ಷ ಕಾಂಗ್ರೆಸ್‌ನಲ್ಲಿದ್ದು, ದುಡಿದ ಖುಷಿಯಿದೆ. ಸುಕುಮಾರ್‌ ಶೆಟ್ರಾ ಕರೆದಾಗ ಗೌರವದಿಂದ ಬಿಜೆಪಿ ಸೇರಿದೆ. ಆದರೆ ಈ ಸಲ ಸುಕುಮಾರ್‌ ಶೆಟ್ರಾ, ಬಾಬು ಹೆಗ್ಡೆಯವರನ್ನು ನಡೆಸಿಕೊಂಡ ರೀತಿಯಿಂದ ಬೇಸತ್ತು ಕಾಂಗ್ರೆಸ್‌ ಸೇರಿದ್ದೇನೆ ಎಂದರು.

ಹಲವು ಬಾರಿ ಕಾಂಗ್ರೆಸ್‌ನಿಂದ ಸೇರಲು ಆಹ್ವಾನ ಬಂದಿತ್ತು. ಈಗ ಸುಸಮಯವಾಗಿದ್ದು, ಗೋಪಾಲ ಪೂಜಾರಿಯವರನ್ನು ಗೆಲ್ಲಿಸುವುದೇ ಗುರಿ ಎಂದು ಕುಂದಾಪುರ ಎಪಿಎಂಸಿ ಅಧ್ಯಕ್ಷ ವೆಂಕಟ ಪೂಜಾರಿ ಹೇಳಿದರು.

ಉದ್ಯಮಿ ಯು.ಬಿ. ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಮದನ್‌ ಕುಮಾರ್‌, ಪ್ರದೀಪ್‌ ಶೆಟ್ಟಿ ಗುಡಿಬೆಟ್ಟು, ಮುಖಂಡರಾದ ಎಂ.ಎ. ಗಫೂರ್‌, ಎಸ್‌. ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ, ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಗೌರಿ ದೇವಾಡಿಗ, ಮತ್ತಿತರರು ಉಪಸ್ಥಿತರಿದ್ದರು.

ನಂಬಿಸಿ, ಮೋಸ ಮಾಡಿದ್ದಾರೆ…

35 ವರ್ಷದಿಂದ ಬಿಜೆಪಿಯಲ್ಲಿ ಕೆಲಸ ಮಾಡಿ, ಎಲ್ಲ ಶಾಸಕರು, ಸಂಸದರ ಚುನಾವಣೆಯಲ್ಲೂ ಶ್ರಮಿಸಿದ್ದೇನೆ. 2013 ರಿಂದ ಈವರೆಗೆ 3 ಬಾರಿಯೂ ತಪ್ಪಿಸಿದರು. ನಾನು ಸಾಲಗಾರ ಅಲ್ಲ, ಸುಸ್ತಿದಾರನೂ ಅಲ್ಲ. ಅವಿದ್ಯಾವಂತನೂ ಅಲ್ಲ. ನಾನೊಬ್ಬ ಪದವೀಧರ. ಇಷ್ಟಿದ್ದು, ಇನ್ನೇನು ಮಾನದಂಡ ಬೇಕು? ನಂಬಿಸಿ ಮೋಸ ಮಾಡಿದ ಬಿಜೆಪಿಯ ಕುಕೃತಿಯನ್ನು ಮುಂದಿನ ದಿನಗಳಲ್ಲಿ ಬಯಲು ಮಾಡುವೆ. ಯಾವುದೇ ಷರತ್ತಿಲ್ಲದೆ ಬಂದಿದ್ದೇನೆ.
– ಬಾಬು ಹೆಗ್ಡೆ, ಜಿ.ಪಂ. ಮಾಜಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next