ಬೈಂದೂರು: ಉಡುಪಿ ಜಿಲ್ಲೆಯಲ್ಲಿಯೇ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಡುತ್ತಿದೆ ಬೈಂದೂರು. ಕಾಂಗ್ರೆಸ್‌ನಿಂದ ಹುರಿಯಾಳು ಬಹುತೇಕ ಘೋಷಿತವಾಗಿದ್ದರೆ, ಬಿಜೆಪಿಯಿಂದ ಹಾಲಿ ಶಾಸಕರೊಂದಿಗೆ ಮತ್ತಷ್ಟು ಹೆಸರುಗಳು ಕೇಳಿಬರುತ್ತಿವೆ.
ಆದರೆ ಸೆಣಸಾಳುಗಳ ಹೆಸರು ಅಂತಿಮಗೊಳ್ಳುವ ಮೊದಲೇ ಒಂದು ಬಗೆಯ ತೇಜಿ ಕ್ಷೇತ್ರದಲ್ಲಿ ಎದ್ದು ಕಾಣತೊಡಗಿದೆ.
ಕಳೆದ ಬಾರಿ ಕಳೆದುಕೊಂಡಿದ್ದ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಹುರುಪಿನಲ್ಲಿದೆ ಕಾಂಗ್ರೆಸ್ ಬಣ. ಆದರೆ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದೆಂದು ಮರುಪಟ್ಟು ಬಿಗಿಯುತ್ತಿದೆ ಬಿಜೆಪಿ. ಇದು ಉಡುಪಿ ಜಿಲ್ಲೆಯ ಗಡಿ ಕ್ಷೇತ್ರವಾದ, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಬೈಂದೂರು ವಿಧಾನಸಭಾ ಕ್ಷೇತ್ರದ ಸದ್ಯದ ರಾಜಕೀಯ ಚಿತ್ರಣ.
ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತ್ರ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಬಹುತೇಕ ಅವರೇ ಅಭ್ಯರ್ಥಿಯಾಗಲಿದ್ದಾರೆ. ಈಗಾಗಲೇ 6 ಬಾರಿ ಸ್ಪರ್ಧಿಸಿ, 4 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರ ಏಳನೇ ಬಾರಿಯ ಅದೃಷ್ಟ ಪರೀಕ್ಷೆಯಿದು.
2018ರ ಚುನಾವಣೆಯಲ್ಲಿ ಗೋಪಾಲ ಪೂಜಾರಿ ಅವರನ್ನು 25,393 ಮತಗಳ ಅಂತರದಿಂದ ಸೋಲಿಸಿದ ಬಿಜೆಪಿಯ ಬಿ.ಎಂ. ಸುಕುಮಾರ್ ಶೆಟ್ಟಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಈ ಬಾರಿಯೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಪಕ್ಷದ ಪ್ರಥಮ ಆಯ್ಕೆ ಇವರೇ ಆಗಬಹುದು. ಆದರೆ ಇವರೊಂದಿಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಜಿ.ಪಂ. ಮಾಜಿ ಸದಸ್ಯ ಬಾಬು ಶೆಟ್ಟಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಗುರುರಾಜ್ ಗಂಟಿಹೊಳೆ, ಬೈಂದೂರು ಮಂಡಲದ ಮಾಜಿ ಅಧ್ಯಕ್ಷ ಪ್ರಣಯ್ ಕುಮಾರ್ ಶೆಟ್ಟಿ, ಉದ್ಯಮಿ ನಿತಿನ್ ನಾರಾಯಣ್ ಹೆಸರುಗಳೂ ಚಾಲ್ತಿಯಲ್ಲಿವೆ. ಹೆಗ್ಡೆಯವರಿಗೆ ಜಿಲ್ಲೆಯ ಎಲ್ಲಿಯಾದರೂ ಒಂದು ಕಡೆ ಸ್ಪರ್ಧೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಅವರ ಬೆಂಬಲಿಗರೂ ಅಭಿಯಾನ ಆರಂಭಿಸಿದ್ದಾರೆ. ಹಳೆಯ ಕುಂದಾಪುರ ತಾಲೂಕು (ಬೈಂದೂರು ಒಳಗೊಂಡ) ಪರಿಚಯವಿರುವುದೂ ಅನುಕೂಲಕರ ಅಂಶಗಳೂ ಆಗಬಹುದು. ಇವರಲ್ಲದೇ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಹೆಸರುಗಳೂ ಪಕ್ಷದ ಪಡಸಾಲೆಯಲ್ಲಿ ಓಡಾಡುತ್ತಿವೆ. ಇಷ್ಟಕ್ಕೇ ಮುಗಿಯಲಿಲ್ಲ. ಕಡೇಗಳಿಗೆಯಲ್ಲಿ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ಶ್ರಮಿಸಿದವರೊಬ್ಬರ ಹೆಸರು ಅಚ್ಚರಿಯ ಆಯ್ಕೆಯಂತೆ ಉದ್ಭವಿಸುವ ಸಾಧ್ಯತೆಯೂ ಇದೆ.
ಕಾಂಗ್ರೆಸ್‌ನಿಂದ ಅಭ್ಯರ್ಥಿ ಆಯ್ಕೆ ಬಗ್ಗೆ ಗೊಂದಲ ಇಲ್ಲ. ಹಾಗಾಗಿ ಗೋಪಾಲ ಪೂಜಾರಿಯವರು ಕ್ಷೇತ್ರಾದ್ಯಂತ ತಿರುಗಾಟ ಆರಂಭಿಸಿದ್ದಾರೆ. ಬಿಜೆಪಿಯಿಂದಲೂ ಹಾಲಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹಿಂದೆ ಉಳಿದಿಲ್ಲ. ಒಂದು ವೇಳೆ ಇವರಿಬ್ಬರು ಮತ್ತೆ ಎದು ರಾಳಿಗಳಾದರೆ ಇದು ಇವರಿಬ್ಬರ ನಡುವಿನ ಮೂರನೇ ಹಣಾಹಣಿ. ಕಳೆದೆರಡು ಚುನಾವಣೆಗಳಲ್ಲಿ ಇಬ್ಬರೂ ಒಂದೊಂದು ಬಾರಿ ಗೆದ್ದು ಪಾಯಿಂಟ್ ಸಮಗೊಂಡಿದೆ.
ಸುಮಾರು 100 ಕಿ.ಮೀ. ಪಶ್ಚಿಮ ಘಟ್ಟ ಹಾಗೂ 40 ಕಿ.ಮೀ. ಕರಾವಳಿ ಪ್ರದೇಶವನ್ನು ಹೊಂದಿರುವ ವಿಶಿಷ್ಟವಾದ ಕ್ಷೇತ್ರ ಬೈಂದೂರು. ಜಿಲ್ಲೆಯಲ್ಲಿಯೇ ಅತ್ಯಧಿಕ ಮತದಾರರನ್ನು ಹೊಂದಿರುವ ಹೆಗ್ಗಳಿಕೆಯೂ ಇದರದ್ದೇ. ತಾಲೂಕು ರಚನೆಯ ಬಳಿಕ ನಡೆಯುತ್ತಿರುವ ಎರಡನೇ ಚುನಾವಣೆ ಇದು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆದು ಬಿಜೆಪಿ ಶಕ್ತಿ ವರ್ಧನೆಯಾಗಿದ್ದರೆ, ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯೂ ಇಲ್ಲಿ ಸದ್ದು ಮಾಡಿದೆ. ಜೆಡಿಎಸ್‌ನಿಂದ ಅಭ್ಯರ್ಥಿಗಳ ಹೆಸರು ಇನ್ನೂ ಪ್ರಕಟವಾಗಬೇಕಿದೆ.
ಗೆಲ್ಲುವ ಅಭ್ಯರ್ಥಿಗೆ ಮಣೆ
ಬಿಜೆಪಿಗೆ ಈ ಕ್ಷೇತ್ರವನ್ನು ಕಳೆದುಕೊಳ್ಳಲು ಸುತರಾಂ ಇಷ್ಟವಿಲ್ಲ. ಹಾಗಾಗಿ ಗೆಲ್ಲುವ ಕುದುರೆಯ ಹುಡುಕಾಟದಲ್ಲಿ ಪಕ್ಷದ ವರಿಷ್ಠರಿದ್ದಾರೆ. ಅದೇ ಸಂದರ್ಭದಲ್ಲಿ ಪ್ರಯೋಗಕ್ಕೆ ಅವಕಾಶವಿದೆಯೇ ಎಂಬುದಾಗಿಯೂ ಇಣುಕಿ ನೋಡುತ್ತಿದ್ದಾರೆ. ಪ್ರಯೋಗಕ್ಕೆ ಇಳಿಯದೇ ಇದ್ದರೆ ಹಾಲಿ ಶಾಸಕರ ಹೆಸರೇ ಅಂತಿಮಗೊಳ್ಳಬಹುದು. ಒಂದುವೇಳೆ ಪ್ರಯೋಗಕ್ಕಿಳಿಯಲು ನಿರ್ಧರಿಸಿದರೆ ಅಳೆದೂ ತೂಗಿ ಹೊಸ ಹೆಸರನ್ನು ಸೂಚಿಸಬಹುದು. ದೊಡ್ಡ ರಿಸ್ಕ್ ಗೂ ಸಿದ್ಧವೆಂದಾದರೆ ಅಚ್ಚರಿಯ ಆಯ್ಕೆಯನ್ನು ಪ್ರಕಟಿಸಬಹುದು.
-ಪ್ರಶಾಂತ್ ಪಾದೆ