Advertisement

ಕೈಕೊಟ್ಟ ಇಂಟರ್ನೆಟ್: ಎಪಿಎಂಸಿಯಲ್ಲಿ ಪರದಾಟ

10:52 AM Jan 25, 2019 | |

ಬ್ಯಾಡಗಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನ ಇಂಟರ್‌ ನೆಟ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಪಟ್ಟಣದ ಎಪಿಎಂಸಿಯಲ್ಲಿ ಇ-ಟೆಂಡರ್‌ ವ್ಯವಸ್ಥೆ ಸ್ಥಗಿತಗೊಂಡು ರೈತರು ಮತ್ತು ವರ್ತಕರು ಪರಿದಾಡಿದ ಘಟನೆ ಗುರುವಾರ ನಡೆಯಿತು.

Advertisement

ಬಿಎಸ್‌ಎನ್‌ಎಲ್‌ ಸಂಪರ್ಕದ ಲೈನ್‌ ಪಟ್ಟಣದ ಕೆಲವೆಡೆ ತುಂಡಾಗಿದೆ. ಅದನ್ನು ಜೋಡಿಸುವಲ್ಲಿ ವಿಳಂಬವಾಗಿರುವುದೇ ಇಂಟರ್‌ ನೆಟ್ ಸಂಪರ್ಕ ಕಡಿತಗೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ. ಗುರುವಾರ ಎಂದಿನಂತೆ ಒಂದು ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದವು. ಒಂದು ವೇಳೆ ಇಂಟರನೆಟ್ ಸಂಪರ್ಕ ಇದ್ದಿದ್ದರೆ ಮಧ್ಯಾಹ್ನ 3:00ರ ಹೊತ್ತಿಗೆ ಎಲ್ಲರಿಗೂ ಇಂದಿನ ಮೆಣಸಿನಕಾಯಿ ದರದ ಮಾಹಿತಿ ಸಿಗುತ್ತಿತ್ತು. ಆದರೆ ರಾತ್ರಿ 9:00ಕ್ಕೆ ಇಂದಿನ ದರಗಳ ಮಾಹಿತಿ ಲಭ್ಯವಾಯಿತು.

ತಡಕಾಡಿದ ವ್ಯಾಪಾರಸ್ಥರು: ಇಂಟರ್‌ನೆಟ್ ಸಂಪರ್ಕ ಕೈಕೊಟ್ಟ ಸುದ್ದಿ ಕೊನೆಗಳಿಗೆಯಲ್ಲಿ ವ್ಯಾಪಾರಸ್ಥರಿಗೆ ತಿಳಿಯಿತು. ಹೀಗಾಗಿ ಅವರೆಲ್ಲರೂ ಕೆಲಕಾಲ ತಡಕಾಡುವಂತಾಯಿತು. ಗುರುವಾರ ಸುಮಾರು ಎರಡ ನೂರಕ್ಕೂ ಹೆಚ್ಚು ಖರೀದಾರರು ಮೆಣಸಿನಕಾಯಿ ಖರೀದಿಗೆ ಆಗಮಿಸಿದ್ದರು. ಟೆಂಡರ್‌ನಲ್ಲಾದ ಹೆಚ್ಚಿನ ದರ ನಿಗದಿ ಮಾಡಲು ರಾತ್ರಿಯಾದರೂ ಸಾಧ್ಯವಾಗಲಿಲ್ಲ. ಇದರಿಂದ ಪರ ಪ್ರಾಂತಗಳಿಗೆ ಇಂದಿನ ಮಾರುಕಟ್ಟೆ ದರಗಳು ರವಾನೆಯಾಗುವಲ್ಲಿ ವಿಳಂಬಕ್ಕೆ ಬಿಎಸ್‌ಎನ್‌ಎಲ್‌ ಮಾಡಿದ ಅವಾಂತರವೇ ಕಾರಣವಾಗಿದೆ.

ಪರದಾಡಿದ ರೈತರು: ಬೇಗನೆ ದರ ತಿಳಿದುಕೊಂಡು ತಮ್ಮ ಮೆಣಸಿನಕಾಯಿ ಚೀಲಗಳನ್ನು ಮಾರಾಟ ಮಾಡಿ ಹಣ ಪಡೆದು ದೂರದ ಊರುಗಳಿಗೆ ತೆರಳಬೇಕಾಗಿದ್ದ ರೈತರು ರಾತ್ರಿಯಾದರೂ ದರದ ಮಾಹಿತಿ ಸಿಗದೇ ಪರದಾಡಿದರು. ಏನಾಯಿತು ಎಂದು ತಿಳಿದುಕೊಳ್ಳುವ ತವಕದಿಂದ ರೈತರು ಎಪಿಎಂಸಿ ಕಚೇರಿ ಸುತ್ತ ಸುಳಿಯುತ್ತಿದ್ದ ದೃಶ್ಯಗಳು ಕಂಡು ಬಂದವು.

ಕಂಗಾಲಾದ ಎಪಿಎಂಸಿ ಸಿಬ್ಬಂದಿ: ಮೊದಲೇ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಎಪಿಎಂಸಿಗೆ ಇಂಟರ್‌ನೆಟ್ ಸೌಲಭ್ಯವಿಲ್ಲದೇ ಗುರುವಾರ ಕಂಗಾಲಾಗುವಂತಾಯಿತು.

Advertisement

ಸುಮಾರು 40ಕ್ಕೂ ಹೆಚ್ಚು ಸಿಬ್ಬಂದಿ ಇರುವ ಕಡೆಯಲ್ಲಿ ಕೇವಲ 12 ಸಿಬ್ಬಂದಿಗಳಿದ್ದರಿಂದ ನೀರು, ಊಟವಿಲ್ಲದೇ ಕಾರ್ಯನಿರ್ವಹಿಸಿದರು.

ಬಿಎಸ್‌ಎನ್‌ಎಲ್‌ ಇಂಟರ್‌ನೆಟ್ ಕೈಕೊಡುವುದು ಇದೇ ಮೊದಲೇನಲ್ಲ. ಇದು ಸಾಮಾನ್ಯ ಎನ್ನುವಂತಾಗಿದೆ. ತಂತ್ರಜ್ಞಾನ ಬೇಕಾದಷ್ಟೂ ಮುಂದುವರಿದಿದ್ದರೂ ಮಾತ್ರ ಸ್ಥಳೀಯ ಬಿಎಸ್‌ಎನ್‌ಎಲ್‌ಗೆ ಹಿಡಿದ ಗ್ರಹಣ ಮಾತ್ರ ಇನ್ನೂ ಬಿಟ್ಟಂತಿಲ್ಲ. ತುರ್ತು ಸಂದರ್ಭಗಳಲ್ಲಿಯೂ ಪರ್ಯಯ ವ್ಯವಸ್ಥೆ ಸಹ ಮಾಡಿಕೊಳ್ಳಲಾಗದ ಸ್ಥಿತಿಗೆ ಅದು ಬಂದು ತಲುಪಿದೆ. ಬಹಳಷ್ಟು ಸಂದರ್ಭಗಳಲ್ಲಿ ಎಪಿಎಂಸಿ ಸಿಬ್ಬಂದಿ ಸೇರಿದಂತೆ ಬ್ಯಾಂಕ್‌ ಹಾಗೂ ಮಾರುಕಟ್ಟೆಯಲ್ಲಿನ ವ್ಯಾಪಾರಸ್ಥರನ್ನು ಪೇಚಿಗೆ ಸಿಲುಕಿಸಿದ ಸಾಕಷ್ಟು ಉದಾಹರಣೆಗಳಿವೆ.

ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆ ಅಂತಾರಾಷ್ಟ್ರೀಯ ಖ್ಯಾತಿಗೆ ಬಿಎಸ್‌ಎನ್‌ಎಲ್‌ ನೀಡುವಂತಹ ಸೌಲಭ್ಯಗಳು ಅದರ ಭಾಗವಾಗಬೇಕು. ಆದರೆ ಮಾರುಕಟ್ಟೆ ಅಪಖ್ಯಾತಿಗೊಳಿಸಲು ಬಿಎಸ್‌ಎನ್‌ಎಲ್‌ ಪಣ ತೊಟ್ಟಂತಿದೆ. ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಬಿಎಸ್‌ಎನ್‌ಎಲ್‌ ಇಂದಿಗೂ ತನ್ನ ಸೌಲಭ್ಯ ನೀಡುವಲ್ಲಿ ಸುಧಾರಣೆಯಾಗದಿರುವುದು ಇಲ್ಲಿನ ವ್ಯಾಪಾರಸ್ಥರ ದುರ್ದೈವ. ಇದೇ ರೀತಿ ಮುಂದುವರಿದಲ್ಲಿ ಹೋರಾಟ ಅನಿವಾರ್ಯ.
ಸುರೇಶಗೌಡ ಪಾಟೀಲ,
ವರ್ತಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ

ಇಂದಿನ ವಿಳಂಬಕ್ಕೆ ರೈತರಲ್ಲಿ ಧ್ವನಿವರ್ಧಕಗಳ ಮೂಲಕ ವಿಷಾದ ವ್ಯಕ್ತಪಡಿಸಿದ್ದೇವೆ. ಖಾಸಗಿ ದೂರವಾಣಿ ಕಂಪನಿಗಳು ಎಪಿಎಂಸಿಗೆ ಇಂಟರ್‌ನೆಟ್ ಸೌಲಭ್ಯ ನೀಡಲು ಮುಂದೆ ಬರುತ್ತಿಲ್ಲ. ಅನಿವಾರ್ಯವಾಗಿ ಬಿಎಸ್‌ಎನ್‌ಎಲ್‌ ಮೊರೆ ಹೋಗಬೇಕಾಯಿತು. ವಿಳಂಭವಾಗಿರುವುದು ಸತ್ಯ, ರೈತರು ಮತ್ತು ವ್ಯಾಪಾರಸ್ಥರ ಸಹಕಾರದಿಂದ ಒತ್ತಡ ನಿಭಾಯಿಸುತ್ತೇವೆ.
 ನ್ಯಾಮಗೌಡ, ಎಪಿಎಂಸಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next