Advertisement

ಆಮದು ಅಡಕೆಗೆ ಸುಂಕ ಹೆಚ್ಚಿಸಿ, ಎಲೆಚುಕ್ಕಿ ರೋಗಕ್ಕೆ ಪರಿಹಾರ ನೀಡಿ: ಸಂಸದ ಬಿ.ವೈ.ರಾಘವೇಂದ್ರ

08:13 PM Dec 15, 2022 | Team Udayavani |

ಬೆಂಗಳೂರು: ದೇಶಕ್ಕೆ ಆಮದಾಗುತ್ತಿರುವ ಅಡಕೆಗೆ ಹೆಚ್ಚಿನ ಆಮದು ಸುಂಕ ವಿಧಿಸಬೇಕು ಹಾಗೂ ಅಡಕೆಗೆ ತಗಲುವ ರೋಗಗಳಿಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳಲು ಸಂಶೋಧನೆ ಹೆಚ್ಚಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

Advertisement

ದೇಶದ 10 ರಾಜ್ಯಗಳಲ್ಲಿ ಅಡಕೆ ಬೆಳೆಯಲಾಗುತ್ತಿದೆ. 16.50 ಸಾವಿರ ಮೆಟ್ರಿಕ್‌ ಟನ್‌ ಅಡಕೆ ಉತ್ಪಾದನೆಯಾಗುತ್ತಿದ್ದು, ಅದರಲ್ಲಿ ಶೇ. 69 ಕರ್ನಾಟಕದ ಪಾಲಾಗಿದೆ. ಅದರ ಒಟ್ಟು ಮೌಲ್ಯ 8,250 ಕೋಟಿ ರೂ.ಗಳಾಗಿವೆ. ಅಲ್ಲದೆ, ಅಡಕೆಯ ಉಪ ಉತ್ಪನ್ನಗಳ ಮೇಲಿನ ಜಿಎಸ್‌ಟಿ, ಸೆಸ್‌ಗಳಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 24,750 ಕೋಟಿ ರೂ.ಗಳಷ್ಟು ಆದಾಯ ಬರುತ್ತಿದೆ. ಆದರೆ, ಎಲೆಚುಕ್ಕಿ ರೋಗ ಸೇರಿ ಇನ್ನಿತರ ರೋಗಗಳಿಂದಾಗಿ ಅಡಕೆ ಇಳುವರಿ ಕುಸಿಯುತ್ತಿದೆ. ಪ್ರಸಕ್ತ ವರ್ಷದಲ್ಲಿ ಶೇ. 40ರಿಂದ 50 ಇಳುವರಿ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ಅದರ ಜತೆಗೆ ಅಡಕೆ ಬೆಲೆಯಲ್ಲೂ ಭಾರಿ ಪ್ರಮಾಣ ಕುಸಿತ ಕಂಡಿದೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ಒಂದು ಕ್ವಿಂಟಾಲ್‌ ಅಡಕೆಗೆ 58 ಸಾವಿರ ರೂ.ಗಳಿತ್ತು. ಅದೇ ಡಿಸೆಂಬರ್‌ ಎರಡನೇ ವಾರದಲ್ಲಿ 39 ಸಾವಿರ ರೂ.ಗೆ ಕುಸಿದಿದೆ. ಬೆಲೆ ಕುಸಿತ, ಎಲೆ ಚುಕ್ಕಿ ರೋಗದಿಂದ ಇಳುವರಿ ಮೇಲೆ ಉಂಟಾಗಿರುವ ಪರಿಣಾಮಗಳಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಆಮದು ಅಡಕೆ ಮೇಲೆ ಸುಂಕ ಹಾಗೂ ರೋಗಗಳಿಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಎಲೆ ಚುಕ್ಕಿ ರೋಗ ಕುರಿತು ಸಭೆ:

ಎಲೆ ಚುಕ್ಕಿ ರೋಗದಿಂದ ಅಡಕೆ ಬೆಳೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತಂತೆ ತೋಟಗಾರಿಕಾ ಸಚಿವ ಮುನಿರತ್ನ ಅವರ ನೇತೃತ್ವದಲ್ಲಿ ಗುರುವಾರ ಸಭೆ ನಡೆಸಲಾಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್‌. ಜೀವರಾಜ್‌, ಶಾಸಕ ರಾಜೇಗೌಡ ಇತರರಿದ್ದರು. ಈ ವೇಳೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಹಾಗೂ ಪರಿಹಾರ ಕಂಡುಕೊಳ್ಳಲು ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next