ಹುಬ್ಬಳ್ಳಿ: ”ಎಚ್.ಡಿ.ಕುಮಾರಸ್ವಾಮಿ ಪ್ರತಿಬಾರಿಯೂ ಭಾವನಾತ್ಮಕ ಮಾತು, ಕಣ್ಣೀರು ಹಾಕುವುದನ್ನು ನೋಡಿ ಜನರು ಬೇಸತ್ತಿದ್ದಾರೆ. ಇದಕ್ಕೆಲ್ಲ ಮತದಾರರು ಮಾರು ಹೋಗುವುದಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು.
ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಭಾಷಣ ವಿಷಯವಾಗಿ ಪ್ರತಿಕ್ರಿಯಿಸಿ ‘ಎಲ್ಲ ಸಂದರ್ಭದಲ್ಲೂ ಅಳು ನೋಡಿ ಜನರು ಮತ ಹಾಕುವುದಿಲ್ಲ. ಅವರಿಗೂ ನೋಡಿ ನೋಡಿ ಸಾಕಾಗಿದೆ. ಹೀಗಾಗಿ ಮತದಾರರ ಆಶೀರ್ವಾದ ನಮ್ಮ ಮೇಲಿದೆ’ ಎಂದರು.
ಉಪ ಚುನಾವಣೆಯ ಮೂರು ಕ್ಷೇತ್ರಗಳಲ್ಲಿ ನಾವು ಗೆಲ್ಲಲಿದ್ದು, ಸಮರ್ಥ ಅಭ್ಯರ್ಥಿಗಳನ್ನು ಪಕ್ಷದಿಂದ ಕಣಕ್ಕಿಳಿಸಿದ್ದೇವೆ. ಕಾಂಗ್ರೆಸ್ ಯಾವಾಗಲೂ ಒಳ ಒಪ್ಪಂದದ ರಾಜಕಾರಣ ಮಾಡುವುದಿಲ್ಲ. ಅದನ್ನು ಬಿಜೆಪಿನೇ ಮಾಡಿಕೊಂಡಿರಬಹುದು. ಅವರು ಸೋಲಲೆಂದೆ ಇಂತಹ ರಾಜಕಾರಣ ಮಾಡಿಕೊಳ್ಳುತ್ತಾರೆ. ಶಿಗ್ಗಾವಿಯಲ್ಲಿ ನಾವು ಗೆಲ್ಲುವ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ ಎಂದರು.
ಶಿಗ್ಗಾವಿಯಲ್ಲಿ ನಮಗೆ ಅಭ್ಯರ್ಥಿ ಎದುರಾಳಿಯಲ್ಲ, ಕಾಂಗ್ರೆಸ್ ಎಂಬ ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಕಳೆದ ಚುನಾವಣೆಯಲ್ಲಿ ನಾವು ಬಿಜೆಪಿಗೆ ತೀವ್ರ ಸ್ಪರ್ಧೆ ಒಡ್ಡಿದ್ದೇವು. ಸ್ಪರ್ಧೆಯೇ ಇಲ್ಲದಿದ್ದರೆ ಹೆಚ್ಚು ಮತಗಳು ಹೇಗೆ ಬಂದವು? ಬೊಮ್ಮಾಯಿ ಸ್ಪರ್ಧಿಸಿದ್ದ ಶಿಗ್ಗಾವಿ ಕ್ಷೇತ್ರದಲ್ಲಿಯೇ ಹೆಚ್ಚು ಮತಗಳು ಬಂದಿವೆ. ನಮಗೆ ಅಲ್ಲಿ ಬಿಜೆಪಿ ಎದುರಾಳಿಯೇ ಅಲ್ಲ ಎಂದು ಹೇಳಿದರು.
ಶಿಗ್ಗಾವಿ ವಿಧಾನಸಭಾ ಕ್ಚೇತ್ರದ ಟಿಕೆಟ್ ಅನ್ನು ಯಾಸಿನ್ ಪಠಾಣ ಮತ್ತು ಅಜ್ಜಂಪೀರ ಖಾದ್ರಿ ಇಬ್ಬರೂ ಕೇಳಿದ್ದರು. ಅವರಿಬ್ಬರೂ ಸಮರ್ಥ ಅಭ್ಯರ್ಥಿಗಳೇ. ಆದರೆ, ಕಳೆದ ಬಾರಿ ಪಠಾಣ ಅವರಿಗೆ ನೀಡಲಾಗಿತ್ತು, ಹೀಗಾಗಿ ಈಗಲೂ ಅವರಿಗೆ ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಿಎಂ ಅವರು, ಹತ್ಯೆಯಾದ ಅಂಜಲಿ ಅಂಬಿಗೇರ ಕುಟುಂಬದವರಿಗೆ 5ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಿದರು.