Advertisement

ರಾಜನೀತಿ: ಉಪ ಸಮರದಲ್ಲಿ ನಗ್ನ ಸತ್ಯಗಳ ಬಟಾಬಯಲು

12:21 AM Nov 02, 2020 | mahesh |

ಉಪ ಚುನಾವಣೆ ಪ್ರಚಾರದಲ್ಲಿ ಕೆಲವು ಮಾತುಗಳು “ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ’ ಗಾದೆ ಮಾತು ನೆನಪಿಸಿತು. ಬಿಜೆಪಿ ನಾಯಕರು ಮೈತ್ರಿ ಸರಕಾರ ಪತನದ ರಹಸ್ಯ ಬಹಿರಂಗಗೊಳಿಸಿ ಡಿ.ಕೆ. ಶಿವಕುಮಾರ್‌ ಮೇಲೆ ಮೀರ್‌ ಸಾಧಿಕ್‌ ಆರೋಪ ಹೊರಿಸಿದ್ದು, ಎಚ್‌. ಡಿ. ಕುಮಾರಸ್ವಾಮಿಯವರು ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್‌ನವರು ಕಾಟ ಕೊಟ್ಟರು, ನನ್ನನ್ನು ಕೆಟ್ಟದಾಗಿ ನಡೆಸಿಕೊಂಡು ಎಂದು ಪದೇ ಪದೇ ಹೇಳಿದ್ದು, ದೇವೇಗೌಡರು ನೇರವಾಗಿಯೇ ಸಿದ್ದರಾಮಯ್ಯ ಅವರೇ ಮೈತ್ರಿ ಸರಕಾರ ಪತನದ ರೂವಾರಿ ಎಂದಿದ್ದು, ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಪ್ರಸ್ತಾಪವಾಗಿದ್ದು ನೋಡಿದರೆ ಚುನಾವಣೆ ಫ‌ಲಿತಾಂಶ ಏನಾಗಲಿದೆ ಎಂಬುದರ ಬಹುತೇಕ ಅಂದಾಜು ಸಿಕ್ಕಿದೆ. ಯಾರು ಯಾರ ಕಾಲು ಎಳೆಯಲು, ಯಾವ ಮತಬ್ಯಾಂಕ್‌ಗೆ ಲಗ್ಗೆ ಹಾಕಲು ಈ ರೀತಿಯ ಹೇಳಿಕೆ ನೀಡಿದರು ಎಂಬುದಕ್ಕೂ ಫ‌ಲಿತಾಂಶದ ಸಾಕ್ಷಿಯಾಗಲಿದೆ.

Advertisement

ರಾಜ್ಯ ರಾಜಕೀಯ ಇತಿಹಾಸದಲ್ಲಿ ನಡೆದ ಜಿದ್ದಾಜಿದ್ದಿನ ಉಪ ಚುನಾವಣೆಗಳ ಸಾಲಿಗೆ ಶಿರಾ, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯೂ ಸೇರಿ ದಂತಾಗಿದೆ. ಏಕೆಂದರೆ, ಕೊರೊನಾ-ಪ್ರವಾಹ ಸಂಕಷ್ಟದ ನಡುವೆಯೇ ಎದುರಾಗಿರುವ ಈ ಉಪಚುನಾವಣೆ ಎರಡು ಕ್ಷೇತ್ರಗಳಿಗೆ ಸೀಮಿತವಾಗಿಲ್ಲ. ಪ್ರಚಾರ ಅಖಾಡದಲ್ಲಿ ರಾಷ್ಟ್ರ, ರಾಜ್ಯ ರಾಜಕಾರಣದ ವಿಚಾರಗಳು, ಕಣ್ಣೀರು “ಪ್ರಹಸನ’, ಜೆಡಿಎಸ್‌-ಮೈತ್ರಿ ಸರಕಾರ ಪತನದ ರಹಸ್ಯಗಳ ಬಹಿರಂಗ ಹೀಗೆ ನಾನಾ ವಿಚಾರಗಳು ಬಟಾಬಯಲಾಗಿವೆ.

ಇದರ ನಡುವೆ ಕೂಸು ಹುಟ್ಟುವ ಮುನ್ನ ಕುಲಾವಿ ಎಂಬಂತೆ ಕಾಂಗ್ರೆಸ್‌ನಲ್ಲಿ ಇದ್ದಕ್ಕಿದ್ದಂತೆ ತೂರಿಬಂದ ಮುಂದಿನ ಮುಖ್ಯಮಂತ್ರಿ ವಿಚಾರ ಒಂದಷ್ಟು ಚರ್ಚೆಗೂ ಗ್ರಾಸವಾಗಿ ರಾಜಕೀಯವಾಗಿ ಯಾವ ಸಂದೇಶ ರವಾನೆ ಯಾಗಬೇಕೋ ಆ ಸಂದೇಶವೂ ರವಾನೆಯಾಗಿದೆ. ಅದು ಎಷ್ಟರ ಮಟ್ಟಿಗೆ ಫ‌ಲ ನೀಡಲಿದೆ ಎಂಬುದು ಫ‌ಲಿತಾಂಶದ ಅನಂತರವಷ್ಟೇ ಗೊತ್ತಾಗಬೇಕಿದೆ.

ಸಂದರ್ಭ ಅಲ್ಲದಿದ್ದರೂ ಸಿದ್ದರಾಮಯ್ಯ ಮತ್ತೂಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಅವರ ಬೆಂಬಲಿಗರು, ಉಪ ಚುನಾವಣೆಯಲ್ಲಿ ಗೆದ್ದರೆ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಇವರ ಬೆಂಬಲಿಗರು ಯಾಕೆ ಪ್ರಸ್ತಾಪಿಸಿದರು ಎಂಬುದು ನಿಗೂಢ. ಆ ರೀತಿ ಹೇಳಿದರೆ ಎರಡೂ ಕ್ಷೇತ್ರಗಳಲ್ಲಿ ಒಕ್ಕಲಿಗ ಮತಗಳು ಒಗ್ಗೂಡಲಿವೆ ಎಂಬ ತಂತ್ರವೂ ಇರಬಹುದು. ಆದರೆ ಅದಕ್ಕೂ ಮುಂಚೆ ಸಿದ್ದರಾಮಯ್ಯ ನಾನು ಮತ್ತೆ ಮುಖ್ಯಮಂತ್ರಿಯಾದರೆ ಬಡವರಿಗೆ ತಲಾ 10 ಕೆಜಿ ಅಕ್ಕಿ ಕೊಡುವುದಾಗಿ ಬಾದಾಮಿಯಲ್ಲಿ ಹೇಳಿದರು. ಇದಾದ ಅನಂತರ ಶಿರಾದಲ್ಲಿ ಜಮೀರ್‌ ಅಹಮದ್‌ ಮತ್ತೂಂದು ಹೆಜ್ಜೆ ಮಂದೆ ಹೋಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗುವುದು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು. ಇದರ ಬೆನ್ನಲ್ಲೇ ರಾಜರಾಜೇಶ್ವರಿ ನಗರ ಪ್ರಚಾರ ದಲ್ಲಿ ಡಿ.ಕೆ. ಶಿವಕುಮಾರ್‌ ಸಿಎಂ ಆಗಲಿದ್ದಾರೆ ಎಂಬ ಮಾತು ಹೊರಬಂದಿದ್ದು. ಹಿರಿಯ ಎಚ್‌.ಕೆ. ಪಾಟೀಲರು ಇದಕ್ಕೆ ಸೂಕ್ಷ್ಮವಾಗಿಯೇ ಪ್ರತಿಕ್ರಿಯಿಸಿದರು. ಅದು ಹೈಕಮಾಂಡ್‌ನ‌ ವಾಯ್ಸ ಇದ್ದಂತೆಯೇ ಇತ್ತು.

ಉಪ ಚುನಾವಣ ಪ್ರಚಾರದಲ್ಲಿ ಅಚ್ಚರಿಗೆ ಕಾರಣವಾದ ಮತ್ತೂಂದು ತಂತ್ರಗಾರಿಕೆ ಎಂದರೆ ಎದುರಾಳಿ ಪಕ್ಷದ ಸಾಮರ್ಥ್ಯ ಹೊಗಳಿಕೆ. ಕಾಂಗ್ರೆಸ್‌ ಪಕ್ಷವು ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಮುಗಿಬಿದ್ದರೆ ಬಿಜೆಪಿ ಜಾಣ್ಮೆ ಪ್ರದರ್ಶಿಸಿ ಶಿರಾದಲ್ಲಿ ಕಾಂಗ್ರೆಸ್‌-ಜೆಡಿಎಸ್‌, ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್‌ ವಿರುದ್ಧ ಮಾತ್ರ ವಾಗ್ಧಾಳಿ ನಡೆಸಿದ್ದು. ಒಂದು ಹಂತದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಇಲ್ಲಿ ನನಗೇ ಹಾಗೂ ಜೆಡಿಎಸ್‌ಗೆ ಮಾತ್ರ ಪೈಪೋಟಿ, ಎಚ್‌. ಡಿ. ದೇವೇಗೌಡರು, ಎಚ್‌.ಡಿ. ಕುಮಾರಸ್ವಾಮಿಯವರಿಗೆ ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ವರ್ಚಸ್ಸು ಇದೆ. ಅವರು ದೊಡ್ಡ ವರು ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂಬ “ಅಸ್ತ್ರ’ ಬಿಟ್ಟರು. ಯುದ್ಧ ಭೂಮಿಯಲ್ಲಿ ಇಂಥದ್ದೊಂದು ಮಾತು ಸುಮ್ಮನೆ ಪ್ರಯೋಗವಾಗುವುದಿಲ್ಲ. ಇದರ ಹಿಂದೆ ಲಾಭ- ನಷ್ಟದ ಲೆಕ್ಕಾಚಾರ ಇರುತ್ತದೆ. ಇಲ್ಲಿ ಜೆಡಿಎಸ್‌ ಮತ ಪಡೆದಷ್ಟೂ ಯಾರಿಗೆ ಲಾಭ ಎಂಬುದು ರಹಸ್ಯ ವೇನಲ್ಲ.

Advertisement

ಇನ್ನು, ಶಿರಾದಲ್ಲಿ ಅನುಕಂಪದ ಅಲೆ ಎಲ್ಲಿ ಕೊಚ್ಚಿ ಹೋಯಿತೋ ಎಂಬ ವಾತಾವರಣ ಸೃಷ್ಟಿಯಾಗಿದೆ. ಯಡಿಯೂರಪ್ಪ ಅವರ ಪುತ್ರನ “ರಂಗಪ್ರವೇಶ’ದ ಅನಂತರ ಇಡೀ ಕ್ಷೇತ್ರದ ಚಿತ್ರಣ ಬದಲಾಗಿದ್ದು ಸುಳ್ಳಲ್ಲ. ಪ್ರಾರಂಭದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಹೋರಾಟದಂತಿದ್ದ ಕಣ ಅಂತಿಮವಾಗಿ ತ್ರಿಕೋನ ಸ್ಪರ್ಧೆಯ ಸ್ವರೂಪ ಪಡೆದಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಕ್ಷೇತ್ರ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ನಮ್ಮನ್ನು ಬಿಟ್ಟು ಯಾರು ಎಂಬಂತಿದ್ದ ಕಾಂಗ್ರೆಸ್‌ಗೂ ಅಲ್ಲಿನ ಬೆಳವಣಿಗೆ ಶಾಕ್‌. ಕೆ.ಆರ್‌. ಪೇಟೆ ಉಪ ಚುನಾವಣೆಯಲ್ಲಿ ಜೆಡಿಎಸ್‌ ಮಣಿಸಲು ಬಿಜೆಪಿಗೆ ನೀಡಿದ ಸಹಕಾರದ ಎಫೆಕ್ಟ್ ಎಂತಹುದು ಎಂಬುದು ಆ ಪಕ್ಷದ ನಾಯಕರಿಗೆ ಈಗ ಅರಿವಾಗಿದೆ. ಬಿಜೆಪಿ ಅಭ್ಯರ್ಥಿ, ವಿಜಯೇಂದ್ರ ಕಾರ್ಯ ತಂತ್ರ ಜೆಡಿಎಸ್‌ ಮತ ಬ್ಯಾಂಕ್‌ಗೆ ಲಗ್ಗೆ ಇಡಬಹುದು ಎಂಬ ಲೆಕ್ಕಾಚಾರ ಉಲ್ಟಾಆಗಿ ನಿಂತ ನೆಲ ಅಲುಗಾಡುವಂತಾಗಿದೆ.

ಸಿದ್ದರಾಮಯ್ಯ ಅವರಂತೂ ಶಿರಾ ಕ್ಷೇತ್ರವನ್ನು ಪ್ರತಿಷ್ಠೆ ಯಾಗಿಯೇ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‌ ವಲಯದಲ್ಲಿ ಶಿರಾ ಜವಾಬ್ದಾರಿ ಸಿದ್ದರಾಮಯ್ಯ ಅವರದು, ರಾಜ ರಾಜೇಶ್ವರಿ ನಗರ ಜವಾಬ್ದಾರಿ ಡಿ.ಕೆ. ಶಿವಕುಮಾರ್‌ ಅವರದು ಎಂಬಂತೆ ಬಿಂಬಿತವಾಗಿದೆ. ಹೀಗಾಗಿ, ಇಬ್ಬರೂ ಒಂದೊಂದು ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಆದರೂ ಪಕ್ಷದಲ್ಲೇ ಒಳ ಏಟಿನ ಅಪಾಯವೂ ಇರುವುದರಿಂದ ಸಾಮೂಹಿಕ ನಾಯಕತ್ವದ ಮಂತ್ರವೂ ಬಿಟ್ಟಿಲ್ಲ.

ಬದಲಾವಣೆಗೆ ನಾಂದಿ: ಎರಡು ಕ್ಷೇತ್ರಗಳ ಉಪ ಚುನಾವಣೆ ಫ‌ಲಿತಾಂಶ ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬಿಜೆಪಿ ಸರಕಾರಕ್ಕೆ ಸಂಖ್ಯಾಬಲದ ಕೊರತೆಯೂ ಇಲ್ಲದ ಕಾರಣ ಸರಕಾರಕ್ಕೆ ಬಾಧಕವೂ ಇಲ್ಲ. ಕಾಂಗ್ರೆಸ್‌ ಅಥವಾ ಜೆಡಿಎಸ್‌ಗೂ ಫ‌ಲಿತಾಂಶದಿಂದ ಏನೂ ಆಗುವುದಿಲ್ಲ. ಆದರೆ, ರಾಜಕೀಯವಾಗಿ ಒಂದಷ್ಟು ಬದಲಾವಣೆಗಳಿಗೆ ಫ‌ಲಿ ತಾಂಶ ನಾಂದಿಯಾಗಬಹುದು.
ಮೊದಲನೆಯದಾಗಿ ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾದ ಅನಂತರ ಎದುರಾದ ಚುನಾವಣೆ ಅದರಲ್ಲೂ ತಮ್ಮ ಸಹೋದರ ಡಿ.ಕೆ. ಸುರೇಶ್‌ ಪ್ರತಿನಿಧಿಸುವ ಬೆಂ.ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಜರಾಜೇಶ್ವರಿ ನಗರದಲ್ಲಿ ತಮ್ಮ ಗರಡಿಯಲ್ಲಿ ಪಳಗಿದವರು ಆಪರೇಷನ್‌ ಕಮಲ ಕಾರ್ಯಾಚರಣೆಯಡಿ ಬಿಜೆಪಿಗೆ ಹೋಗಿದ್ದರಿಂದ ಉಪ ಚುನಾವಣೆ ಎದುರಾಗಿದೆ. ಇಲ್ಲಿ ಕ್ಷೇತ್ರ ಉಳಿಸಿ ಕೊಳ್ಳುವುದು ಪಕ್ಷದ ಅಧ್ಯಕ್ಷರಾಗಿ ಹಾಗೂ ವೈಯಕ್ತಿಕವಾಗಿ ಡಿ.ಕೆ. ಶಿವಕುಮಾರ್‌ಗೆ ಅತಿ ಮುಖ್ಯ. ಹೀಗಾಗಿಯೇ ಅವರು ಸಮುದಾಯದ ಕಾರ್ಡ್‌ ಬಿಟ್ಟಿದ್ದಾರೆ.
ಹಿಂದೊಮ್ಮೆ ಕಾಂಗ್ರೆಸ್‌ನಿಂದ ಗೆದ್ದಿದ್ದ ವಿ. ಸೋಮಣ್ಣ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಗೋವಿಂದ ರಾಜನಗರ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. ಆಗ ಇದೇ ರೀತಿಯ ಸಮುದಾಯದ ಕಾರ್ಡ್‌ನಿಂದ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಆಗ ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರ ಪುತ್ರ ಪ್ರಿಯಾಕೃಷ್ಣ ಚೊಚ್ಚಲ ವಿಧಾನಸಭೆ ಪ್ರವೇಶಿಸಿದ್ದರು. ಅದೇ ರೀತಿಯ ಫ‌ಲಿತಾಂಶವನ್ನು ರಾಜ ರಾಜೇಶ್ವರಿ ನಗರದಲ್ಲಿ ಡಿ.ಕೆ.ಶಿವಕುಮಾರ್‌ ನಿರೀಕ್ಷಿಸುತ್ತಿದ್ದಾರೆ. ಜ್ಯೋತಿಷಿಗಳ ಮೊರೆ ಹೋಗಿ ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಸವಾಲು ಒಡ್ಡಿ ಪ್ರತಿಷ್ಠೆ ಪಣಕ್ಕಿಟ್ಟಿದ್ದಾರೆ. ಇಲ್ಲಿ ಗೆದ್ದು ಸಮುದಾಯಕ್ಕೆ ಸಂದೇಶ ರವಾನಿಸುವ ಗುರಿ ಅವರದು.

ಬಿಜೆಪಿಗೆ ಒಂದು ಸ್ಥಾನಕ್ಕಿಂತ ಮುನಿರತ್ನ ಗೆಲ್ಲುವುದು ಮುಖ್ಯ. ಮೈತ್ರಿ ಸರಕಾರ ಪತನ ಹಾಗೂ ಬಿಜೆಪಿ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರೆಲ್ಲಾ ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದಾರೆ. ಮುನಿರತ್ನ ಅವರ ಕೋಟಾ ಖಾಲಿ ಇದೆ. ಹೀಗಾಗಿ, ಇವರು ಗೆದ್ದರೆ ಸಚಿವ ಸ್ಥಾನ ನೀಡಬೇಕು. ಬೆಂಗಳೂರಲ್ಲಿ ಈಗಾಗಲೇ 7 ಜನ ಸಚಿವರಾಗಿದ್ದು ಮುನಿರತ್ನಗೆ ಅವಕಾಶ ಕೊಡಬೇಕಾದರೆ ಒಬ್ಬರ ತಲೆದಂಡ ಆಗಬೇಕಾಗುತ್ತದೆ ಎಂಬ ಮಾತು ಇವೆ.

ಜೆಡಿಎಸ್‌ ವಿಚಾರಕ್ಕೆ ಬಂದರೆ ಶಿರಾ ಉಳಿಸಿಕೊಳ್ಳುವುದು ಪ್ರತಿಷ್ಠೆ. ರಾಜರಾಜೇಶ್ವರಿ ನಗರ ಗೆದ್ದರೆ ಬೋನಸ್‌. ಆದರೆ, ಅಲ್ಲಿ ಮತಗಳಿಕೆ ಎಷ್ಟು ಎಂಬುದರ ಮೇಲೆ ಆ ಪಕ್ಷದ ಶಕ್ತಿ ನಿರ್ಧಾರವಾಗುತ್ತದೆ. ದೇವೇಗೌಡರು, ಕುಮಾರಸ್ವಾಮಿ, ಎಚ್‌.ಡಿ. ರೇವಣ್ಣ, ನಿಖೀಲ್‌ ಕುಮಾರಸ್ವಾಮಿ, ಪ್ರಜ್ವಲ್‌ ರೇವಣ್ಣ ಹೀಗೆ ಮೂರು ತಲೆಮಾರು ಎರಡೂ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಇಳಿದಿದೆ. ಅವರಿಗೂ ಪಕ್ಷದ ಅಸ್ತಿತ್ವದ ಪ್ರಶ್ನೆ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ ಆದರೆ ರಾಜ್ಯ ಸರಕಾರದ ವಿರುದ್ಧದ ಜನಾಕ್ರೋಶ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗಬಹುದು. ಬಿಜೆಪಿ ಮೆಲುಗೈ ಆದರೆ ಸರಕಾರದ ಕೆಲಸಕ್ಕೆ ಜನರ ಮುದ್ರೆ ಎಂದು ಬೀಗಬಹುದು. ಜೆಡಿಎಸ್‌ ಗೆದ್ದರೆ ಅನುಕಂಪದ ಅಲೆ ಕೈ ಹಿಡಿಯಿತು ಎಂದು ಹೇಳಬಹುದು. ಆದರೆ ಉಪ ಚುನಾವಣೆ ಫ‌ಲಿತಾಂಶದ ಅನಂತರ ರಾಜ್ಯ ರಾಜಕಾರಣದಲ್ಲೂ ಒಂದಷ್ಟು ಹೊಸ ಬದಲಾವಣೆ ಆಗಬಹುದು. ಮುಂದಿನ ಎರಡೂವರೆ ವರ್ಷದ ಅನಂತರ ಎದುರಾಗುವ ವಿಧಾನಸಭೆ ಚುನಾವಣೆಗೆ ಇದು ದಿಕ್ಸೂಚಿಯಲ್ಲದಿದ್ದರೂ ಪಕ್ಷಕ್ಕಿಂತ ನಾಯಕರ “ಪ್ರತಿಷ್ಠೆ’ , “ಸಾಮರ್ಥ್ಯ’, “ಸಮುದಾಯ’ ಬೆಂಬಲ ಸಾಬೀತಾಗಲಿದೆ. ಇದರ ಮೇಲೆ ಮುಂದಿನ ರಾಜಕೀಯ ಲೆಕ್ಕಾಚಾರಗಳು ಪ್ರಾರಂಭವಾಗಲಿವೆ.

 

Advertisement

Udayavani is now on Telegram. Click here to join our channel and stay updated with the latest news.

Next