ಬೆಂಗಳೂರು: ರಾಜ್ಯದಲ್ಲಿ ಸನಿಹದಲ್ಲೇ ಎದುರಾಗಲಿರುವ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ರಾಜಕೀಯ ಚಟುವಟಿಕೆ ಗರಿಗೆದರುತ್ತಿರುವ ಬೆನ್ನಲ್ಲೇ ಚುನಾವಣ ಆಯೋಗ ಸಹ ತನ್ನ ಸಿದ್ಧತೆ ಯನ್ನು ಆರಂಭಿಸಿದೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಶಾಸಕರಾಗಿದ್ದ ಎಚ್.ಡಿ. ಕುಮಾರಸ್ವಾಮಿ, ಶಿಗ್ಗಾಂವಿ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಸಂಡೂರು ಶಾಸಕರಾಗಿದ್ದ ಇ. ತುಕರಾಮ್ ಅವರು ಸಂಸದರಾಗಿ ಆಯ್ಕೆಯಾಗಿರುವ ಕಾರಣ ಈ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. 2023ರ ವಿಧಾನಸಭೆ ಚುನಾವಣೆ ನಡೆದ ಒಂದೂವರೆ ವರ್ಷದ ಆಸುಪಾಸಿನಲ್ಲಿ ಈ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಿದೆ.
ತೆರವಾದ 6 ತಿಂಗಳಲ್ಲಿ ಚುನಾವಣೆ ನಡೆಯಬೇಕಾಗಿದ್ದು, ಈಗಾಗಲೇ ಎರಡೂವರೆ ತಿಂಗಳು ಕಳೆದಿದೆ, ನವೆಂಬರ್ ಅಂತ್ಯದೊಳಗೆ ಚುನಾವಣೆ ಮುಗಿಸಬೇಕಿದೆ. ಈ ನಡುವೆ ಕೇಂದ್ರ ಚುನಾವಣ ಆಯೋಗ ಯಾವಾಗಬೇಕಾದರೂ ಉಪ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಸಿದ್ಧತೆಗಳನ್ನು ಆರಂಭಿಸಿದೆ.
ಮುಂದಿನ 3 ತಿಂಗಳ ಅವಧಿಯಲ್ಲಿ ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆಯಲಿರುವ ಸಾಮಾಜಿಕ, ಧಾರ್ಮಿಕ ಆಚರಣೆಗಳು, ಶೈಕ್ಷಣಿಕ ಚಟುವಟಿಕೆ ಬಗ್ಗೆಯೂ ಮಾಹಿತಿಗಳನ್ನು ತರಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಲೋಕಸಭೆ ಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ 3 ಕ್ಷೇತ್ರಗಳ ಮತದಾರರ ಪಟ್ಟಿ ಸಿದ್ಧವಾಗಿಯೇ ಇದೆ. ಇವಿಎಂ-ವಿವಿಪ್ಯಾಟ್‌ಗಳ ಮೊದಲ ಹಂತದ ತಪಾಸಣೆ (ಎಫ್ಎಲ್‌ಸಿ) ಸಹ ನಡೆದಿದ್ದು, ಅಗತ್ಯವಿರುವ ಮತಯಂತ್ರಗಳು ಲಭ್ಯ ಇವೆ. ಮತಗಟ್ಟೆಗಳನ್ನು ಗುರುತಿಸಲಾಗಿದೆ. ಚುನಾವಣ ಸಿಬಂದಿ ಸಹ ಲಭ್ಯವಿದ್ದು, ಅಗತ್ಯ ತರಬೇತಿಗಳನ್ನು ಕೊಡಬೇಕಾಗಿದೆ. ಇದರ ಜತೆಗೆ ಚುನಾವಣಾ ಘೋಷಣೆ ಆದ ಬಳಿಕ ಮಾಡಿಕೊಳ್ಳಬೇಕಾದ ಕೆಲವು ಸಿದ್ಧತೆಗಳ ಬಗ್ಗೆಯೂ ಯೋಜನೆ ರೂಪಿಸಿಕೊಳ್ಳಲಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಜತೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಅಗತ್ಯ ಪತ್ರ ವ್ಯವಹಾರಗಳನ್ನು ನಡೆಸಿದೆ ಎಂದು ಹೇಳಲಾಗಿದೆ.
ಒಟ್ಟು 4 ಉಪ ಚುನಾವಣೆ
ಈ 3 ಉಪ ಚುನಾವಣೆಗಳು ನಡೆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ 4 ಉಪ ಚುನಾವಣೆ ನಡೆದಂತಾಗುತ್ತದೆ. ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದ ಆ ಕ್ಷೇತ್ರಕ್ಕೆ ಲೋಕಸಭೆ ಚುನಾವಣೆ ವೇಳೆ ಉಪ ಚುನಾವಣೆ ನಡೆದಿದ್ದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರ ಪುತ್ರ ಜಯ ಸಾಧಿಸಿದ್ದರು.
ಕೇಂದ್ರ ಚುನಾವಣ ಆಯೋಗ ಯಾವಾಗಬೇಕಾದರೂ ಉಪ ಚುನಾವಣೆಗೆ ದಿನಾಂಕ ಘೋಷಣೆ ಮಾಡಬಹುದು. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ನಡೆಯಬೇಕಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾವಂತೂ ಸಿದ್ಧವಾಗಿದ್ದೇವೆ.
– ಮನೋಜ್‌ಕುಮಾರ್ ಮೀನಾ,
ರಾಜ್ಯ ಮುಖ್ಯ ಚುನಾವಣಾಧಿಕಾರಿ.