ನವದೆಹಲಿ: ನೀತಿ ಆಯೋಗದ ಸಿಇಒ ಸ್ಥಾನಕ್ಕೆ ಬಿ.ವಿ.ಆರ್.ಸುಬ್ರಹ್ಮಣ್ಯಂ ಅವರನ್ನು ನೇಮಿಸಲಾಗಿದೆ. ಈ ಬಗ್ಗೆ ನೇಮಕಕ್ಕಾಗಿ ಇರುವ ಕೇಂದ್ರ ಸಂಪುಟ ಸಮಿತಿ ಸೋಮವಾರ ತೀರ್ಮಾನ ಕೈಗೊಂಡಿದೆ.
ಸದ್ಯ ಸಿಇಒ ಆಗಿರುವ ಪರಮೇಶ್ವರನ್ ಆಯ್ಯರ್ ಅವರು ಎರಡು ವರ್ಷಗಳ ಅವಧಿಗೆ ವಿಶ್ವಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಗೆ ನೇಮಕಗೊಂಡಿದ್ದಾರೆ.
1987ನೇ ಸಾಲಿನ ಛತ್ತೀಸ್‌ಗಡ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಬಿ.ವಿ.ಆರ್.ಸುಬ್ರಹ್ಮಣ್ಯಂ ಆಂತರಿಕ ಭದ್ರತೆಯ ವಿಚಾರದಲ್ಲಿ ಪರಿಣತರು.
ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿಯೂ ಆಗಿದ್ದರು. ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ 2004ರಿಂದ 2008ರ ವರೆಗೆ ಅವರಿಗೆ ಆಪ್ತ ಕಾರ್ಯದರ್ಶಿಯಾಗಿದ್ದರು. ವಿಶ್ವಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ ಬಳಿಕ 2012ರಲ್ಲಿ ಮತ್ತೆ ಪ್ರಧಾನಿ ಕಚೇರಿಗೆ ಸೇರ್ಪಡೆಯಾಗಿದ್ದರು.