Advertisement
ವಧುದಕ್ಷಿಣೆ ಎಂಬ ಆಮಿಷಪಾಶ್ಚಾತ್ಯ ದೇಶದವರು ನಮಗಿಂತ ಆಧುನಿಕರು, ಮುಂದುವರಿದಿರುವವರು ಎಂದೆಲ್ಲಾ ತಿಳಿಯುತ್ತೇವೆ. ಆದರೆ, ಅಂಥ ಐರೋಪ್ಯ ರಾಷ್ಟ್ರಗಳಲ್ಲೊಂದಾಗಿರುವ ಬಲ್ಗೇರಿಯಾದಲ್ಲೇ ಈ ವಧುಗಳ ಮಾರುಕಟ್ಟೆ ಇರೋದು ಎನ್ನುವ ಸಂಗತಿ ಹಲವರಿಗೆ ಅಚ್ಚರಿಯಾಗಬಹುದು. ಸುಮಾರು 18,000 ಮಂದಿಯಿರುವ ಆಥೋìಡಾಕ್ಸ್ ಧರ್ಮಕ್ಕೆ ಸೇರಿದ ಉಪ ಪಂಗಡ ‘ಕಲೈಡಿ’ ವಧುಗಳನ್ನು ತರಕಾರಿಯಂತೆ ಮಾರುಕಟ್ಟೆಯಲ್ಲಿ ಮಾರುವ ಪದ್ಧತಿ ಚಾಲ್ತಿಯಲ್ಲಿರುವುದು ಇದೇ ಸಮುದಾಯಲ್ಲಿ! ಆಧುನಿಕತೆ, ಜಾಗತೀಕರಣ ಇವೆಲ್ಲದರ ಪ್ರಭಾವದ ನಡುವೆಯೂ “ಕಲೈಡಿ’ ಸಮುದಾಯದವರು ತಮ್ಮ ಪರಂಪರೆಯನ್ನು ರೀತಿ ರಿವಾಜುಗಳನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ. ಈಗೀಗ ಸಮುದಾಯದ ಕೆಲವು ಹುಡುಗಿಯರು ಪದ್ಧತಿಯ ವಿರುದ್ಧ ದನಿಯೆತ್ತುತ್ತಿದ್ದರಾದರೂ ಮನೆಯವರ ಮತ್ತು ಸಮಾಜದ ವಿರೋಧಕ್ಕೆ ಹೆದರಿ ಕಮಕ್ ಕಿಮಕ್ ಎನ್ನದೆ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನು ಮಾರುಕಟ್ಟೆ ಎಂದೇಕೆ ಕರೆಯುತ್ತಾರೆ ಎಂದರೆ, ಇಲ್ಲಿ ಗಂಡು ಹೆಣ್ಣಿನ ಮನೆಯವರು ಡೌರಿ ತರಬೇಕು. ಹೀಗಾಗಿ ತಮ್ಮ ಮಗಳು ಅತಿ ಹೆಚ್ಚು ಡೌರಿ ತೆರಲು ಸಿದ್ಧರಿರುವ ಶ್ರೀಮಂತ ಮನೆತನದ ಸೊಸೆಯಾಗಲಿ ಎನ್ನುವುದು ಇಲ್ಲಿನ ಎಲ್ಲಾ ತಾಯಂದಿರ ಬಯಕೆ.
ಮಾರುಕಟ್ಟೆಯಲ್ಲಿ ಹೇಗೆ ಗುಣಮಟ್ಟದ ಆಧಾರದ ಮೇಲೆ ವಸ್ತುಗಳಿಗೆ ದರ ನಿಗದಿ ಪಡಿಸುತ್ತಾರೋ, ಅದೇ ರೀತಿ ಇಲ್ಲಿ ಹೆಣ್ಮಕ್ಕಳನ್ನು ಅಳೆಯಲು ‘ತೆಳ್ಳಗೆ ಬೆಳ್ಳಗೆ’ಎನ್ನುವ ಅನೇಕ ಮಾನದಂಡಗಳಿವೆ. ಸಮುದಾಯದ ಬಹುತೇಕ ಹೆಣ್ಮಕ್ಕಳು ಶಾಲೆ ಮೆಟ್ಟಿಲು ಹತ್ತಿರುವುದೇ ಅಪರೂಪವಾಗಿರುವುದರಿಂದ ಅವರ ವಿದ್ಯಾಭ್ಯಾಸದ ಕುರಿತು ಹೆಚ್ಚಿನ ನಿರೀಕ್ಷೆಗಳೇನೂ ಇರುವುದಿಲ್ಲ. ಹೀಗಾಗಿ ಮನೆಕೆಲಸ ಮಾಡಲು ಬಂದರಷ್ಟೆ ಸಾಕು ಎನ್ನುವ ಭಾವನೆ ಇರುತ್ತದೆ. ಇನ್ನೊಂದು ಮುಖ್ಯ ಮಾನದಂಡವಿದೆ. ಅದು ‘ಕನ್ಯತ್ವ’. ಹುಡುಗಿ ಕನ್ಯೆಯಾಗಿದ್ದರೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ನಿಗದಿಯಾಗುತ್ತೆ. ನೀನು ಒಂಟಿಯಲ್ಲ ಮಗಳೇ…
ಜೀವನದಲ್ಲಿ ಆ ಹುಡುಗಿಯರು ಏನೇನು ಕನಸು ಕಂಡಿರುತ್ತಾರೋ? ತಮ್ಮನ್ನು ಮದುವೆಯಾಗುವವನ ಕುರಿತು ಯಾವ್ಯಾವ ಆಸೆಗಳನ್ನು ಇಟ್ಟುಕೊಂಡಿರುತ್ತಾರೋ? ತಮ್ಮ ಇಷ್ಟಾನಿಷ್ಟಗಳನ್ನು ಒತ್ತಟ್ಟಿಗಿಟ್ಟು ಮುಖದ ಮೇಲೆ ನಗು ತಂದುಕೊಂಡು ಪುರುಷರ ಮುಂದೆ ನಿಲ್ಲುವುದೆಂದರೆ ಸುಮ್ಮನೆ ಅಲ್ಲ, ಮಾರುಕಟ್ಟೆಗೆ ಕಾಲಿಡುವ ಬಹುತೇಕ ಹೆಣ್ಣುಮಕ್ಕಳು ತಮ್ಮನ್ನು ಎಂಥವನು ಕೊಂಡುಕೊಳ್ಳುವನೋ ಎಂಬ ಭಯದಿಂದಲೇ ತತ್ತರಿಸಿ ಹೋಗಿರುತ್ತಾರೆ. ಭಾವಿ ಗಂಡ ಮತ್ತವನ ಮನೆಯವರ ಮುಂದೆ ಹುಡುಗಿ ಎಲ್ಲಿ ತಿರಸ್ಕೃತಳಾಗುತ್ತಾಳ್ಳೋ ಎಂಬ ಆತಂಕದಿಂದ ಹುಡುಗಿಯ ತಾಯಿಯೂ ಮಗಳ ಹಿಂದೆ ನಿಂತಿರುತ್ತಾಳೆ. ಹುಡುಗಿಗೆ ದುಃಖ ಒತ್ತರಿಸಿ ಬಂದಾಗ, ಕಣ್ಣೀರು ತುಳುಕಿದಾಗ ‘ನೀನೊಬ್ಬಳೇ ಅಲ್ಲ ಕಂದಾ. ಹಿಂದೊಮ್ಮೆ ನಾನೂ ಇಲ್ಲಿ ನಿಂತವಳೇ. ಎಲ್ಲಾ ಒಳ್ಳೆಯದಾಗುತ್ತೆ ಸಹಿಸಿಕೋ’ ಎಂದು ತಾಯಿ ಮಗಳಿಗೆ ಧೈರ್ಯ ಹೇಳುತ್ತಾಳೆ.