Advertisement

ಬಿತ್ತನೆ ಬೀಜ ಖರೀದಿ ಸಮಯ ವಿಸ್ತರಣೆಗೆ ಕ್ರಮ

06:53 PM May 25, 2021 | Team Udayavani |

ಗಜೇಂದ್ರಗಡ: ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಖರೀದಿಸಲು ರೈತರಿಗೆ ಬೆಳಿಗ್ಗೆ 10 ಗಂಟೆಗಿಂತ ಹೆಚ್ಚಿನ ಸಮಯ ವಿಸ್ತರಣೆ ಮಾಡುವ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಕಳಕಪ್ಪ ಬಂಡಿ ಹೇಳಿದರು.

Advertisement

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು. ಸರ್ಕಾರ ಕೋವಿಡ್‌ ಎರಡನೇ ಅಲೆ ನಿಯಂತ್ರಣ ಮಾಡಲು ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಸಮಯ ನಿಗದಿಗೊಳಿಸಿದೆ. ಆದರೆ, ಗ್ರಾಮೀಣ ಭಾಗದಿಂದ ಆಗಮಿಸುವ ಜನರಿಗೆ ಈ ಕಡಿಮೆ ಅವಧಿ ಯಲ್ಲಿ ಬೀಜ ಸೇರಿದಂತೆ ಕೃಷಿ ಸಲಕರಣೆ ಖರೀದಿ ಮಾಡಲಾಗುವುದಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಜಿಲ್ಲಾಧಿ ಕಾರಿಗಳೊಂದಿಗೆ ಚರ್ಚಿಸಿ, ಮುಂಗಾರು ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.

ರೈತರು ಮುಂಗಾರಿನ ಮಳೆ ಉತ್ತಮವಾಗಿ ಸುರಿಯುವ ಆಶಾಭಾವನೆ ಹೊಂದಿದ್ದಾರೆ. ಹೀಗಾಗಿ, ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ನೂರಾರು ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿ ಇಲಾಖೆ ಬೀಜ ವಿತರಣಾ ಕೇಂದ್ರದಲ್ಲಿ ಬೀಜಗಳನ್ನು ಪಡೆದುಕೊಳ್ಳಬೇಕಾಗಿದೆ. ಗಜೇಂದ್ರಗಡ ಮತ್ತು ರೋಣ ತಾಲೂಕಿನಲ್ಲಿ 5 ಬೀಜ ವಿತರಣಾ ಕೇಂದ್ರಗಳಲ್ಲಿ ರಿಯಾಯತಿ ದರದಲ್ಲಿ ಬೀಜ ವಿತರಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ತೀವ್ರ ಸಂಕಷ್ಟದಲ್ಲಿರುವ ರೈತರ ಬೆಳೆಗಳು ಹೆಚ್ಚೆಚ್ಚು ಇಳುವರಿ ಬರುವಂತಾಗಲು ಗುಣಮಟ್ಟದ ಬೀಜ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಅಧಿ ಕಾರಿಗಳಿಗೆ ಸೂಚಿಸಿದರು.

ಕೃಷಿ ಅಧಿಕಾರಿ ಸಾವಿತ್ರಿ ಶಿವನಗೌಡರ ಮಾತನಾಡಿ, ಗಜೇಂದ್ರಗಡದ ರೈತ ಸಂಪರ್ಕ ಕೇಂದ್ರದಲ್ಲಿ ಸದ್ಯ 50 ಕ್ವಿಂಟಲ್‌ ಹೆಸರು, 6 ಕ್ವಿಂಟಲ್‌ ಹೈಬ್ರಿàಡ್‌ ಜೋಳ, 28 ಕ್ವಿಂಟಲ್‌ ತೊಗರಿ ಬೀಜಗಳು ಬಂದಿದ್ದು, ಶೀಘ್ರವೇ ಇನ್ನುಳಿದ ಬೆಳೆಯ ಬೀಜಗಳು ಬರಲಿವೆ ಎಂದರು. ಈ ವೇಳೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ರವೀಂದ್ರ ಪಾಟೀಲ, ವಿ.ಎಸ್‌.ಶಾಂತಗೇರಿ, ಸಿ.ಕೆ. ಕಮ್ಮಾರ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next