Advertisement

ಪ್ರತಿ ರೈತನಿಂದ 40 ಕ್ವಿಂಟಾಲ್‌ ಭತ್ತ ಖರೀದಿ

03:29 PM Nov 30, 2018 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರದ ನಿರ್ದೇಶನದಂತೆ 2017-18ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್‌ ಸಾಮಾನ್ಯ ಭತ್ತ 1,750 ಹಾಗೂ ಗ್ರೇಡ್‌-ಎ ಭತ್ತ 1,770 ರೂ. ದರದಲ್ಲಿ ನೋಂದಾಯಿತ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ತಿಳಿಸಿದ್ದಾರೆ.

Advertisement

ಗುರುವಾರ, ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಟಾಸ್ಕ್ ಫೋರ್ಸ್‌ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಕ್ಕೆ 2 ಲಕ್ಷ ಮೆಟ್ರಿಕ್‌ ಟನ್‌ ಭತ್ತ ಖರೀದಿ ಗುರಿ ನೀಡಿದೆ. ಪ್ರತಿಯೊಬ್ಬ ರೈತರಿಂದ 40 ಕ್ವಿಂಟಾಲ್‌ ಮಾತ್ರ ಖರೀದಿಸಲಾಗುತ್ತದೆ. ರೈತರು ಡಿ. 5ರಿಂದ 15ರ ವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಾಯಿಸಿದ ರೈತರಿಂದ ಡಿ. 16 ರಿಂದ ಭತ್ತ ಖರೀದಿಸಲಾಗುವುದು ಎಂದರು.

ಭತ್ತ ಮಾರಾಟ ಮಾಡುವ ರೈತರು ಸಂಬಂಧಿಸಿದ ಪಹಣಿ ತರಬೇಕು. ಆ ಪಹಣಿಯಲ್ಲಿ ಭತ್ತ… ಎಂಬುದಾಗಿ ನಮೂದಾಗಿರಬೇಕು. ಒಂದು ವೇಳೆ ಪಹಣಿಯಲ್ಲಿ ನಮೂದಾಗದೇ ಇದ್ದಲ್ಲಿ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಯಿಂದ ದೃಢೀಕರಣ ಪತ್ರ ತರಬೇಕು. ಆಧಾರ್‌ ಕಾರ್ಡ್‌, ಭತ್ತ ಖರೀದಿಯ ಹಣ ಜಮಾ ಮಾಡಲು ಬ್ಯಾಂಕ್‌ ಪಾಸ್‌ಬುಕ್‌ ವಿವರ ನೀಡಬೇಕು ಎಂದು ತಿಳಿಸಿದರು.
 
ಬೆಂಬಲ ಬೆಲೆ ಯೋಜನೆಯಡಿ ಭತ್ತ ಮಾರಾಟ ಮಾಡಲು ಇಚ್ಛಿಸುವ ರೈತರು ಇಲಾಖಾ ವೆಬ್‌ಸೈಟ್‌ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಅದಕ್ಕಾಗಿ ಸಂಗ್ರಹಣಾ ಏಜೆನ್ಸಿ ಆಯಾಯ ತಾಲೂಕು ಕೇಂದ್ರಗಳ ಎಪಿಎಂಸಿ ಪ್ರಾಂಗಣದಲ್ಲಿರುವ ಆಹಾರ ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ (ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ)ಗಳಲ್ಲಿ ರೈತರ ನೋಂದಣಿಗೆ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಡಾ| ಬಿ.ಟಿ. ಮಂಜುನಾಥ್‌ ಮಾತನಾಡಿ, ಸರ್ಕಾರ ಭತ್ತ ಖರೀದಿಗೆ 3 ಏಜೆನ್ಸಿ ಗೊತ್ತುಪಡಿಸಿದೆ. ಅದರಂತೆ ದಾವಣಗೆರೆ ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಸಂಗ್ರಹಣಾ ಏಜೆನ್ಸಿಯಾಗಿದೆ. ಜಿಲ್ಲೆಯಲ್ಲಿ ಕಾರ್ಯನಿರತರಾಗಿರುವ ಅಕ್ಕಿ ಗಿರಣಿಗಳನ್ನು ಭತ್ತ ಖರೀದಿ ಕಾರ್ಯಕ್ಕೆ ನೋಂದಾಯಿಸಿಕೊಂಡು ಅಕ್ಕಿ ಗಿರಣಿಗಳ ಹಲ್ಲಿಂಗ್‌ ಹಾಗೂ ಶೇಖರಣಾ ಸಾಮರ್ಥ್ಯಕ್ಕನುಗುಣವಾಗಿ ಸಂಗ್ರಹಣೆ ಮಾಡಲಾಗುವುದು. ನೋಂದಾಯಿಸಿಕೊಂಡ ರೈತರಿಗೆ ಇಲಾಖೆಯಿಂದ ಕಳುಹಿಸಲಾಗುವ ಎಸ್‌ ಎಂಎಸ್‌ ಆಧರಿಸಿ ಸಂಬಂಧಿಸಿದ ಅಕ್ಕಿ ಗಿರಣಿಗೆ ಭತ್ತದ ಮಾದರಿ (ಸ್ಯಾಂಪಲ್‌)ಗಳನ್ನು ನೀಡಬೇಕಾಗುತ್ತದೆ ಎಂದರು.

ಅಕ್ಕಿ ಗಿರಣಿ ಮಾಲೀಕರು ರೈತರಿಂದ ಸ್ವೀಕರಿಸಿದ ಭತ್ತದ ಮಾದರಿಗಳನ್ನು ಸಂಗ್ರಹಣಾ ಏಜೆನ್ಸಿಗಳಿಂದ ನೇಮಕವಾಗುವ ಗುಣಮಟ್ಟ ಪರಿಶೀಲನಾ ಅಧಿಕಾರಿಯ ಮೂಲಕ ಗುಣಮಟ್ಟ ದೃಢೀಕರಣ ಪಡೆದ ನಂತರವೇ ಅಕ್ಕಿ ಗಿರಣಿಯವರು ಭತ್ತ ಖರೀದಿಸಿ, ಸಂಗ್ರಹಿಸಬೇಕಿದೆ. ರೈತರು ತಮ್ಮದೇ ಚೀಲಗಳಲ್ಲಿ ಭತ್ತ ತಂದಲ್ಲಿ ಪ್ರತಿ ಚೀಲಕ್ಕೆ 6 ರೂಪಾಯಿ ನೀಡಲಾಗುವುದು ಎಂದು ತಿಳಿಸಿದರು.

Advertisement

ಅಕ್ಕಿ ಗಿರಣಿ ಮಾಲೀಕರಿಂದ ಭತ್ತದ ಖರೀದಿ ವಿವರ ಲಭ್ಯವಾದ ತಕ್ಷಣ ಏಜೆನ್ಸಿ ವತಿಯಿಂದ ಭತ್ತ ಕೊಟ್ಟವರಿಗೆ 3 ದಿನಗಳ ಒಳಗಾಗಿ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಮಾಡಲಾಗುವುದು. ಹೆಚ್ಚಿನ ವಿವರಕ್ಕೆ ಆಹಾರ ನಿಮಗದ ಜಿಲ್ಲಾ ವ್ಯವಸ್ಥಾಪಕ ಮುನೀರ್‌ ಬಾಷಾ (83106-49796) ಅವರನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಬಿ. ಮುದಗಲ್‌, ಆಹಾರ ನಿಮಗದ ಜಿಲ್ಲಾ ವ್ಯವಸ್ಥಾಪಕ ಮುನೀರ್‌ ಬಾಷಾ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next